
ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಲೀಡ್ಸ್ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ ಭೋಜನ ವಿರಾಮದ ವೇಳೆಗೆ ಎರಡು ಬ್ಯಾಕ್ ಟು ಬ್ಯಾಕ್ ಆಘಾತ ಎದುರಿಸಿದೆ. ಉತ್ತಮ ಆರಂಭ ಪಡೆದಿದ್ದ ಟೀಂ ಇಂಡಿಯಾ ಕೇವಲ 1 ರನ್ ಅಂತರದಲ್ಲಿ 2 ವಿಕೆಟ್ ಕಳೆದುಕೊಂಡಿರುವುದು ತಂಡಕ್ಕೆ ಕೊಂಚ ಹಿನ್ನಡೆಯನ್ನುಂಟು ಮಾಡಿದೆ. ಆರಂಭಿಕ ರಾಹುಲ್ (KL Rahul) 42 ರನ್ ಬಾರಿಸಿ ಬ್ರೈಡನ್ ಕಾರ್ಸೆಗೆ ವಿಕೆಟ್ ಒಪ್ಪಿಸಿದರೆ, ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಸಾಯಿ ಸುದರ್ಶನ್ (Sai Sudharsan) 4 ಎಸೆತಗಳಲ್ಲಿ ಯಾವುದೇ ರನ್ ಬಾರಿಸದೆ ಸೊನ್ನೆಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಸುದರ್ಶನ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಸ್ಮರಣೀಯಗೊಳಿಸುವಲ್ಲಿ ವಿಫಲರಾಗಿದ್ದಾರೆ.
ವಾಸ್ತವವಾಗಿ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಭಾರತ ತಂಡಕ್ಕೆ ಉತ್ತಮ ಆರಂಭ ನೀಡಿ ಮೊದಲ ವಿಕೆಟ್‌ಗೆ 91 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಆದರೆ ಕೆಎಲ್ ಅವರನ್ನು ಔಟ್ ಮಾಡುವ ಮೂಲಕ ಬ್ರೈಡನ್ ಕಾರ್ಸ್ ಈ ಪಾಲುದಾರಿಕೆಯನ್ನು ಮುರಿದರು. ಆರಂಭದಿಂದಲೂ ಉತ್ತಮವಾಗಿ ಬ್ಯಾಟ್ ಬೀಸಿದ ರಾಹುಲ್ 78 ಎಸೆತಗಳಲ್ಲಿ ಎಂಟು ಬೌಂಡರಿಗಳ ಸಹಾಯದಿಂದ 42 ರನ್ ಗಳಿಸಿ ಔಟಾದರು. ರಾಹುಲ್ ಔಟಾದ ನಂತರ, ಕ್ರೀಸ್‌ಗೆ ಬಂದ ಸುದರ್ಶನ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯದೆಯೇ ಔಟಾದರು. ಊಟದ ವಿರಾಮದ ವೇಳೆಗೆ ಭಾರತ ಎರಡು ವಿಕೆಟ್‌ಗಳಿಗೆ 92 ರನ್ ಗಳಿಸಿದೆ. ಪ್ರಸ್ತುತ ಯಶಸ್ವಿ ಜೈಸ್ವಾಲ್ 74 ಎಸೆತಗಳಲ್ಲಿ ಎಂಟು ಬೌಂಡರಿಗಳ ಸಹಾಯದಿಂದ 42 ರನ್ ಗಳಿಸಿ ಆಟವಾಡುತ್ತಿದ್ದಾರೆ. ಇಲ್ಲಿಯವರೆಗೆ, ಕಾರ್ಸ್ ಮತ್ತು ಸ್ಟೋಕ್ಸ್ ಇಂಗ್ಲೆಂಡ್ ಪರ ತಲಾ ಒಂದು ವಿಕೆಟ್ ಪಡೆದಿದ್ದಾರೆ.
IND vs ENG: ಟಾಸ್ ಗೆದ್ದ ಇಂಗ್ಲೆಂಡ್; ಭಾರತದ ಪರ ಸುದರ್ಶನ್ ಪಾದಾರ್ಪಣೆ, ಕರುಣ್ಗೂ ಅವಕಾಶ
ವಾಸ್ತವವಾಗಿ ಸಾಯಿ ಸುದರ್ಶನ್ ಅವರಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೆಚ್ಚಿನ ಅನುಭವವಿಲ್ಲ. ಆದರೆ ಇದರ ಹೊರತಾಗಿಯೂ ಅವರಿಗೆ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುವ ಅವಕಾಶ ನೀಡಲಾಗಿದೆ. ಇದಕ್ಕೆ ಕಾರಣ ಸುದರ್ಶನ್ ಚೆಂಡನ್ನು ತಡವಾಗಿ ಆಡುವುದರಲ್ಲಿ ನಿಸ್ಸೀಮರು ಹಾಗೆಯೇ ದೀರ್ಘ ಇನ್ನಿಂಗ್ಸ್‌ಗಳನ್ನು ಆಡುವುಲ್ಲಿ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಅವರಿಗೆ ಅವಕಾಶ ನೀಡಲಾಗಿದೆ. ಆದಾಗ್ಯೂ ಸುದರ್ಶನ್ ಮೊದಲ ಇನ್ನಿಂಗ್ಸ್‌ನಲ್ಲಿ ನಿರಾಶೆ ಮೂಡಿಸಿದ್ದಾರೆ. ಸುದರ್ಶನ್ ಇಲ್ಲಿಯವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 7 ಶತಕಗಳನ್ನು ಬಾರಿಸಿದ್ದು 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಸುದರ್ಶನ್ ಆಯ್ಕೆಗೆ ಮತ್ತೊಂದು ಮುಖ್ಯ ಕಾರಣವೆಂದರೆ ಇತ್ತೀಚೆಗೆ ಮುಗಿದ ಐಪಿಎಲ್ನಲ್ಲಿ ಅವರ ಪ್ರದರ್ಶನ. ಗುಜರಾತ್ ಪರ ಆರಂಭಿಕನಾಗಿ ಅಮೋಘ ಪ್ರದರ್ಶನ ನೀಡಿದ್ದ ಸುದರ್ಶನ್, ಟೂರ್ನಿಯಲ್ಲಿ 759 ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ಕೂಡ ಗೆದ್ದಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:57 pm, Fri, 20 June 25