ಲಂಡನ್ನ ಕೆನ್ನಿಂಗ್ಟನ್ ಓವಲ್ (Oval) ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (England) ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ (India) ಭರ್ಜರಿ ಕಮ್ಬ್ಯಾಕ್ ಮಾಡಿದೆ. ವಿದೇಶಿ ನೆಲದಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಹಿಟ್ಮ್ಯಾನ್ ರೋಹಿತ್ ಶರ್ಮಾ (Rohit Sharma) ಅಬ್ಬರಿಸಿದರೆ, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ (Cheteshwar Pujara) ತಮ್ಮ ಹೆಸರಿಗೆ ತಕ್ಕಂತೆ ಬ್ಯಾಟ್ ಬೀಸಿದರು. ಪರಿಣಾಮ ಟೀಮ್ ಇಂಡಿಯಾ (Team India) 171 ರನ್ಗಳ ಮುನ್ನಡೆ ಸಾಧಿಸಿದ್ದು, ದೊಡ್ಡ ಮೊತ್ತದತ್ತ ಕಣ್ಣಿಟ್ಟಿದೆ. ಟೆಸ್ಟ್ ಕ್ರಿಕೆಟ್ನಲ್ಲಿ 8ನೇ ಶತಕ ಪೂರೈಸಿದ ರೋಹಿತ್ ಶರ್ಮಾ ತಂಡಕ್ಕೆ ಆಸರೆಯಾಗಿ ನಿಂತರು. ಪೂಜಾರ ಜೊತೆಗೂಡಿ 153 ರನ್ಗಳ ಕಾಣಿಕೆ ನೀಡಿದರು. ಅಲ್ಲದೆ ವಿಶೇಷ ದಾಖಲೆಯನ್ನೂ ಬರೆದಿದ್ದಾರೆ.
ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನ, ಮನಮೋಹಕ ಹೊಡೆತಗಳ ಮೂಲಕ ರೋಹಿತ್ ಶರ್ಮಾ ನೆರದಿದ್ದ ಅಪಾರ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ರಸದೌತಣ ಉಣಬಡಿಸಿದರು. 256 ಎಸೆತಗಳನ್ನು ಎದುರಿಸಿದ್ದ ರೋಹಿತ್, ಒಂದು ಭರ್ಜರಿ ಸಿಕ್ಸರ್ ಹಾಗೂ 14 ಬೌಂಡರಿಗಳ ನೆರವಿನಿಂದ 127 ರನ್ ಗಳಿಸಿದರು. ಹೊಸ ಚೆಂಡಿನಲ್ಲಿ ಬೌಲ್ ಮಾಡಿದ ಓಲ್ಲೀ ರಾಬಿನ್ಸನ್ ಎಸೆತವನ್ನು ಅರಿಯುವಲ್ಲಿ ವಿಫಲರಾದ ರೋಹಿತ್, ಪುಲ್ ಹೊಡೆಯಲು ಪ್ರಯತ್ನಿಸಿ ಕ್ಯಾಚ್ ನೀಡಿ ನಿರ್ಗಮಿಸಿದರು.
11000 international runs and counting as an opener for @ImRo45 ?#TeamIndia pic.twitter.com/35r2rz2jjm
— BCCI (@BCCI) September 4, 2021
ವಿದೇಶಿ ನೆಲದಲ್ಲಿ ಚೊಚ್ಚಲ ಶತಕದ ಜೊತೆಗೆ ರೋಹಿತ್ ಶರ್ಮಾ ಪ್ರಸಕ್ತ ವರ್ಷದಲ್ಲಿ 1000 ರನ್ ಹಾಗೂ ಟೆಸ್ಟ್ ವೃತ್ತಿ ಜೀವನದಲ್ಲಿ 3000 ರನ್ ಪೂರ್ಣಗೊಳಿಸಿದರು. ಅದರಲ್ಲೂ ಸಿಕ್ಸರ್ ಮೂಲಕ ಮೂರಂಕಿ ವೈಯಕ್ತಿಕ ಮೊತ್ತ ಕಲೆಹಾಕಿದ್ದು ರೋಹಿತ್ ಇನಿಂಗ್ಸ್‌ಗೆ ಇನ್ನಷ್ಟು ವಿಶೇಷತೆ ತಂದುಕೊಟ್ಟಿತು. ಈ ಮೂಲಕ ಒಟ್ಟು ಆರು ದಾಖಲೆಯನ್ನು ಹಿಟ್ಮ್ಯಾನ್ ತನ್ನ ತೆಕ್ಕೆಗೆ ಸೇರಿಸಿಕೊಂಡರು.
ಸದ್ಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಉತ್ತಮ ಮುನ್ನಡೆಯತ್ತ ದಾಪುಗಾಲಿಡುತ್ತಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಕೊಹ್ಲಿ ಪಡೆ 3 ವಿಕೆಟ್ ಕಳೆದುಕೊಂಡು 270 ರನ್ ಬಾರಿಸಿದ್ದು, ಇಂಗ್ಲೆಂಡ್ಗಿಂತ 171 ರನ್ಗಳ ಮುಂದಿದೆ. ಕೆ. ಎಲ್ ರಾಹುಲ್ 46 ರನ್ ಗಳಿಸಿ ಔಟ್ ಆದರೆ, ರೋಹಿತ್ ಶರ್ಮಾ 127 ಹಾಗೂ ಚೇತೇಶ್ವರ್ ಪೂಜಾರ 61 ರನ್ ಬಾರಿಸಿ ಆಸರೆಯಾದರು. ನಾಯಕ ವಿರಾಟ್ ಕೊಹ್ಲಿ 22 ರನ್ ಗಳಿಸಿ ಹಾಗೂ ರವೀಂದ್ರ ಜಡೇಜಾ 9 ರನ್ ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
(India vs England Rohit Sharmas century creates a new 6 records in ind vs eng 4th test)