ಬುಧವಾರ ಅಡಿಲೇಡ್ ಓವಲ್ ಮೈದಾನದಲ್ಲಿ ಭಾರತ ಮತ್ತು ಬಾಂಗ್ಲಾದೇಶ (Team India and Bangladesh) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಐಸಿಸಿ ಟಿ20 ವಿಶ್ವಕಪ್‌ನ (T20 World Cup) ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯುವ ಉದ್ದೇಶದಿಂದ ಉಭಯ ತಂಡಗಳು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿವೆ. ಆದರೆ ಈ ಪಂದ್ಯ ನಡೆಯುವುದು ಅನುಮಾನ ಎಂದು ವರದಿಯಾಗಿದೆ. ಈ ಪಂದ್ಯ ಅಡಿಲೇಡ್ ಓವಲ್‌ನಲ್ಲಿ (Adelaide Oval) ನಡೆಯಲಿದ್ದು, ಇಲ್ಲಿನ ಹವಾಮಾನ ಈ ಪಂದ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿವೆ. ಇದಕ್ಕೆ ಪೂರಕವೆಂಬಂತೆ ಮಂಗಳವಾರ ಅಡಿಲೇಡ್ನಲ್ಲಿ ಧಾರಾಕಾರ ಮಳೆಯಾಗಿದ್ದು, ಅಲ್ಲಿ ಚಳಿಯೂ ಸಾಕಷ್ಟು ಹೆಚ್ಚಾಗಿದೆ.
ಈ ವಿಶ್ವಕಪ್‌ನಲ್ಲಿ ಮಳೆಯಿಂದಾಗಿ ಅನೇಕ ಪಂದ್ಯಗಳು ರದ್ದಾಗಿವೆ. ಇದರಿಂದಾಗಿ ಸೆಮಿಫೈನಲ್‌ಗೆ ಹೋಗುವ ತಂಡಗಳು ಯಾವುವು ಎಂಬುದಕ್ಕೆ ಇನ್ನು ಸ್ಪಷ್ಟನೆ ಸಿಕ್ಕಿಲ್ಲ. ಹೀಗಾಗಿ ನಾಳಿನ ಪಂದ್ಯಕ್ಕೆ ಮಳೆ ಯಾವುದೇ ತೊಂದರೆ ನೀಡದಿರಲ್ಲಿ ಎಂಬುದು ಭಾರತೀಯ ಅಭಿಮಾನಿಗಳ ಪ್ರಾರ್ಥನೆಯಾಗಿದೆ.
ಪಂದ್ಯದ ದಿನ ಮಳೆ?
ಆದರೆ, ಹವಾಮಾನ ವರದಿಯಂತೆ ಮಂಗಳವಾರ ನಿರಂತರವಾಗಿ ಮಳೆಯಾಗುತ್ತಿದ್ದು ಬುಧವಾರವೂ ಸಹ ಮಳೆಯಾಗಬಹುದು ಎಂಬುದು ವರದಿಯಲ್ಲಿದೆ. ಆಸ್ಟ್ರೇಲಿಯಾದ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಬುಧವಾರ ಸಂಜೆ ಶೇಕಡ 60 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ ಪಂದ್ಯ ಸಂಜೆ 6:30ಕ್ಕೆ ಆರಂಭವಾಗುವುದರಿಂದ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳು ಹೆಚ್ಚಿವೆ. ಅಷ್ಟೇ ಅಲ್ಲದೆ ದಿನವಿಡೀ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ENG vs NZ: ಕಿವೀಸ್ ಕಿವಿ ಹಿಂಡಿದ ಆಂಗ್ಲರು; ಕಾಂಗರೂಗಳು ಕೊನೆಯ ಪಂದ್ಯ ಗೆದ್ದರೂ ಸೇಮಿಸ್ಗೇರುವುದು ಕಷ್ಟ..!
ಮಂಗಳವಾರ ಮಳೆಯಿಂದಾಗಿ ಟೀಂ ಇಂಡಿಯಾ ಒಳಾಂಗಣ ಅಭ್ಯಾಸ ನಡೆಸಬೇಕಾಯಿತು. ಈಗ ಇಂತಹ ಪರಿಸ್ಥಿತಿಯಲ್ಲಿ ಬುಧವಾರದ ವಾತಾವರಣ ಹೇಗಿರಲಿದೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಪಂದ್ಯ ರದ್ದಾದರೆ ಕಷ್ಟ
ಒಂದು ವೇಳೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಈ ಪಂದ್ಯ ಮಳೆಯಿಂದಾಗಿ ನಡೆಯದಿದ್ದರೆ ಸೆಮಿಫೈನಲ್‌ಗೆ ಹೋಗುವ ಉಭಯ ತಂಡಗಳ ಆಸೆಗೆ ಹಿನ್ನಡೆಯಾಗಬಹುದು. ಅಂಕಪಟ್ಟಿಯಲ್ಲಿ ಉಭಯ ತಂಡಗಳ ಸ್ಥಾನವನ್ನು ಗಮನಿಸಿದರೆ, ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದೆ. ಭಾರತ ತಂಡ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಒಂದು ಸೋಲಿನೊಂದಿಗೆ ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಕೂಡ ನಾಲ್ಕು ಅಂಕಗಳನ್ನು ಹೊಂದಿದೆ ಆದರೆ ಅದು ನೆಟ್ ರನ್ ರೇಟ್‌ನಲ್ಲಿ ಭಾರತಕ್ಕಿಂತ ಹಿಂದಿರುವುದರಿಂದ ಮೂರನೇ ಸ್ಥಾನದಲ್ಲಿದೆ. ಈ ಪಂದ್ಯ ಮಳೆಯಿಂದ ನಡೆಯಲು ಸಾಧ್ಯವಾಗದೇ ಇದ್ದರೆ ಎರಡೂ ತಂಡಗಳು ತಮ್ಮ ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಲಿವೆ. ಅಲ್ಲದೆ ನೆಟ್ ರನ್ ರೇಟ್ ಕೂಡ ಸೆಮಿಫೈನಲ್‌ಗೆ ಹೋಗುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Tue, 1 November 22