ಭಾರತ ಟಿ20 ತಂಡ ಪ್ರಕಟ: ಮೂವರ ಹೊಸ ಎಂಟ್ರಿ!

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20ನ ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಝಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಜುಲೈ 23 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ ಮೂರು ಪಂದ್ಯಗಳನ್ನು ಆಡಲಿದೆ. ಈ ಸರಣಿಗಾಗಿ 15 ಸದಸ್ಯರುಗಳ ಬಲಿಷ್ಠ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ.

ಭಾರತ ಟಿ20 ತಂಡ ಪ್ರಕಟ: ಮೂವರ ಹೊಸ ಎಂಟ್ರಿ!
Team India

Updated on: Jul 07, 2026 | 8:59 AM

ಝಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ಟಿ20 ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಬಲಿಷ್ಠ ಟೀಮ್ ಇಂಡಿಯಾವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದು, ತಿಲಕ್ ವರ್ಮಾ ಅವರಿಗೆ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ತಂಡದಿಂದ ಹಿರಿಯ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಹಾಗೆಯೇ ಮತ್ತೋರ್ವ ವಿಕೆಟ್ ಕೀಪರ್ ಬ್ಯಾಟರ್​ ಪ್ರಭ್​ಸಿಮ್ರಾನ್​ ಸಿಂಗ್​ಗೆ ಅವಕಾಶ ನೀಡಲಾಗಿದೆ.

ಮೂವರಿಗೆ ಚೊಚ್ಚಲ ಅವಕಾಶ!

ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ ಇತ್ತೀಚೆಗಷ್ಟೇ ಅತಿ ಕಿರಿಯ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿ ಇತಿಹಾಸ ನಿರ್ಮಿಸಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿ ಝಿಂಬಾಬ್ವೆ ಪ್ರವಾಸದಲ್ಲೂ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದರೊಂದಿಗೆ ದೇಶಿ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಮೂವರು ಯುವ ಆಟಗಾರರಿಗೆ ಮೊದಲ ಬಾರಿಗೆ ಭಾರತ ಟಿ20 ತಂಡಕ್ಕೆ ಚೊಚ್ಚಲ ಕರೆ ಬಂದಿದೆ.

ಪಂಜಾಬ್ ಕಿಂಗ್ಸ್ ಪರ ಅಬ್ಬರಿಸಿದ್ದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟರ್ ಪ್ರಭ್‌ಸಿಮ್ರನ್ ಸಿಂಗ್ ಜೊತೆಗೆ, ದೇಶಿ ಟೂರ್ನಿಗಳಲ್ಲಿ ವಿಕೆಟ್ ಬೇಟೆಯಾಡಿದ್ದ ವೇಗಿಗಳಾದ ಯಶ್ ಠಾಕೂರ್ ಹಾಗೂ ಅಶೋಕ್ ಶರ್ಮಾ ಟೀಮ್ ಇಂಡಿಯಾ ಜೆರ್ಸಿ ಧರಿಸಲು ಸಜ್ಜಾಗಿದ್ದಾರೆ.

ಮಯಾಂಕ್ ಯಾದವ್ ಕಂಬ್ಯಾಕ್:

ಗಾಯದ ಸಮಸ್ಯೆಯಿಂದಾಗಿ ದೀರ್ಘಕಾಲ ಕ್ರಿಕೆಟ್ ಮೈದಾನದಿಂದ ದೂರವಿದ್ದ, ಗಂಟೆಗೆ 150+ ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವಿರುವ ಎಕ್ಸ್‌ಪ್ರೆಸ್ ವೇಗಿ ಮಯಂಕ್ ಯಾದವ್ ಹಾಗೂ ಮತ್ತೊಬ್ಬ ಸ್ಫೋಟಕ ಫಿನಿಶರ್ ರಿಂಕು ಸಿಂಗ್ ತಂಡಕ್ಕೆ ಮರಳಿದ್ದಾರೆ. ಇವರೊಂದಿಗೆ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಮಿಂಚಿದ್ದ ಆಲ್‌ರೌಂಡರ್ ಹರ್ಷ್ ದುಬೆ ಕೂಡ ತಂಡದಲ್ಲಿದ್ದಾರೆ. ಅದರಂತೆ ಝಿಂಬಾಬ್ವೆ ಸರಣಿಗೆ ಟೀಮ್ ಇಂಡಿಯಾ ಈ ಕೆಳಗಿನಂತಿದೆ.

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ , ಇಶಾನ್ ಕಿಶನ್ (ವಿಕೆಟ್ ಕೀಪರ್), ಪ್ರಭ್‌ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ ಮತ್ತು ಮಯಾಂಕ್ ಯಾದವ್.

ಭಾರತ ಮತ್ತು ಝಿಂಬಾಬ್ವೆ ಟಿ20 ಸರಣಿ ವೇಳಾಪಟ್ಟಿ:

  1. ಜುಲೈ 23 (ಗುರುವಾರ): ಮೊದಲನೇ ಟಿ20 ಪಂದ್ಯ.
  2. ಜುಲೈ 25 (ಶನಿವಾರ): ಎರಡನೇ ಟಿ20 ಪಂದ್ಯ.
  3. ಜುಲೈ 26 (ಭಾನುವಾರ): ಮೂರನೇ ಟಿ20 ಪಂದ್ಯ.

ಇದನ್ನೂ ಓದಿ: ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಕನಸು ಭಗ್ನ

ಈ ಸರಣಿಯ ಎಲ್ಲಾ ಮೂರು ಪಂದ್ಯಗಳು ಝಿಂಬಾಬ್ವೆಯ ಐತಿಹಾಸಿಕ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಭಾರತೀಯ ಕಾಲಮಾನ (IST) ಸಂಜೆ 4:30ಕ್ಕೆ ಆರಂಭವಾಗಲಿವೆ.

Follow Us