India T20 Squad: ಟಿ20 ವಿಶ್ವಕಪ್ ತಂಡದಲ್ಲಿ ಶಮಿಗೆ ಚಾನ್ಸ್ ಸಿಗದಿರಲು ಇದುವೇ ಕಾರಣ..!
India Squad For T20 World Cup 2022: ಏಷ್ಯಾಕಪ್ನಿಂದಲೂ ಕೈ ಬಿಡಲಾಗಿತ್ತು. ಇತ್ತ ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲನುಭವಿಸುತ್ತಿದ್ದಂತೆ ಮೊಹಮ್ಮದ್ ಶಮಿಗೆ ಮತ್ತೆ ತಂಡದಲ್ಲಿ ಚಾನ್ಸ್ ನೀಡಬೇಕೆಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು.
ಏಷ್ಯಾಕಪ್ ಸೋಲಿಗೆ ಟೀಮ್ ಇಂಡಿಯಾದ (Team India) ಕಳಪೆ ಬೌಲಿಂಗ್ ಲೈನಪ್ ಕಾರಣ ಎಂಬ ಟೀಕೆಗಳು ವ್ಯಕ್ತವಾಗಿತ್ತು. ಅದರಲ್ಲೂ ತಂಡದ ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಹೊರಗುಳಿದಿದ್ದರೂ, ಅನುಭವಿ ವೇಗಿ ಮೊಹಮ್ಮದ್ ಶಮಿಗೆ (Mohammed Shami) ಸ್ಥಾನ ನೀಡದಿರುವ ಬಗ್ಗೆ ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಏಕೆಂದರೆ ಐಪಿಎಲ್ 2022 ರಲ್ಲಿ ಮೊಹಮ್ಮದ್ ಶಮಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದರು. ಟೂರ್ನಿಯುದ್ದಕ್ಕೂ ಕರಾರುವಾಕ್ ದಾಳಿ ಸಂಘಟಿಸಿದ್ದ ಶಮಿ 20 ವಿಕೆಟ್ ಕಬಳಿಸಿ ಗುಜರಾತ್ ಟೈಟಾನ್ಸ್ ತಂಡವು ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಾಗ್ಯೂ ಅವರನ್ನು ಸೌತ್ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಗಳಿಗೆ ಆಯ್ಕೆ ಮಾಡಿರಲಿಲ್ಲ.
ಹಾಗೆಯೇ ಏಷ್ಯಾಕಪ್ನಿಂದಲೂ ಕೈ ಬಿಡಲಾಗಿತ್ತು. ಇತ್ತ ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲನುಭವಿಸುತ್ತಿದ್ದಂತೆ ಮೊಹಮ್ಮದ್ ಶಮಿಗೆ ಮತ್ತೆ ತಂಡದಲ್ಲಿ ಚಾನ್ಸ್ ನೀಡಬೇಕೆಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು. ಆದರೆ ಇದೀಗ ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ತಂಡಕ್ಕೆ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಅವರ ಆಗಮನ ಖಚಿತವಾಗಿದೆ.
ಇನ್ನು ಏಷ್ಯಾಕಪ್ನಲ್ಲಿ ಉತ್ತಮ ದಾಳಿ ಸಂಘಟಿಸಿದ್ದ ಭುವನೇಶ್ವರ್ ಕುಮಾರ್ ಕೂಡ ತಂಡದಲ್ಲಿದ್ದಾರೆ. ಜೊತೆಗೆ ಎಡಗೈ ವೇಗಿಯಾಗಿ ಅರ್ಷದೀಪ್ ಸಿಂಗ್ ಕೂಡ ಸ್ಥಾನ ಪಡೆದಿದ್ದಾರೆ. ಆದರೆ ಮೊಹಮ್ಮದ್ ಶಮಿಗೆ ಈ ಬಾರಿ ಚಾನ್ಸ್ ನೀಡಲಾಗಿಲ್ಲ ಎಂಬುದು ವಿಶೇಷ.
ಏಕೆಂದರೆ ತಂಡದಲ್ಲಿ ನಾಲ್ವರು ವೇಗಿಗಳನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ಹೆಚ್ಚುವರಿ ವೇಗಿಯಾಗಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಇದ್ದಾರೆ. ಹೀಗಾಗಿ ಮೊಹಮ್ಮದ್ ಶಮಿ ಅವರನ್ನು ಪೂರ್ಣ ತಂಡಕ್ಕೆ ಆಯ್ಕೆ ಮಾಡಿಲ್ಲ. ಇದಾಗ್ಯೂ ಮೀಸಲು ಆಟಗಾರರ ಪಟ್ಟಿಯಲ್ಲಿ ಮೊಹಮ್ಮದ್ ಶಮಿಗೆ ಸ್ಥಾನ ನೀಡಲಾಗಿದೆ.
ಅಂದರೆ ಟಿ20 ವಿಶ್ವಕಪ್ಗಾಗಿ ಆಯ್ಕೆ ಮಾಡಲಾದ 15 ಸದಸ್ಯರ ಬಳಗದಲ್ಲಿ ಶಮಿ ಸ್ಥಾನ ಪಡೆದಿಲ್ಲ. ಬದಲಾಗಿ ಮೀಸಲು ಆಟಗಾರರ ಪಟ್ಟಿಯಲ್ಲಿ ಅವರ ಹೆಸರಿದೆ. ಒಂದು ವೇಳೆ 15 ಸದಸ್ಯರ ಬಳಗದಿಂದ ವೇಗಿಯೊಬ್ಬರು ಹೊರಬಿದ್ದರೆ ಮಾತ್ರ ಮೊಹಮ್ಮದ್ ಶಮಿಗೆ ಚಾನ್ಸ್ ಸಿಗಬಹುದು.
ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ, ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ವೇಗಿಗಳಾಗಿ ತಂಡದಲ್ಲಿರುವ ಕಾರಣ ಶಮಿಯನ್ನು ಪ್ರಮುಖ ಬಳಗಕ್ಕೆ ಆಯ್ಕೆ ಮಾಡಿಲ್ಲ ಎಂದು ತಿಳಿದು ಬಂದಿದೆ. ಇದಾಗ್ಯೂ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ದದ ಸರಣಿಗಾಗಿ ಆಯ್ಕೆ ಮಾಡಲಾದ ತಂಡದಲ್ಲಿ ಶಮಿಗೆ ಸ್ಥಾನ ನೀಡಲಾಗಿದೆ. ಹೀಗಾಗಿ ಈ ಎರಡು ಸರಣಿಗಳಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದರೆ, ಟಿ20 ವಿಶ್ವಕಪ್ಗಾಗಿ ಆಯ್ಕೆ ಮಾಡಲಾದ ಶಮಿಗೆ ಅವಕಾಶ ಕಲ್ಪಿಸಿದರೂ ಅಚ್ಚರಿಪಡಬೇಕಿಲ್ಲ.
ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.
Published On - 6:09 pm, Mon, 12 September 22