
ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ (India U19 vs Afghanistan U19) ನಡುವಿನ 2026 ರ ಅಂಡರ್-19 ಏಕದಿನ ವಿಶ್ವಕಪ್‌ನ ಎರಡನೇ ಸೆಮಿಫೈನಲ್ (U19 World Cup 2026) ಪಂದ್ಯದಲ್ಲಿ ಆಯುಷ್ ಮ್ಹಾತ್ರೆ ನಾಯಕತ್ವದ ಭಾರತ ಯುವ ಪಡೆ ಅಫ್ಘಾನಿಸ್ತಾನ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿ ಸತತ 6ನೇ ಬಾರಿಗೆ ಅಂಡರ್ 19 ವಿಶ್ವಕಪ್ ಫೈನಲ್ಗೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಇಬ್ಬರ ಶತಕದ ನೆರವಿನಿಂದ 310 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ ಇನ್ನು 53 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು. ಇದರ ಜೊತೆಗೆ ಅಂಡರ್ 19 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಅತಿದೊಡ್ಡ ಗುರಿ ಬೆನ್ನಟ್ಟಿದ ದಾಖಲೆಯನ್ನು ಭಾರತ ತಂಡ ಬರೆಯಿತು.
ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿತು. ತಂಡದ ಪರ ಫೈಸಲ್ ಶಿನೋಜಾಡಾ 93 ಎಸೆತಗಳಲ್ಲಿ 110 ರನ್‌ಗಳ ಅದ್ಭುತ ಶತಕ ಬಾರಿಸಿದರೆ, ಉಜೈರುಲ್ಲಾ ನಯಾಜೈ ಕೂಡ ಅಜೇಯ 101 ರನ್‌ಗಳ ಇನ್ನಿಂಗ್ಸ್ ಆಡಿದರು. ಇಬ್ಬರೂ ಮೂರನೇ ವಿಕೆಟ್‌ಗೆ 208 ರನ್‌ಗಳ ಅದ್ಭುತ ಪಾಲುದಾರಿಕೆ ಹಂಚಿಕೊಂಡರು. ಇವರಿಬ್ಬರ ಶತಕದಿಂದಾಗಿ ಭಾರತಕ್ಕೆ 310 ರನ್‌ಗಳ ಗುರಿ ಸಿಕ್ಕಿತು.
ಈ ಗುರಿ ಬೆನ್ನಟ್ಟಿದ ಭಾರತ ಕೂಡ ಭರ್ಜರಿ ಆರಂಭವನ್ನೇ ಪಡೆಯಿತು. ಆರಂಭಿಕ ವೈಭವ್ ಸೂರ್ಯವಂಶಿ 33 ಎಸೆತಗಳಲ್ಲಿ 68 ರನ್ ಬಾರಿಸಿ, ಮೊದಲ ವಿಕೆಟ್‌ಗೆ 90 ರನ್ ಸೇರಿಸಿದರು. ನಂತರ ನಾಯಕ ಆಯುಷ್ ಮ್ಹಾತ್ರೆ 59 ಎಸೆತಗಳಲ್ಲಿ 62 ರನ್‌ಗಳ ಇನ್ನಿಂಗ್ಸ್ ಆಡಿ ತಮ್ಮ ಫಾರ್ಮ್ ಕಂಡುಕೊಂಡರು. ಇತ್ತ ಆರಂಭಿಕ ಆಟಗಾರ ಆರನ್ ಜಾರ್ಜ್ ಅದ್ಭುತ ಶತಕ ಬಾರಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು. ಆರನ್ ಜಾರ್ಜ್ 104 ಎಸೆತಗಳಲ್ಲಿ 115 ರನ್ ಬಾರಿಸಿದರೆ, ತಮ್ಮ ಇನ್ನಿಂಗ್ಸ್‌ನಲ್ಲಿ 15 ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ವಿಹಾನ್ ಮಲ್ಹೋತ್ರಾ ಕೂಡ ಕೊನೆಯಲ್ಲಿ ಉತ್ತಮ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ ಭಾರತ 41.1 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು.
U19 World Cup: ಸೆಮಿಫೈನಲ್‌ನಲ್ಲಿ ಸಿಡಿಲಬ್ಬರದ ಅರ್ಧಶತಕ ಬಾರಿಸಿದ ವೈಭವ್ ಸೂರ್ಯವಂಶಿ
ಇದರೊಂದಿಗೆ ಭಾರತ ತಂಡ 10ನೇ ಬಾರಿಗೆ ಅಂಡರ್ 19 ವಿಶ್ವಕಪ್ ಫೈನಲ್ ತಲುಪಿದೆ. ಆರನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ. ಫೆಬ್ರವರಿ 6 ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತ ಸತತ ಆರನೇ ಬಾರಿಗೆ ಫೈನಲ್‌ನಲ್ಲಿ ಆಡುತ್ತಿದ್ದರೆ, ಇಂಗ್ಲೆಂಡ್ ತಂಡ 28 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸುವ ಇರಾದೆಯಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:23 pm, Wed, 4 February 26