ಟೀಮ್ ಇಂಡಿಯಾದ ಮುಂದಿನ ಸರಣಿ ಯಾವಾಗ? ಯಾರ ವಿರುದ್ಧ?

IND vs AFG: ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿರುವ ಟೀಮ್ ಇಂಡಿಯಾ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನ ರೇಸ್‌ನಲ್ಲಿ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಲಂಕಾ ಪ್ರವಾಸದ ಈ ಯಶಸ್ವಿ ಮುಕ್ತಾಯದ ಬೆನ್ನಲ್ಲೇ, ಭಾರತ ತಂಡವು ಇದೀಗ ತನ್ನ ಮುಂದಿನ ಕ್ರಿಕೆಟ್ ಸವಾಲಿಗೆ ಸಜ್ಜಾಗಬೇಕಿದೆ. ಟೀಮ್ ಇಂಡಿಯಾದ ಮುಂದಿನ ಎದುರಾಳಿ ಬಲಿಷ್ಠ ಅಫ್ಘಾನಿಸ್ತಾನ್ ಆಗಿದ್ದು, ಉಭಯ ತಂಡಗಳ ನಡುವೆ ರೋಚಕ ಟಿ20 ಸರಣಿ ನಡೆಯಲಿದೆ.

ಟೀಮ್ ಇಂಡಿಯಾದ ಮುಂದಿನ ಸರಣಿ ಯಾವಾಗ? ಯಾರ ವಿರುದ್ಧ?
Team India
Image Credit source: BCCI

Updated on: Aug 29, 2026 | 7:31 AM

ಶ್ರೀಲಂಕಾ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದು ಬೀಗಿರುವ ಟೀಮ್ ಇಂಡಿಯಾ ಮತ್ತೆ ಚುಟುಕು ಕ್ರಿಕೆಟ್​ಗೆ ಸಜ್ಜಾಗಬೇಕಿದೆ. ಅದು ಸಹ ಅಫ್ಘಾನಿಸ್ತಾನ್ ವಿರುದ್ಧ. ಮುಂಬರುವ ಸೆಪ್ಟೆಂಬರ್ 13 ರಿಂದ ಆರಂಭವಾಗಲಿರುವ ಈ ಸರಣಿಯಲ್ಲಿ ಒಟ್ಟು 3 ಪಂದ್ಯಗಳನ್ನಾಡಲಾಗುತ್ತದೆ. ಈ ಟಿ20 ಸರಣಿಯು ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ಬದ್ದು. ಏಕೆಂದರೆ ಈ ಸರಣಿಯ ಮುಕ್ತಾಯದ ಬೆನ್ನಲ್ಲೇ ಜಪಾನ್‌ನಲ್ಲಿ 2026ರ ಏಷ್ಯನ್ ಗೇಮ್ಸ್ ಆರಂಭವಾಗಲಿದ್ದು, ಅಲ್ಲಿ ಚಿನ್ನದ ಪದಕ ಉಳಿಸಿಕೊಳ್ಳುವ ಗುರಿ ಹೊಂದಿರುವ ಭಾರತಕ್ಕೆ ಈ ಪಂದ್ಯಗಳು ಅತ್ಯುತ್ತಮ ಸಿದ್ದತಾ ವೇದಿಕೆಯಾಗಲಿವೆ.

ಭಾರತದ ಮಣ್ಣಿನಲ್ಲಿ ಅಫ್ಘಾನ್ ಆತಿಥ್ಯ!

ಈ ಸರಣಿಯನ್ನು ಆಯೋಜಿಸುತ್ತಿರುವುದು ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿ. ಆದರೆ ಪಂದ್ಯಗಳು ನಡೆಯುತ್ತಿರುವುದು ಭಾರತದ ರಾಜಧಾನಿ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಎಂಬುದು ವಿಶೇಷ. ಬಿಸಿಸಿಐ ಜೊತೆಗಿನ ಉತ್ತಮ ಬಾಂಧವ್ಯದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನವು ಭಾರತವನ್ನೇ ತನ್ನ ‘ಹೋಮ್ ಗ್ರೌಂಡ್’ ಮಾಡಿಕೊಂಡಿದ್ದು, ತವರಿನ ಅಭಿಮಾನಿಗಳ ಸಮ್ಮುಖದಲ್ಲೇ ಭಾರತವನ್ನು ಕಟ್ಟಿಹಾಕಲು ಯೋಜನೆ ರೂಪಿಸಿದೆ.

ಯುವ ಪಡೆಗೆ ಗೋಲ್ಡನ್ ಚಾನ್ಸ್:

ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಪಂದ್ಯಾವಳಿಗಳು ಸಹ ಟಿ20 ಮಾದರಿಯಲ್ಲೇ ನಡೆಯುವುದರಿಂದ, ಈ ಸರಣಿಗೆ ಆಯ್ಕೆಯಾಗಲಿರುವ ಭಾರತೀಯ ತಂಡವು ಬಹುತೇಕ ಏಷ್ಯನ್ ಗೇಮ್ಸ್‌ನ ಸ್ಕ್ವಾಡ್ ಅನ್ನೇ ಹೋಲುವ ಸಾಧ್ಯತೆಯಿದೆ. ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ನಿರೂಪಿಸಲು ಮತ್ತು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಇದು ಚಿನ್ನದಂತಹ ಅವಕಾಶವಾಗಿದೆ. ಇತ್ತೀಚೆಗಷ್ಟೇ ಝಿಂಬಾಬ್ವೆ ವಿರುದ್ಧ 3-0 ಅಂತರದಲ್ಲಿ ಟಿ20 ಸರಣಿ ಗೆದ್ದಿರುವ ಯುವ ಉತ್ಸಾಹಿ ಭಾರತೀಯ ಪಡೆ, ಅದೇ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.

ಅಫ್ಘಾನ್ ಕಡೆಯಿಂದ ಭರ್ಜರಿ ಸಿದ್ಧತೆ:

ಮತ್ತೊಂದೆಡೆ, ಅಫ್ಘಾನಿಸ್ತಾನವು ಇಬ್ರಾಹಿಂ ಝದ್ರಾನ್ ಅವರ ಪೂರ್ಣಾವಧಿ ನಾಯಕತ್ವದಲ್ಲಿ ಈಗಾಗಲೇ ಬಲಿಷ್ಠ ತಂಡವನ್ನು ಘೋಷಿಸಿದೆ. ವೇಗದ ಬೌಲರ್ ನವೀನ್-ಉಲ್-ಹಕ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವುದು ಅವರ ಬೌಲಿಂಗ್ ವಿಭಾಗಕ್ಕೆ ಆನೆಬಲ ತಂದಿದೆ. ರಹಮಾನುಲ್ಲಾ ಗುರ್ಬಾಝ್, ರಶೀದ್ ಖಾನ್, ನೂರ್ ಅಹ್ಮದ್ ಮತ್ತು ಮೊಹಮ್ಮದ್ ನಬಿ ಅವರಂತಹ ವಿಶ್ವದರ್ಜೆಯ ಆಟಗಾರರನ್ನು ಹೊಂದಿರುವ ಅಫ್ಘಾನ್ ಪಡೆ, ಟಿ20 ಮಾದರಿಯಲ್ಲಿ ಯಾವುದೇ ಬಲಿಷ್ಠ ತಂಡಕ್ಕಾದರೂ ಶಾಕ್ ನೀಡಬಲ್ಲ ಶಕ್ತಿ ಹೊಂದಿದೆ. ಹೀಗಾಗಿ ಈ ಸರಣಿಯಲ್ಲಿ ಅತ್ಯುತ್ತಮ ಪೈಪೋಟಿ ನಿರೀಕ್ಷಿಸಬಹುದು. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.

  1. ಮೊದಲ ಟಿ20 ಪಂದ್ಯ: ಸೆಪ್ಟೆಂಬರ್ 13, 2026 (ಭಾನುವಾರ) – ಸಂಜೆ 7:00 ಗಂಟೆಗೆ
  2. ಎರಡನೇ ಟಿ20 ಪಂದ್ಯ: ಸೆಪ್ಟೆಂಬರ್ 15, 2026 (ಮಂಗಳವಾರ) – ಸಂಜೆ 7:00 ಗಂಟೆಗೆ
  3. ಮೂರನೇ ಟಿ20 ಪಂದ್ಯ: ಸೆಪ್ಟೆಂಬರ್ 17, 2026 (ಗುರುವಾರ) – ಸಂಜೆ 7:00 ಗಂಟೆಗೆ

ಇದನ್ನೂ ಓದಿ: ಟೀಮ್ ಇಂಡಿಯಾ ವಿರುದ್ಧ ಅಬ್ಬರ… 48 ವರ್ಷಗಳ ಹಳೆಯ ದಾಖಲೆ ಧೂಳೀಪಟ

ಜೂನ್ ತಿಂಗಳಿನಲ್ಲಿ ನಡೆದಿದ್ದ ಏಕೈಕ ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ಭಾರತೀಯ ತಂಡವು ಅಫ್ಘಾನಿಸ್ತಾನ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿತ್ತು. ಆದರೆ, ಟಿ20 ಮಾದರಿಯಲ್ಲಿ ಅಫ್ಘಾನ್ ಪಡೆ ಸದಾ ಅಪಾಯಕಾರಿ ತಂಡವಾಗಿರುವುದರಿಂದ ಈ ಸರಣಿಯು ತೀವ್ರ ಹಣಾಹಣಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

 

Loading...
Unable to load recommendations.
Follow Us