India vs Bangladesh Women: ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ: ಸ್ಮೃತಿ-ಶಫಾಲಿ ಭರ್ಜರಿ ಆರಂಭ

Women's World Cup, India vs Bangladesh: ಐಸಿಸಿ ಮಹಿಳಾ ಏಕದಿನ ವಿಶ್ವಕಪ್​ನ 22ನೇ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡ ಮುಖಾಮುಖಿ ಆಗುತ್ತಿದೆ. ಈಗಾಗಲೇ ಟಾಸ್ ಗೆದ್ದ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಉತ್ತಮ ಆರಂಭ ಪಡೆದುಕೊಂಡಿದೆ.

India vs Bangladesh Women: ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ: ಸ್ಮೃತಿ-ಶಫಾಲಿ ಭರ್ಜರಿ ಆರಂಭ
India vs Bangladesh Women
Follow us
TV9 Web
| Updated By: Vinay Bhat

Updated on: Mar 22, 2022 | 7:30 AM

ನ್ಯೂಜಿಲೆಂಡ್​ನಲ್ಲಿ ಸಾಗುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್​ನ (Womens World Cup 2022) 22ನೇ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ತಂಡ ಮುಖಾಮುಖಿ ಆಗುತ್ತಿದೆ. ಈಗಾಗಲೇ ಟಾಸ್ ಗೆದ್ದ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಉತ್ತಮ ಆರಂಭ ಪಡೆದುಕೊಂಡಿದೆ. ಭಾರತೀಯ ವನಿತೆಯರು ಆಡಿದ 5 ಪಂದ್ಯಗಳಲ್ಲಿ2 ಗೆಲುವು ಸಾಧಿಸಿ 3 ಪಂದ್ಯಗಳಲ್ಲಿ ಸೋತಿದ್ದು, 4 ಅಂಕಗಳೊಂದಿಗೆ +0.456 ರನ್ ರೇಟ್ ಹೊಂದಿ ಅಂಕ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದೆ. ಇಂದಿನ ನಿರ್ಣಾಯಕ ಪಂದ್ಯದಲ್ಲಿ ಮಿಥಾಲಿ ರಾಜ್ (Mithali Raj) ಬಳಗ ಭರ್ಜರಿ ಗೆಲುವು ಸಾಧಿಸಲೇ ಬೇಕಾದ ಒತ್ತಡದಲ್ಲಿದೆ. ಇಲ್ಲವಾದರೆ ಸೆಮಿಫೈನಲ್ ಹಂತಕ್ಕೇರುವ ಕನಸು ನುಚ್ಚುನೂರಾಗಲಿದೆ. ಪಾಕಿಸ್ತಾನವನ್ನು ಮಣಿಸಿ ಉತ್ತಮ ಆರಂಭ ಕಂಡಿದ್ದ ಭಾರತ ನಂತರ ಏಕೈಕ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎದುರಿನ ಸತತ ಸೋಲು ಸೇರಿದಂತೆ ಮೂರು ಪಂದ್ಯಗಳಲ್ಲಿ ನಿರಾಸೆ ಕಂಡಿದೆ. ಹೀಗಾಗಿ ಮುಂದಿನ ಹಾದಿ ಕಠಿಣವಾಗಿದೆ.

ಸದ್ಯ ಹ್ಯಾಮಿಲ್ಟನ್‌ನ ಸೆಡ್ಡಾನ್ ಪಾರ್ಕ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಶುರುಮಾಡಿರುವ ಭಾರತ ಭರ್ಜರಿ ಆರಂಭ ಪಡೆದುಕೊಂಡಿದೆ. ಓಪನರ್​ಗಳಾದ ಸ್ಮೃತಿ ಮಂದಾನ ಹಾಗೂ ಶಫಾಲಿ ವರ್ಮಾ ಅರ್ಧಶತಕದ ಜೊತೆಯಾಟ ಆಡಿ ಮುನ್ನುಗ್ಗುತ್ತಿದ್ದಾರೆ. ಶಫಾಲಿ ಬಿರುಸಿನ ಆಟದ ಮೊರೆ ಹೋದರೆ ಸ್ಮೃತಿ ಇವರಿಗೆ ಉತ್ತಮ ಸಾಥ್ ನೀಡುತ್ತಿದ್ದಾರೆ. ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಮೆಗ್ನಾ ಸಿಂಗ್ ಅವರನ್ನು ಕೈಬಿಟ್ಟು ಪೂನಮ್ ಯಾದವ್​ಗೆ ಅವಕಾಶ ನೀಡಲಾಗಿದೆ.

ಭಾರತ ಪ್ಲೇಯಿಂಗ್ XI: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ, ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣಾ, ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್.

ಬಾಂಗ್ಲಾದೇಶ ಪ್ಲೇಯಿಂಗ್ XI: ಶರ್ಮಿನ್ ಅಖ್ತರ್, ಮುರ್ಶಿದಾ ಖಾತುನ್, ಫರ್ಗಾನಾ ಹೊಕ್, ರುಮಾನಾ ಅಹ್ಮದ್, ನಿಗರ್ ಸುಲ್ತಾನಾ (ನಾಯಕಿ/ ವಿಕೆಟ್ ಕೀಪರ್), ಸಲ್ಮಾ ಖಾತುನ್, ರಿತು ಮೋನಿ, ಲತಾ ಮೊಂಡಲ್, ಫಾಹಿಮಾ ಖಾತುನ್, ನಹಿದಾ ಅಖ್ತರ್, ಜಹಾನಾರಾ ಆಲಂ.

ಭಾರತ ವನಿತೆಯರ ತಂಡ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ಇದುವರೆಗೂ ಒಟ್ಟು ನಾಲ್ಕು ಮುಖಾಮುಖಿಯ ಏಕದಿನ ಪಂದ್ಯಗಳು ನಡೆದಿದ್ದು ಎಲ್ಲಾ ನಾಲ್ಕು ಪಂದ್ಯಗಳಲ್ಲಿಯೂ ಭಾರತ ಜಯ ಸಾಧಿಸಿದೆ. ಬಾಂಗ್ಲಾದೇಶ ವನಿತೆಯರ ತಂಡ ಇದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯನ್ನಾಡಲು ಅರ್ಹತೆ ಪಡೆದುಕೊಂಡಿದ್ದು, ವಿಶ್ವಕಪ್​ನಲ್ಲಿ ಇದೇ ಮೊದಲ ಬಾರಿ ಭಾರತ ವನಿತೆಯರ ತಂಡವನ್ನು ಎದುರಿಸುತ್ತಿದೆ.

ಭಾರತದ ಬ್ಯಾಟಿಂಗ್ ಬಳಗದ ವೈಫಲ್ಯ ಈಗಾಗಲೇ ಸಾಬೀತಾಗಿದೆ. ಆಗೊಮ್ಮೆ ಈಗೊಮ್ಮೆ ಕೆಲವರು ಮಿಂಚಿದ್ದು ಬಿಟ್ಟರೆ ಉಳಿದಂತೆ ವೈಫಲ್ಯ ಕಾಣುತ್ತ ಬಂದಿದೆ. ಆಸ್ಟ್ರೇಲಿಯಾ 278 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿರುವುದರಿಂದ ಮಿಥಾಲಿ ರಾಜ್ ನೇತೃತ್ವದ ಬೌಲಿಂಗ್ ವಿಭಾಗದ ಸಾಮ ರ್ಥ್ಯದ ಮೇಲೂ ಸಂದೇಹ ಉಂಟಾಗಿದೆ. ಹೀಗಾಗಿ ಇಂದಿನ ಮಾಡು-ಮಡಿ ಪಂದ್ಯದಲ್ಲಿ ಎರಡೂ ವಿಭಾಗಗಳು ಚೇತರಿಸಿಕೊಳ್ಳಬೇಕಾದ ಅಗತ್ಯವಿದೆ.

ಬಾಂಗ್ಲಾದೇಶ ತಂಡ ಆಡಿದ 4ರಲ್ಲಿ 3 ಸೋಲು ಕಂಡು ಸೆಮೀಸ್ ರೇಸ್‌ನಿಂದ ಬಹುತೇಕ ಹೊರಬಿದ್ದಿದ್ದರೂ, ಪಾಕಿಸ್ತಾನ ವಿರುದ್ಧ ಅಚ್ಚರಿಯ ಗೆಲುವು ದಾಖಲಿಸಿದ ಆತ್ಮವಿಶ್ವಾಸ ಹೊಂದಿದೆ. ಅಲ್ಲದೆ ಇತರ ಪಂದ್ಯಗಳಲ್ಲೂ ನಿಕಟ ಸೋಲನ್ನೇ ಕಂಡಿತ್ತು. ಹೀಗಾಗಿ ಮಿಥಾಲಿ ಪಡೆ ಎಚ್ಚರಿಕೆಯಿಂದಲೇ ಬಾಂಗ್ಲಾ ಸವಾಲು ಎದುರಿಸಬೇಕಾಗಿದೆ. ಬಾಂಗ್ಲಾ ವಿರುದ್ಧ ಮುಗ್ಗರಿಸಿದರೆ ಭಾರತ ತಂಡ, ಅಂತಿಮ ಲೀಗ್ ಪಂದ್ಯಕ್ಕೆ ಮೊದಲೇ ಸೆಮೀಸ್ ಆಸೆಯನ್ನೇ ಕೈಚೆಲ್ಲಬೇಕಾಗುತ್ತದೆ.

IPL 2022: ಈ ವರ್ಷ ಪ್ರಮುಖ 7 ಬದಲಾವಣೆಗಳೊಂದಿಗೆ ಆರಂಭವಾಗಲಿದೆ ಐಪಿಎಲ್‌! ಯಾವು ಆ ಬದಲಾವಣೆಗಳು?