IND vs ZIM: ‘ವೈಫಲ್ಯದ ಭಯವಿದ್ದರೆ’; ತಂಡದ ಆಟಗಾರರಿಗೆ ಶ್ರೇಯಸ್ ಕಿವಿಮಾತು

Shreyas Iyer's India T20 Captaincy: ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ಟಿ20 ತಂಡ ಸತತ 7 ಸೋಲುಗಳ ನಂತರ ಜಿಂಬಾಬ್ವೆ ಪ್ರವಾಸಕ್ಕೆ ಸಿದ್ಧವಾಗಿದೆ. ಅಯ್ಯರ್, ಇಂಗ್ಲೆಂಡ್ ಪ್ರವಾಸದ ಅನುಭವದಿಂದ ಪಾಠ ಕಲಿತಿದ್ದೇವೆ ಎಂದಿದ್ದು, ಯುವ ಆಟಗಾರರು ಹೊರಗಿನ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಭಯವಿಲ್ಲದೆ ಆಡುವಂತೆ ಸಲಹೆ ನೀಡಿದ್ದಾರೆ. ಜಿಂಬಾಬ್ವೆ ಸರಣಿಯ ಮೂಲಕ ತಂಡ ಆತ್ಮವಿಶ್ವಾಸ ಮರಳಿ ಪಡೆಯುವ ಗುರಿ ಹೊಂದಿದೆ.

IND vs ZIM: ‘ವೈಫಲ್ಯದ ಭಯವಿದ್ದರೆ’; ತಂಡದ ಆಟಗಾರರಿಗೆ ಶ್ರೇಯಸ್ ಕಿವಿಮಾತು
Shreyas Iyer
Image Credit source: Sportskeeda

Updated on: Jul 22, 2026 | 8:09 PM

ಶ್ರೇಯಸ್ ಅಯ್ಯರ್ (Shreyas Iyer) ಭಾರತ ಟಿ20 ತಂಡದ ನಾಯಕನಾದ ಬಳಿಕ ತಂಡ 7 ಪಂದ್ಯಗಳನ್ನಾಡಿದೆ. ಆದರೆ ಈ 7 ಪಂದ್ಯಗಳಲ್ಲೂ ತಂಡಕ್ಕೆ ಒಂದೇ ಒಂದು ಗೆಲುವು ಸಿಕ್ಕಿಲ್ಲ. ಶ್ರೇಯಸ್ ನಾಯಕನಿಗೆ ಮೊದಲಿಗೆ ಐರ್ಲೆಂಡ್ ವಿರುದ್ಧ ಕಣಕ್ಕಿಳಿದಿದ್ದರು. ಆದರೆ ಐರ್ಲೆಂಡ್, ಟೀಂ ಇಂಡಿಯಾಕ್ಕೆ ಮರ್ಮಾಘಾತ ನೀಡಿ ಸರಣಿಯ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತು. ಈ ಆಘಾತದ ಜೊತೆಗೆ ಇಂಗ್ಲೆಂಡ್‌ ಪ್ರವಾಸ ಮಾಡಿದ ಟೀಂ ಇಂಡಿಯಾಕ್ಕೆ ಆಂಗ್ಲರು ಮತ್ತೊಂದು ಹೊಡೆತ ನೀಡಿದರು. ಇದೀಗ ಶ್ರೇಯಸ್ ಅಯ್ಯರ್ ಪಡೆ ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನು ಆಡಲು ಜಿಂಬಾಬ್ವೆಗೆ ತೆರಳಿದೆ. ಮೊದಲ ಟಿ20 ಪಂದ್ಯ ಈ ತಿಂಗಳ 23 ರಂದು ನಡೆಯಲಿದೆ. ಆದಾಗ್ಯೂ, ಈ ಮೊದಲ ಪಂದ್ಯಕ್ಕೂ ಮೊದಲು, ನಾಯಕ ಶ್ರೇಯಸ್ ಅಯ್ಯರ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಜಿಂಬಾಬ್ವೆಯ ಮೊದಲ ಪ್ರವಾಸವಾಗಿದೆ

ಇಂಗ್ಲೆಂಡ್‌ ಪ್ರವಾಸದಲ್ಲಿನ ಕಹಿ ಅನುಭವಗಳ ಮಾತನಾಡಿದ ಶ್ರೇಯಸ್, ‘ಇಂಗ್ಲೆಂಡ್ ವಿರುದ್ಧದ ತಮ್ಮ ಪ್ರದರ್ಶನ ಅಷ್ಟೊಂದು ಉತ್ತಮವಾಗಿಲ್ಲ, ಆದರೆ ಆ ಸೋಲುಗಳಿಂದ ನಾವು ಬಹಳಷ್ಟು ಸಕಾರಾತ್ಮಕ ವಿಷಯಗಳನ್ನು ಕಲಿತಿದ್ದೇವೆ. ತಂಡದ ಅನೇಕ ಆಟಗಾರರಿಗೆ ಇದು ಜಿಂಬಾಬ್ವೆಯ ಮೊದಲ ಪ್ರವಾಸವಾಗಿದೆ. ಸಾಧ್ಯವಾದಷ್ಟು ಬೇಗ ಅವರು ಇಲ್ಲಿನ ಪರಿಸ್ಥಿತಿಗೆ ಒಗ್ಗಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಹೊರಗಿನ ಟೀಕೆಗಳನ್ನು ಲೆಕ್ಕಿಸದೆ ಯುವ ಆಟಗಾರರು ಆತ್ಮವಿಶ್ವಾಸದಿಂದ ಆಡುವಂತೆ ಶ್ರೇಯಸ್ ಅಯ್ಯರ್ ಸಲಹೆ ನೀಡಿದ್ದು, ‘ವೈಫಲ್ಯದ ಭಯವಿದ್ದರೆ, ಆಟಗಾರರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆಡುತ್ತಾರೆ. ಭಯವಿಲ್ಲದಿದ್ದಾಗ ಮಾತ್ರ ನೀವು ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ಹೊರಗಿನ ಜನರು ಏನು ಹೇಳುತ್ತಿದ್ದಾರೆ ಎಂಬುದನ್ನು ನಾವು ಗಮನಿಸುವ ಅಗತ್ಯವಿಲ್ಲ. ನಾವು ವರ್ತಮಾನದಲ್ಲಿ ಬದುಕಬೇಕು ಮತ್ತು ತಂಡವಾಗಿ ಉತ್ತಮ ಕ್ರಿಕೆಟ್ ಆಡಬೇಕು ಎಂದಿದ್ದಾರೆ.

ತಂಡವು ಬಲಿಷ್ಠವಾಗುತ್ತದೆ

ನಿರಂತರ ವಿದೇಶಿ ಪ್ರವಾಸಗಳು ಆಟಗಾರರಿಗೆ ಸಾಕಷ್ಟು ಅನುಭವವನ್ನು ನೀಡಿವೆ ಎಂದಿರುವ ಅಯ್ಯರ್,‘ಫಲಿತಾಂಶಗಳು ನಮ್ಮ ರೀತಿಯಲ್ಲಿ ಹೋಗದಿದ್ದರೂ, ಅದು ತಂಡವನ್ನು ಎಂದಿಗಿಂತಲೂ ಹತ್ತಿರಕ್ಕೆ ತಂದಿದೆ. ಮುಂದೆ ಒಂದು ಘಟಕವಾಗಿ ಹೇಗೆ ಆಡಬೇಕೆಂದು ನಾವು ನಿರಂತರವಾಗಿ ಚರ್ಚಿಸುತ್ತಿದ್ದೇವೆ. ಈ ಸವಾಲಿನ ಅವಧಿಯನ್ನು ನಾವು ಬೇಗ ಜಯಿಸಿದಷ್ಟೂ ತಂಡವು ಬಲಿಷ್ಠವಾಗುತ್ತದೆ’ ಎಂದಿದ್ದಾರೆ. ಇದರ ಜೊತೆಗೆ ಜಿಂಬಾಬ್ವೆ ತಂಡವನ್ನು ಹೊಗಳಿದ ಅಯ್ಯರ್, ‘ತಂಡವು ಐಪಿಎಲ್ ಅನುಭವ ಹೊಂದಿರುವ ಹಲವಾರು ಆಟಗಾರರನ್ನು ಹೊಂದಿದ್ದು, ಪಂದ್ಯವನ್ನು ಕಷ್ಟಕರವಾಗಿಸಬಹುದು’ ಎಂದಿದ್ದಾರೆ.

ಇನ್ನು ಇಂಗ್ಲೆಂಡ್ ಪ್ರವಾಸದಲ್ಲಿ ನಿರೀಕ್ಷೆಯಂತೆ ಪ್ರದರ್ಶನ ನೀಡಲು ವಿಫಲರಾದ 15 ವರ್ಷದ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಅಯ್ಯರ್, ‘ಎಲ್ಲಾ ಯುವ ಆಟಗಾರರು ಅಭ್ಯಾಸ ಮಾಡಿದ್ದಾರೆ. ಟಿ20 ಸರಣಿಯ ನಂತರ ಅವರಿಗೆ ಒಳ್ಳೆಯ ಸಮಯ ಸಿಕ್ಕಿತು. ವೈಭವ್ ಕೂಡ ತನ್ನ ತಪ್ಪುಗಳ ಮೇಲೆ ಕೆಲಸ ಮಾಡಿರಬೇಕು, ಆದ್ದರಿಂದ ನಾನು ಅವರಿಗೆ ಹೆಚ್ಚಿನ ಸಲಹೆ ನೀಡುವ ಅಗತ್ಯವಿಲ್ಲ’ ಎಂದರು.

IND vs ENG: ‘ನಾನು ಸಂತೋಷವಾಗಿದ್ದೇನೆ’; ಹೀನಾಯ ಸೋಲಿನ ನಂತರ ಶ್ರೇಯಸ್ ಹೇಳಿದ್ದಿದು

ಮೂರು ಪಂದ್ಯಗಳ ಟಿ20 ಸರಣಿಯು ಈ ತಿಂಗಳ 23 ರಿಂದ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಪ್ರಾರಂಭವಾಗಲಿದೆ. ಈ ಸರಣಿಯ ಎಲ್ಲಾ ಮೂರು ಪಂದ್ಯಗಳು ಒಂದೇ ಸ್ಥಳದಲ್ಲಿ ನಡೆಯಲಿವೆ. ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದ ಯುವ ಭಾರತೀಯ ತಂಡವು ಈ ಸರಣಿಯಲ್ಲಿ ಜಯಗಳಿಸುವ ಮೂಲಕ ಆತ್ಮವಿಶ್ವಾಸವನ್ನು ಮರಳಿ ಪಡೆಯುವ ಗುರಿಯನ್ನು ಹೊಂದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:06 pm, Wed, 22 July 26

Follow Us