IND vs ENG: ಮೊದಲ ದಿನವೇ ಸ್ಪಿನ್ ಮೋಡಿ: ಇಂಗ್ಲೆಂಡ್ ಆಲೌಟ್

| Updated By: ಝಾಹಿರ್ ಯೂಸುಫ್

Updated on: Jan 25, 2024 | 3:01 PM

India vs England, 1st Test: ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯು ಇಂದಿನಿಂದ (ಜ.25) ಶುರುವಾಗಿದೆ. ಈ ಸರಣಿಯ ಮೊದಲೆರಡು ಪಂದ್ಯಗಳಿಗೆ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ಎರಡು ಪಂದ್ಯಗಳಿಂದ ಕಿಂಗ್ ಕೊಹ್ಲಿ ಹಿಂದೆ ಸರಿದಿದ್ದು, ಮೂರನೇ ಪಂದ್ಯದ ವೇಳೆ ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.

IND vs ENG: ಮೊದಲ ದಿನವೇ ಸ್ಪಿನ್ ಮೋಡಿ: ಇಂಗ್ಲೆಂಡ್ ಆಲೌಟ್
IND vs ENG
Follow us on

India vs England 1st Test: ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ಇಂಗ್ಲೆಂಡ್ ತಂಡ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್​ ಆರಂಭಿಸಿದ ಬೆನ್ ಡಕೆಟ್ ಹಾಗೂ ಝಾಕ್ ಕ್ರಾಲಿ ಬಿರುಸಿನ ಆರಂಭ ಒದಗಿಸಿದ್ದರು.

11 ಓವರ್​ಗಳಲ್ಲೇ ತಂಡದ ಮೊತ್ತವನ್ನು 50 ರ ಗಡಿದಾಟಿಸುವಲ್ಲಿ ಯಶಸ್ವಿಯಾದ ಇಂಗ್ಲೆಂಡ್ ಆರಂಭಿಕ ಜೋಡಿಯನ್ನು ಮುರಿಯುವಲ್ಲಿ ಕೊನೆಗೂ ಅಶ್ವಿನ್ ಯಶಸ್ವಿಯಾದರು. 12ನೇ ಓವರ್​ನ 5ನೇ ಎಸೆತದಲ್ಲಿ ಬೆನ್ ಡಕೆಟ್ (35) ವಿಕೆಟ್ ಪಡೆದು ಅಶ್ವಿನ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ರವೀಂದ್ರ ಜಡೇಜಾ ಒಲಿ ಪೋಪ್ (1) ವಿಕೆಟ್ ಪಡೆದರು.

ಇನ್ನು 20 ರನ್​ಗಳಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಝಾಕ್ ಕ್ರಾಲಿ (20) ಮೊಹಮ್ಮದ್ ಸಿರಾಜ್ ಹಿಡಿದ ಅತ್ಯುತ್ತಮ ಕ್ಯಾಚ್​ಗೆ ಬಲಿಯಾದರು. ಈ ಹಂತದಲ್ಲಿ ಜೊತೆಗೂಡಿದ ಜಾನಿ ಬೈರ್​ಸ್ಟೋವ್ ಹಾಗೂ ಜೋ ರೂಟ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು.

ಅರ್ಧಶತಕದ ಜೊತೆಯಾಟದೊಂದಿಗೆ ಇನಿಂಗ್ಸ್ ಕಟ್ಟುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕೊನೆಗೂ ಅಕ್ಷರ್ ಪಟೇಲ್ ಯಶಸ್ವಿಯಾದರು. ಜಾನಿ ಬೈರ್​ಸ್ಟೋವ್ (37) ವಿಕೆಟ್ ಕಬಳಿಸುವ ಮೂಲಕ ಅಕ್ಷರ್ ಟೀಮ್ ಇಂಡಿಯಾಗೆ 4ನೇ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಜೋ ರೂಟ್ (29) ಜಡೇಜಾ ಎಸೆತದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು.

ಈ ಹಂತದಲ್ಲಿ ಇಂಗ್ಲೆಂಡ್ ತಂಡದಕ್ಕೆ ಆಸರೆಯಾಗಿದ್ದು ನಾಯಕ ಬೆನ್ ಸ್ಟೋಕ್ಸ್​. ಕೆಳ ಹಂತದ ಬ್ಯಾಟರ್​ಗಳೊಂದಿಗೆ ಇನಿಂಗ್ಸ್ ಕಟ್ಟಿದ ಸ್ಟೋಕ್ಸ್​ 69 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಮತ್ತೊಂದೆಡೆ ಬೆನ್ ಫೋಕ್ಸ್ (4), ರೆಹಾನ್ ಅಹ್ಮದ್ (13) ಹಾಗೂ ಟಾಮ್ ಹಾರ್ಟ್ಲಿ (23) ಹಾಗೂ ಮಾರ್ಕ್ ವುಡ್ (11) ವಿಕೆಟ್ ಒಪ್ಪಿಸಿದರು.

ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ಬೆನ್ ಸ್ಟೋಕ್ಸ್ 70 ರನ್​ ಬಾರಿಸುವ ಮೂಲಕ ತಂಡದ ಮೊತ್ತವನ್ನು 246 ಕ್ಕೆ ತಂದು ನಿಲ್ಲಿಸಿದರು. ಈ ವೇಳೆ ದಾಳಿಗಿಳಿದ ಜಸ್​ಪ್ರೀತ್ ಬುಮ್ರಾ ಎಸೆತವನ್ನು ಗುರುತಿಸುವಲ್ಲಿ ಎಡವಿದ ಸ್ಟೋಕ್ಸ್ (70) ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್​ 246 ರನ್​ಗಳಿಗೆ ಅಂತ್ಯವಾಯಿತು.

ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ತಲಾ 3 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಹಾಗೂ  ಜಸ್​ಪ್ರೀತ್ ಬುಮ್ರಾ ತಲಾ ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ: Joe Root: ರೂಟ್ ಕ್ಲಿಯರ್…ಸಚಿನ್ ತೆಂಡೂಲ್ಕರ್ ದಾಖಲೆ ಉಡೀಸ್..!

ಇಂಗ್ಲೆಂಡ್ ಪ್ಲೇಯಿಂಗ್ 11:

  • ಝಾಕ್ ಕ್ರಾಲಿ
  •  ಬೆನ್ ಡಕೆಟ್
  • ಒಲಿ ಪೋಪ್
  • ಜೋ ರೂಟ್
  •  ಜಾನಿ ಬೈರ್‌ಸ್ಟೋವ್
  • ಬೆನ್ ಸ್ಟೋಕ್ಸ್ (ನಾಯಕ)
  • ಬೆನ್ ಫೋಕ್ಸ್ (ವಿಕೆಟ್ ಕೀಪರ್)
  •  ರೆಹಾನ್ ಅಹ್ಮದ್
  •  ಟಾಮ್ ಹಾರ್ಟ್ಲಿ
  •  ಮಾರ್ಕ್ ವುಡ್
  • ಜ್ಯಾಕ್ ಲೀಚ್

ಭಾರತ ಪ್ಲೇಯಿಂಗ್ 11:

  • ರೋಹಿತ್ ಶರ್ಮಾ (ನಾಯಕ)
  • ಯಶಸ್ವಿ ಜೈಸ್ವಾಲ್
  • ಶುಭ್​ಮನ್ ಗಿಲ್
  • ಶ್ರೇಯಸ್ ಅಯ್ಯರ್
  • ಕೆಎಲ್ ರಾಹುಲ್
  • ಕೆಎಸ್ ಭರತ್ (ವಿಕೆಟ್ ಕೀಪರ್)
  • ರವೀಂದ್ರ ಜಡೇಜಾ
  • ಅಕ್ಷರ್ ಪಟೇಲ್
  • ರವಿಚಂದ್ರನ್ ಅಶ್ವಿನ್
  • ಜಸ್​ಪ್ರೀತ್ ಬುಮ್ರಾ (ಉಪನಾಯಕ)
  • ಮೊಹಮ್ಮದ್ ಸಿರಾಜ್.

 

Published On - 2:58 pm, Thu, 25 January 24