India vs England: 77 ಓವರ್ಗಳಲ್ಲಿ ಟೀಮ್ ಇಂಡಿಯಾ ಬೌಲರ್ಗಳ ಬೆಂಡೆತ್ತಿದ ಆಂಗ್ಲರು..!
India vs England: ಎಡ್ಜ್ಬಾಸ್ಟನ್ ಟೆಸ್ಟ್ನಲ್ಲಿ ಭಾರತದ ವಿರುದ್ದ ಭರ್ಜರಿ ಜಯ ಸಾಧಿಸುವ ಮೂಲಕ ಇಂಗ್ಲೆಂಡ್ ತಂಡವು ಟೆಸ್ಟ್ ಸರಣಿಯನ್ನು 2-2 ಅಂತರದಿಂದ ಸಮಬಲಗೊಳಿಸಿದೆ. ಈ ಮೂಲಕ ಸರಣಿಯನ್ನು ಡ್ರಾನಲ್ಲಿ ಅಂತ್ಯಗೊಳಿಸಲು ಯಶಸ್ವಿಯಾಗಿದೆ.
India vs England 5th Test: ವಿಶ್ವದ ಬಲಿಷ್ಠ ಬೌಲಿಂಗ್ ಲೈನಪ್ ಎಂದೇ ಕರೆಸಿಕೊಳ್ಳುವ ಟೀಮ್ ಇಂಡಿಯಾ (Team India) ಬೌಲರ್ಗಳನ್ನು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಬೆಂಡೆತ್ತಿರುವುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ. ಏಕೆಂದರೆ ತಾಳ್ಮೆಯ ಪ್ರತೀಕವಾಗಿರುವ ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಹೊಸ ಆಕ್ರಮಣಕಾರಿ ತಂಡವಾಗಿ ಗುರುತಿಸಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿಯೇ ಇಂಗ್ಲೆಂಡ್ ತಂಡವು ಕಳೆದ ನಾಲ್ಕು ಟೆಸ್ಟ್ ಪಂದ್ಯಗಳನ್ನು ಚೇಸ್ ಮಾಡಿ ಗೆದ್ದಿರುವುದು. ಈ ಬಾರಿ ಬೃಹತ್ ಮೊತ್ತವನ್ನೇ ಚೇಸ್ ಮಾಡಿ ಐತಿಹಾಸಿಕ ಸಾಧನೆ ಮಾಡಿರುವುದು ವಿಶೇಷ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಮೈದಾನದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತ್ತು. ರಿಷಭ್ ಪಂತ್ (146) ಹಾಗೂ ಜಡೇಜಾ (104) ಅವರ ಶತಕದ ನೆರವಿನಿಂದ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 416 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ ಕಲೆಹಾಕಿದ್ದು ಕೇವಲ 284 ರನ್ ಮಾತ್ರ. ಇತ್ತ 3ನೇ ದಿನದಾಟದಲ್ಲೇ ಸೆಕೆಂಡ್ ಇನಿಂಗ್ಸ್ ಅವಕಾಶ ಪಡೆದ ಟೀಮ್ ಇಂಡಿಯಾಗೆ ಬೃಹತ್ ಮೊತ್ತ ಪೇರಿಸುವ ಉತ್ತಮ ಅವಕಾಶವಿತ್ತು.
ಆದರೆ ಭಾರತೀಯ ಬ್ಯಾಟ್ಸ್ಮನ್ಗಳು ಬಾರಿಸಿದ್ದು ಕೇವಲ 245 ರನ್ಗಳು ಮಾತ್ರ. ಇದಾಗ್ಯೂ ಮೊದಲ ಇನಿಂಗ್ಸ್ನಲ್ಲಿ 132 ರನ್ಗಳ ಮುನ್ನಡೆ ಹೊಂದಿದ್ದ ಟೀಮ್ ಇಂಡಿಯಾ ಇಂಗ್ಲೆಂಡ್ಗೆ ಒಟ್ಟು 378 ರನ್ಗಳ ಟಾರ್ಗೆಟ್ ನೀಡಿತು. ಹೀಗಾಗಿ ಈ ಪಂದ್ಯವು ಡ್ರಾನಲ್ಲಿ ಅಂತ್ಯವಾಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಏಕೆಂದೆರೆ ವಿಶ್ವದ ಬಲಿಷ್ಠ ಬೌಲಿಂಗ್ ಲೈನಪ್ ಟೀಮ್ ಇಂಡಿಯಾ ಪಾಲಿಗಿತ್ತು. ಆದರೆ ಕೇವಲ 77 ಓವರ್ಗಳಲ್ಲಿ ಎಲ್ಲಾ ಲೆಕ್ಕಾಚಾರಗಳನ್ನು ಇಂಗ್ಲೆಂಡ್ ತಂಡ ತಲೆಕೆಳಗಾಗಿಸಿದೆ.
378 ರನ್ಗಳ ಬೃಹತ್ ಗುರಿಯನ್ನು ಕೇಂದ್ರವಾಗಿಸಿ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ಗೆ ಆರಂಭಿಕ ಆಟಗಾರ ಅಲೆಕ್ಸ್ ಲೀಸ್ ಸ್ಪೋಟಕ ಆರಂಭ ಒದಗಿಸಿದ್ದರು. ಕೇವಲ 65 ಎಸೆತಗಳಲ್ಲಿ 56 ರನ್ ಸಿಡಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮತ್ತೊಂದೆಡೆ ಜಾಕ್ ಕ್ರಾವ್ಲಿ ಕೂಡ ಉಪಯುಕ್ತ 46 ರನ್ಗಳ ಕಾಣಿಕೆ ನೀಡಿದರು. ಇದಾಗ್ಯೂ ಟೀಮ್ ಇಂಡಿಯಾ 109 ರನ್ಗಳಿಗೆ 3 ವಿಕೆಟ್ ಪಡೆದು ತುಸು ಮೇಲುಗೈ ಸಾಧಿಸಿತ್ತು. ಆದರೆ ಜೋ ರೂಟ್ ಹಾಗೂ ಜಾನಿ ಬೈರ್ಸ್ಟೋವ್ ಆಗಮನದೊಂದಿಗೆ ಇಂಗ್ಲೆಂಡ್ ತಂಡದ ಗುರಿಯೇನು ಎಂಬುದು ಸಹ ಸ್ಪಷ್ಟವಾಗಿತ್ತು.
ನಾಲ್ಕನೇ ದಿನದಾಟದಲ್ಲೇ ರೂಟ್ ಹಾಗೂ ಬೈರ್ಸ್ಟೋವ್ ಬಿರುಸಿನ ಇನಿಂಗ್ ಆಡಿದ್ದರು. ಟೀಮ್ ಇಂಡಿಯಾ ಬೌಲರ್ಗಳನ್ನು ಬೆಂಡೆತ್ತಿದ್ದ ಈ ಜೋಡಿ ದಿನದಾಟದ ಅಂತ್ಯಕ್ಕೆ 259 ರನ್ ಕಲೆಹಾಕಿದ್ದರು. ಅಂದರೆ 378 ರನ್ಗಳ ಟಾರ್ಗೆಟ್ನ ಬಹುತೇಕ ಸ್ಕೋರ್ ಅನ್ನು ನಾಲ್ಕನೇ ದಿನದಾಟದಲ್ಲಿ ಕಲೆಹಾಕಿ ಗೆಲುವನ್ನು ಖಚಿತಪಡಿಸಿಕೊಂಡಿದ್ದರು.
ಇನ್ನು ಐದನೇ ದಿನದಾಟದಲ್ಲೂ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಭಾರತೀಯ ಬೌಲರ್ಗಳ ಬೆವರಿಳಿಸಿದ ಜೋ ರೂಟ್ ಕೇವಲ 136 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದರು. ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ಜಾನಿ ಬೈರ್ಸ್ಟೋವ್ ಕೂಡ 138 ಎಸೆತಗಳಲ್ಲಿ ಸೆಂಚುರಿ ಪೂರೈಸಿದರು. ಅಂದರೆ ಶತಕ ಬಾರಿಸಲು ಇಬ್ಬರು ಬ್ಯಾಟ್ಸ್ಮನ್ಗಳು ಹೆಚ್ಚುವರಿಯಾಗಿ ತೆಗೆದುಕೊಂಡಿದ್ದು ಕೇವಲ 36 ಹಾಗೂ 38 ಎಸೆತಗಳನ್ನು ಮಾತ್ರ ಎಂಬುದು ಇಲ್ಲಿ ಗಮನಾರ್ಹ.
This team. This way of playing. Simply irresistible ❤️
Scorecard/Clips: https://t.co/jKoipF4U01
??????? #ENGvIND ?? pic.twitter.com/Phl1BNkGol
— England Cricket (@englandcricket) July 5, 2022
ಅಂತಿಮವಾಗಿ ಜೋ ರೂಟ್ 173 ಎಸೆತಗಳಲ್ಲಿ 146 ರನ್ ಬಾರಿಸಿದರೆ, ಜಾನಿ ಬೈರ್ಸ್ಟೋವ್ 145 ಎಸೆತಗಳಲ್ಲಿ 114 ರನ್ ಚಚ್ಚಿದರು. ಪರಿಣಾಮ ಟೀಮ್ ಇಂಡಿಯಾ ನೀಡಿದ 378 ರನ್ಗಳ ಟಾರ್ಗೆಟ್ ಅನ್ನು ಇಂಗ್ಲೆಂಡ್ ತಂಡವು ಕೇವಲ 77 ಓವರ್ಗಳಲ್ಲೇ ಚೇಸ್ ಮಾಡಿತು. ಅಂದರೆ ಪ್ರತಿ ಓವರ್ಗೆ 4.9 ಸರಾಸರಿಯಲ್ಲಿ ರನ್ಗಳಿಸಿದ ಇಂಗ್ಲೆಂಡ್ ತಂಡವು ಬೃಹತ್ ಮೊತ್ತವನ್ನು ಚೇಸ್ ಮಾಡಿ ಹೊಸ ದಾಖಲೆ ಬರೆದಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ 2019 ರಲ್ಲಿ ಆಸ್ಟ್ರೇಲಿಯಾ ವಿರುದ್ದ 359 ಚೇಸ್ ಮಾಡಿದ್ದು ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿರುವ ಆಂಗ್ಲರು, 77 ಓವರ್ಗಳಲ್ಲಿ 378 ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ವಿಶ್ವದ ಬಲಿಷ್ಠ ಬೌಲಿಂಗ್ ಲೈನಪ್ ಹೊಂದಿರುವ ಟೀಮ್ ಇಂಡಿಯಾ ವಿರುದ್ದ ಎಂಬುದು ವಿಶೇಷ.
Published On - 5:09 pm, Tue, 5 July 22