
ಅಫ್ಘಾನಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಬೃಹತ್ ಮೊತ್ತ ಪೇರಿಸಿ ಪ್ರಥಮ ಇನಿಂಗ್ಸ್ ಅಂತ್ಯಗೊಳಿಸಿದೆ. ಮುಲ್ಲನ್ಪುರ್ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ಒದಗಿಸಿದ್ದರು. ಆರಂಭದಿಂದಲೇ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ್ದ ಈ ಜೋಡಿಯು ಮೊದಲ ವಿಕೆಟ್ಗೆ 41 ರನ್ಗಳ ಜೊತೆಯಾಟವಾಡಿದ್ದರು. ಈ ಹಂತದಲ್ಲಿ 24 ರನ್ಗಳಿಸಿದ್ದ ಜೈಸ್ವಾಲ್ ವಿಕೆಟ್ ಕೀಪರ್ಗೆ ಕ್ಯಾಚಿತ್ತು ನಿರ್ಗಮಿಸಿದರು.
ಆ ಬಳಿಕ ಜೊತೆಗೂಡಿದ ಕೆಎಲ್ ರಾಹುಲ್ ಹಾಗೂ ಸಾಯಿ ಸುದರ್ಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಇದರ ನಡುವೆ 104 ಎಸೆತಗಳಲ್ಲಿ 81 ರನ್ ಬಾರಿಸಿದ ಸಾಯಿ ಸುದರ್ಶನ್ ಬಿರುಸಿನ ಬ್ಯಾಟಿಂಗ್ಗೆ ಮುಂದಾಗಿ ಕ್ಯಾಚ್ ನೀಡಿದರು.
ಇದಾಗ್ಯೂ ಮತ್ತೊಂದೆಡೆ ಕ್ರೀಸ್ ಕಚ್ಚಿ ಆಡಿದ ಕೆಎಲ್ ರಾಹುಲ್ 165 ಎಸೆತಗಳಲ್ಲಿ 11 ಫೋರ್ಗಳೊಂದಿಗೆ ಶತಕ ಸಿಡಿಸಿದರು. ಅದರೆ ಶತಕದ ಬೆನ್ನಲ್ಲೇ ರಾಹಲ್ (100) ಕೂಡ ಕ್ಯಾಚ್ ನೀಡಿ ನಿರ್ಗಮಿಸಿದರು.
ರಾಹುಲ್ ನಿ್ರ್ಗಮನದ ಬಳಿಕ ಇನಿಂಗ್ಸ್ ಕಟ್ಟುವ ಜವಾಬ್ದಾರಿಯನ್ನು ಶುಭ್ಮನ್ ಗಿಲ್ ಹಾಗೂ ರಿಷಭ್ ಪಂತ್ ಹೆಗಲೇರಿಸಿಕೊಂಡರು. ಅದರಂತೆ ಗಿಲ್ 138 ಎಸೆತಗಳಲ್ಲಿ ಸೆಂಚುರಿ ಪೂರೈಸಿದರೆ, ರಿಷಭ್ ಪಂತ್ 70 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.
ಆ ಬಳಿಕ ಬಂದ ವಾಅಷಿಂಗ್ಟನ್ ಸುಂದರ್ ಅಜೇಯ 52 ರನ್ ಬಾರಿಸಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನೊಂದಿಗೆ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 8 ವಿಕೆಟ್ ಕಳೆದುಕೊಂಡು 564 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ.
ಅಫ್ಘಾನಿಸ್ತಾನ್ ಪರ ಉತ್ತಮ ದಾಳಿ ಸಂಘಟಿಸಿದ ಮೊಹಮ್ಮದ್ ಸಲೀಮ್ 27 ಓವರ್ಗಳಲ್ಲಿ 140 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಭಾರತ (ಪ್ಲೇಯಿಂಗ್ XI): ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭ್ಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಮಾನವ್ ಸುತಾರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: ವಿಶ್ವ ದಾಖಲೆ: ಕೇವಲ 5 ಎಸೆತಗಳಲ್ಲಿ ಮುಗಿದ ಟಿ20 ಪಂದ್ಯ
ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ಸೇದಿಕುಲ್ಲಾ ಅಟಲ್, ರಹಮಾನುಲ್ಲಾ ಗುರ್ಬಾಝ್, ಅಬ್ದುಲ್ ಮಲಿಕ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಫ್ಸರ್ ಝಜೈ(ವಿಕೆಟ್ ಕೀಪರ್), ಅಝ್ಮತುಲ್ಲಾ ಒಮರ್ಝಾಹಿ, ಶರಫುದ್ದೀನ್ ಅಶ್ರಫ್, ನಂಗಿಯಾಲೈ ಖರೋಟಿ, ಝಿಯಾವುರ್ ರಹಮಾನ್ ಶರೀಫಿ, ಮೊಹಮ್ಮದ್ ಸಲೀಮ್.
Published On - 1:43 pm, Sun, 7 June 26