AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AFG: ಕೊಹ್ಲಿಯ ಶತಕ, ಭುವಿಯ ಮಾರಕ ದಾಳಿ; ಗೆಲುವಿನೊಂದಿಗೆ ಏಷ್ಯಾಕಪ್ ಪಯಣ ಮುಗಿಸಿದ ಭಾರತ

Asia Cup 2022: ಈ ಬಾರಿ ಭಾರತ ಕ್ರಿಕೆಟ್ ತಂಡ ಏಷ್ಯಾಕಪ್‌ನಿಂದ ಪ್ರಶಸ್ತಿ ಗೆಲ್ಲದೆ ದೇಶಕ್ಕೆ ಮರಳಿರಬಹುದು. ಆದರೆ ಟೀಂ ಇಂಡಿಯಾ, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬೇಕಾದ ರೀತಿಯಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಿದೆ.

IND vs AFG: ಕೊಹ್ಲಿಯ ಶತಕ, ಭುವಿಯ ಮಾರಕ ದಾಳಿ; ಗೆಲುವಿನೊಂದಿಗೆ ಏಷ್ಯಾಕಪ್ ಪಯಣ ಮುಗಿಸಿದ ಭಾರತ
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ಅವಕಾಶ ಸಿಗುವುದು ಖಚಿತ. ಒಂದು ವೇಳೆ ಕೊಹ್ಲಿ ಈ ಮೂರು ಪಂದ್ಯಗಳಿಂದ ಕೇವಲ 98 ರನ್ ಗಳಿಸಿದರೆ ಟಿ20 ಮಾದರಿಯಲ್ಲಿ 11,000 ರನ್ ಗಳಿಸಿದ ದಾಖಲೆ ಬರೆಯಲಿದ್ದಾರೆ.
TV9 Web
| Updated By: Vinay Bhat|

Updated on:Sep 09, 2022 | 12:26 PM

Share

ಈ ಬಾರಿ ಭಾರತ ಕ್ರಿಕೆಟ್ ತಂಡ ಏಷ್ಯಾಕಪ್‌ನಿಂದ ಪ್ರಶಸ್ತಿ ಗೆಲ್ಲದೆ ದೇಶಕ್ಕೆ ಮರಳಿರಬಹುದು. ಆದರೆ ಟೀಂ ಇಂಡಿಯಾ, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬೇಕಾದ ರೀತಿಯಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಿದೆ. ಭಾರತ ತನ್ನ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 101 ರನ್‌ಗಳಿಂದ ಸೋಲಿಸಿತು. ಈ ಗೆಲುವು ಟೀಮ್ ಇಂಡಿಯಾ ಮತ್ತು ಅದರ ಅಭಿಮಾನಿಗಳಿಗೆ ಎಷ್ಟು ಸಮಾಧಾನ ಮತ್ತು ಸಂತೋಷವನ್ನು ನೀಡಿತೆಂದರೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಈ ಗೆಲುವಿಗಿಂತ ವಿರಾಟ್ ಕೊಹ್ಲಿಯ ಶತಕಗಳ ಬರ ಮತ್ತು ಕಾಯುವಿಕೆ ಕೊನೆಗೊಂಡಿತು ಎಂಬ ಸಂತೋಷ ಮತ್ತು ಸಮಾಧಾನ ಎಲ್ಲರ ಮನಸ್ಸಲ್ಲಿ ಗಟ್ಟಿಯಾಗಿ ನೆಲೆಯೂರಿದೆ.

ಸತತ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟ್ ಮಾಡಿ ಸತತ ಎರಡು ಸೋಲಿನ ಬಳಿಕ ದುಬೈ ಮೈದಾನದಲ್ಲಿ ಗೆಲುವಿನ ಖಾತೆ ತೆರೆಯಿತು. ವಿರಾಟ್ ಕೊಹ್ಲಿ ಅವರ ಐತಿಹಾಸಿಕ ಶತಕ ಹಾಗೂ ಭುವನೇಶ್ವರ್ ಕುಮಾರ್ ಅವರ ಮಾರಕ ಬೌಲಿಂಗ್ ಈ ಗೆಲುವಿನಲ್ಲಿ ವಿಶೇಷವಾಗಿತ್ತು. ಈ ಗೆಲುವು ಏಷ್ಯಾಕಪ್‌ನಲ್ಲಿ ಟೀಮ್ ಇಂಡಿಯಾದ ಅದೃಷ್ಟವನ್ನು ಬದಲಿಸದೇ ಇರಬಹುದು, ಆದರೆ ಈ ಪಂದ್ಯಾವಳಿಗೆ ಬರುವ ಮೊದಲು ಪ್ರಚಂಡ ಒತ್ತಡದಲ್ಲಿದ್ದು ರನ್‌ಗಳಿಗಾಗಿ ತೀವ್ರವಾಗಿ ಹೆಣಗಾಡುತ್ತಿದ್ದ ಕೊಹ್ಲಿಯ ಅದೃಷ್ಟವನ್ನು ಬದಲಾಯಿಸಿತು.

ಈಗಾಗಲೇ ಟೂರ್ನಿಯಿಂದ ಹೊರಗುಳಿದಿದ್ದ ಭಾರತ ತಂಡದ ಪರವಾಗಿ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್ ಜವಾಬ್ದಾರಿ ವಹಿಸಿಕೊಂಡು ವಿರಾಟ್ ಕೊಹ್ಲಿ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದರು. ಪಂದ್ಯಾವಳಿಯಲ್ಲಿ ಈಗಾಗಲೇ ಎರಡು ಅರ್ಧಶತಕಗಳನ್ನು ಗಳಿಸಿದ್ದ ಕೊಹ್ಲಿ, ಆದರೆ ಶ್ರೀಲಂಕಾ ವಿರುದ್ಧದ ಹಿಂದಿನ ಪಂದ್ಯದಲ್ಲಿ ಖಾತೆ ತೆರೆಯದೆ ಔಟಾಗಿದ್ದರು. ಆದರೆ ಈ ಪಂದ್ಯದಲ್ಲಿ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಟ್ಟ ಕೊಹ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿ, ರಾಹುಲ್ ಜೊತೆಗೆ ಮೊದಲ ವಿಕೆಟ್‌ಗೆ 12.4 ಓವರ್‌ಗಳಲ್ಲಿ 119 ರನ್‌ಗಳ ಅದ್ಭುತ ಜೊತೆಯಾಟ ನಡೆಸಿದರು.

ರಾಹುಲ್ ಪಂದ್ಯಾವಳಿಯಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಗಳಿಸಿದ ಬಳಿಕ ದೊಡ್ಡ ಹೊಡೆತವನ್ನು ಆಡುವ ಯತ್ನದಲ್ಲಿ ವಿಕೆಟ್ ಒಪ್ಪಿಸಿದರು. ಅದೇ ಸಮಯದಲ್ಲಿ ಸೂರ್ಯಕುಮಾರ್ ಯಾದವ್ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿ, ಮುಂದಿನ ಎಸೆತದಲ್ಲಿ ಬೌಲ್ಡ್ ಆದರು. ಇಂತಹ ಪರಿಸ್ಥಿತಿಯಲ್ಲಿ ರಿಷಬ್ ಪಂತ್ ಜೊತೆಗೂಡಿ ಕೊಹ್ಲಿ ಇನ್ನಿಂಗ್ಸ್ ಮುನ್ನಡೆಸಿದರು. ಪಂತ್ ಫುಲ್ ಸ್ವಿಂಗ್​ನಲ್ಲಿ ಇಲ್ಲದಿದ್ದರೂ ಕೊಹ್ಲಿಯನ್ನು ತಡೆಯುವುದು ಕಷ್ಟವಾಯಿತು. ಅಂತಿಮವಾಗಿ 19ನೇ ಓವರ್​ನ ಮೊದಲ ಎಸೆತದಲ್ಲಿ ಕೊಹ್ಲಿ ಬೌಂಡರಿ ಹೊಡೆದರು. ಮುಂದಿನ ಶಾರ್ಟ್ ಪಿಚ್ ಬಾಲ್ ಅನ್ನು ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು.

ಇದರೊಂದಿಗೆ ಕೊಹ್ಲಿ 1021 ದಿನಗಳ ನಂತರ ಮೊದಲ ಶತಕ ಹಾಗೂ 71ನೇ ಶತಕ ದಾಖಲಿಸಿದರು. ಕೊಹ್ಲಿ ಕೇವಲ 53 ಎಸೆತಗಳಲ್ಲಿ ಟಿ20ಯಲ್ಲಿ ಭಾರತದ ಪರ ಮೊದಲ ಶತಕ ದಾಖಲಿಸಿದರು. ಕೊಹ್ಲಿ ಕೊನೆಯ ಓವರ್‌ನಲ್ಲಿ ಸತತ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಇದರೊಂದಿಗೆ ಕೊನೆಯವರೆಗೂ ಅಜೇಯರಾಗಿ ಉಳಿದು ಕೇವಲ 61 ಎಸೆತಗಳಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಿತ 122 ರನ್ ಚಚ್ಚಿದರು.

ಅಷ್ಟೇ ಅಲ್ಲ, ಭಾರತ ಈ ವರ್ಷ ಟೂರ್ನಿಯಲ್ಲಿ ಗರಿಷ್ಠ 212 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ ತಂಡ ಮೊದಲ 7 ಓವರ್‌ಗಳು ಮುಗಿಯುವುದರೊಳಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಇನಿಂಗ್ಸ್‌ನ ಮೊದಲ ಮತ್ತು ಮೂರನೇ ಓವರ್‌ಗಳಲ್ಲಿ ಭುವನೇಶ್ವರ್ ತಲಾ 2 ವಿಕೆಟ್ ಪಡೆದರೆ, ಆರನೇ ಓವರ್‌ನಲ್ಲಿ ಅರ್ಷದೀಪ್ ನಾಯಕ ಮೊಹಮ್ಮದ್ ನಬಿಯನ್ನು ಔಟ್ ಮಾಡಿ ಅರ್ಧದಷ್ಟು ತಂಡವನ್ನು ಕೇವಲ 20 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿಸಿದರು.

ಕೊಹ್ಲಿಯ ಶತಕದಂತೆಯೇ, ಭುವನೇಶ್ವರ್ ಕೂಡ ವಿಶೇಷ ದಾಖಲೆ ಬರೆದು, ಐದನೇ ವಿಕೆಟ್‌ ಗಳಿಸಿದ ದಾಖಲೆ ಬರೆದರು. ಅಫ್ಘಾನಿಸ್ತಾನ ಪರ ಇಬ್ರಾಹಿಂ ಜದ್ರಾನ್ ಏಕಾಂಗಿ ಹೋರಾಟ ನಡೆಸಿ ಭಾರತೀಯ ಬೌಲರ್‌ಗಳ ವಿರುದ್ಧ ಬೌಂಡರಿಗಳನ್ನು ಕಲೆಹಾಕುತ್ತಲೇ ಇದ್ದರು. ಕೊನೆಯವರೆಗೂ ನಿಂತ ಅವರು 59 ಎಸೆತಗಳಲ್ಲಿ 64 ರನ್ ಗಳಿಸಿ ಅಜೇಯರಾಗಿ ಮರಳಿದರು. ಅಫ್ಘಾನ್ ತಂಡ 20 ಓವರ್‌ಗಳಲ್ಲಿ 111 ರನ್ ಗಳಿಸಲಷ್ಟೇ ಶಕ್ತವಾಗಿ, 101 ರನ್‌ಗಳಿಂದ ಸೋಲನುಭವಿಸಿತು.

Published On - 10:57 pm, Thu, 8 September 22