ವಿಶ್ವ ದಾಖಲೆ: ಕೇವಲ 5 ಎಸೆತಗಳಲ್ಲಿ ಮುಗಿದ ಟಿ20 ಪಂದ್ಯ
ಕ್ರಿಕೆಟ್ ಇತಿಹಾಸದಲ್ಲೇ ಇಂತಹದ್ದೊಂದು ವಿಚಿತ್ರ ಪಂದ್ಯವನ್ನು ಯಾರೂ ನೋಡಿರಲು ಸಾಧ್ಯವಿಲ್ಲ! ಸಾಮಾನ್ಯವಾಗಿ ಟಿ20 ಪಂದ್ಯ ಎಂದರೆ ಕನಿಷ್ಠ 3 ಗಂಟೆಗಳ ಕಾಲ ರೋಮಾಂಚನ ನಿರೀಕ್ಷಿಸಲಾಗುತ್ತದೆ. ಆದರೆ, ಮಲೇಷ್ಯಾದಲ್ಲಿ ನಡೆಯುತ್ತಿರುವ ACC ಮಹಿಳಾ ಟಿ20 ಪ್ರೀಮಿಯರ್ ಕಪ್‌ನಲ್ಲಿ ಯುಎಇ ಮತ್ತು ಸೌದಿ ಅರೇಬಿಯಾ ನಡುವಿನ ಪಂದ್ಯ ಮುಗಿಯಲು ಕೇವಲ 5 ಎಸೆತಗಳು ಸಾಕಾದವು!

ಮಲೇಷ್ಯಾದಲ್ಲಿ ನಡೆಯುತ್ತಿರುವ 2026ರ ACC ಮಹಿಳಾ ಟಿ20 ಪ್ರೀಮಿಯರ್ ಕಪ್ ಟೂರ್ನಿಯಲ್ಲಿ ಕ್ರಿಕೆಟ್ ಲೋಕವೇ ನಿಬ್ಬೆರಗಾಗುವಂತಹ ಫಲಿತಾಂಶ ಮೂಡಿಬಂದಿದೆ. ಈ ಫಲಿತಾಂಶ ಮೂಡಿಬಂದಿದ್ದು ಕೇವಲ 5 ಎಸೆತಗಳಲ್ಲಿ ಎಂಬುದೇ ಅಚ್ಚರಿ.ಈ ಟೂರ್ನಿಯ ಗ್ರೂಪ್ ‘ಬಿ’ ಪಂದ್ಯದಲ್ಲಿ ಸೌದಿ ಅರೇಬಿಯಾ ಮಹಿಳಾ ತಂಡ ಹಾಗೂ ಯುಎಇ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು.
ಈ ಮ್ಯಾಚ್ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೌದಿ ಅರೇಬಿಯಾ ಮಹಿಳಾ ತಂಡ, ಯುಎಇ ಬೌಲರ್‌ಗಳ ಮಾರಕ ದಾಳಿಗೆ ಧೂಳೀಪಟವಾಯಿತು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಸೌದಿ ತಂಡ 15.3 ಓವರ್‌ಗಳಲ್ಲಿ ಕೇವಲ 27 ರನ್‌ಗಳಿಸಿ ಆಲೌಟ್ ಆಯಿತು.
ಯುಎಇ ಪರ ಹೀನಾ ಹೋಟ್‌ಚಂದಾನಿ (3-4), ಸುರಕ್ಷಾ ಕೊಟ್ಟೆ (3-5) ಮತ್ತು ನಾಯಕಿ ಇಶಾ ಓಜಾ (3-9) ತಲಾ ಮೂರು ವಿಕೆಟ್ ಪಡೆದು ಸೌದಿ ಅರೇಬಿಯಾ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಕೇವಲ 5 ಎಸೆತಗಳಲ್ಲಿ ಮುಗಿದ ಪಂದ್ಯ!
28 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಯುಎಇ ತಂಡಕ್ಕೆ ಸೌದಿ ಅರೇಬಿಯಾದ ಬೌಲರ್ ಮಾಹ್ ನೂರ್ ಅಮೀರ್ ಎಸೆದ ಮೊದಲ ಓವರ್ ವರದಾನವಾಗಿ ಪರಿಣಮಿಸಿತು. ದಿಕ್ಕು ದೆಸೆಯಿಲ್ಲದ ದಾಳಿ ನಡೆಸಿದ ಮಾಹ್ ನೂರ್, ಸಾಲು ಸಾಲು ವೈಡ್ (10 ವೈಡ್‌ಗಳು) ಹಾಗೂ ನೋ-ಬಾಲ್ ಸೇರಿದಂತೆ ಒಟ್ಟು 11 ಎಕ್ಸ್ಟ್ರಾ ರನ್‌ಗಳನ್ನು ಉಡುಗೊರೆಯಾಗಿ ನೀಡಿದರು.
ಇದರ ಜೊತೆಗೆ ಯುಎಇ ನಾಯಕಿ ಇಶಾ ಓಜಾ ಕೇವಲ 5 ಎಸೆತಗಳಲ್ಲಿ 2 ಫೋರ್ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 15 ರನ್ ಚಚ್ಚಿದರು. ಮತ್ತೊಬ್ಬ ಆರಂಭಿಕ ಆಟಗಾರ್ತಿ ತೀರ್ಥಾ ಸತೀಶ್ ತಾವು ಎದುರಿಸಿದ ಏಕೈಕ ಎಸೆತದಲ್ಲಿ ಬೌಂಡರಿ ಬಾರಿಸಿದರು. ಪರಿಣಾಮವಾಗಿ, ಮೊದಲ ಓವರ್‌ನ 5ನೇ ಎಸೆತದಲ್ಲಿ (0.5 ಓವರ್) ಯುಎಇ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿ 10 ವಿಕೆಟ್್ಗಳ ಭರ್ಜರಿ ಜಯ ಸಾಧಿಸಿತು.
ವಿಶ್ವ ದಾಖಲೆ:
- 115 ಎಸೆತಗಳು ಬಾಕಿ: ಯುಎಇ ತಂಡ ಇನ್ನೂ 115 ಎಸೆತಗಳು (19.1 ಓವರ್) ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ.
- ಜಂಟಿ ಎರಡನೇ ಸ್ಥಾನ: ಮಹಿಳಾ ಟಿ20 ಅಂತಾರಾಷ್ಟ್ರೀಯ (WT20I) ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗವಾಗಿ ಗುರಿ ತಲುಪಿದ ಜಂಟಿ ಎರಡನೇ ಪಂದ್ಯ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಇದನ್ನೂ ಓದಿ: ಇದೆಂತಾ ಅನ್ಯಾಯ… ಈ ಮೂವರ ಬದಲಿಗೆ ಆ ಮೂವರಿಗೆ ಸ್ಥಾನ..!
ಕೇವಲ 20 ನಿಮಿಷಗಳಿಗಿಂತ ಕಡಿಮೆ ಅವಧಿಯ ರನ್ ಚೇಸ್‌ನಲ್ಲಿ ಮುಕ್ತಾಯಗೊಂಡ ಈ ಪಂದ್ಯ, ಕ್ರಿಕೆಟ್ ಇತಿಹಾಸದ ಅತ್ಯಂತ ವಿಚಿತ್ರ ಹಾಗೂ ಅಪರೂಪದ ಪಂದ್ಯಗಳಲ್ಲಿ ಒಂದಾಗಿ ದಾಖಲಾಗಿದೆ.




