ಲೀಡ್ಸ್ ಟೆಸ್ಟ್‌ನಲ್ಲಿ ಭಾರತ- ಇಂಗ್ಲೆಂಡ್ ಆಟಗಾರರು ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯಲು ಕಾರಣವೇನು?
India vs England Leeds Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಲೀಡ್ಸ್‌ನಲ್ಲಿ ಆರಂಭವಾಗಿದೆ. ಅಹಮದಾಬಾದ್ ವಿಮಾನ ಅಪಘಾತದಲ್ಲಿ ಮೃತಪಟ್ಟವರಿಗೆ ಗೌರವ ಸಲ್ಲಿಸಲು ಎರಡೂ ತಂಡಗಳು ಕಪ್ಪು ಪಟ್ಟಿ ಧರಿಸಿ ಆಡುತ್ತಿವೆ. ಸಾಯಿ ಸುದರ್ಶನ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ ಮತ್ತು ಕರುಣ್ ನಾಯರ್ 8 ವರ್ಷಗಳ ಬಳಿಕ ತಂಡಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ಟಾಸ್ ಗೆದ್ದು ಭಾರತವನ್ನು ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿದೆ.

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಇಂದಿನಿಂದ ಆರಂಭವಾಗಿದೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್, ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಲೀಡ್ಸ್‌ನ ಐತಿಹಾಸಿಕ ಮೈದಾನವಾದ ಹೆಡಿಂಗ್ಲಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತದ ಪರ ಯುವ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ (Sai Sudharsan) ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು, ಕನ್ನಡಿಗ ಕರುಣ್ ನಾಯರ್ ಕೂಡ 8 ವರ್ಷಗಳ ಬಳಿಕ ಪ್ಲೇಯಿಂಗ್ ಇಲೆವೆನ್ ಸ್ಥಾನ ಪಡೆದಿದ್ದಾರೆ. ಇನ್ನು ಈ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ತಮ್ಮ ಕೈಗೆ ಕಪ್ಪು ಪಟ್ಟಿಯನ್ನು (Black Armbands ) ಧರಿಸಿ ಕಣಕ್ಕಿಳಿದಿದ್ದಾರೆ. ಆಟಗಾರರು ಈ ಕಪ್ಪು ಪಟ್ಟಿಯನ್ನು ಧರಿಸಲು ಕಾರಣವೇನು ಎಂಬುದರ ವಿವರ ಇಲ್ಲಿದೆ.
ಎರಡು ನಿಮಿಷಗಳ ಮೌನಾಚರಣೆ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಲೀಡ್ಸ್‌ನಲ್ಲಿ ಆರಂಭವಾಗಿದ್ದು, ಅಹಮದಾಬಾದ್ ವಿಮಾನ ಅಪಘಾತದಲ್ಲಿ ಮಡಿದವರಿಗೆ ಗೌರವ ಸಲ್ಲಿಸಲು ಉಭಯ ತಂಡಗಳ ಆಟಗಾರರು ತಮ್ಮ ತೋಳುಗಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕಣಕ್ಕಿಳಿದಿದ್ದಾರೆ. ಅಲ್ಲದೆ, ರಾಷ್ಟ್ರಗೀತೆಗೆ ಮೊದಲು ಎರಡೂ ತಂಡಗಳು ಎರಡು ನಿಮಿಷಗಳ ಮೌನಾಚರಣೆ ಕೂಡ ನಡೆಸಿದವು. ವಾಸ್ತವವಾಗಿ ಜೂನ್ 12 ರಂದು, ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ಸಂಖ್ಯೆ AI171 ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ 270 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
A moment of silence was observed before the national anthems by Indian and England players, who wore black armbands to pay tribute to the victims of the Ahmedabad plane crash. 🕊️🙏#ENGvIND #TestCricket #Ahmedabad #Sportskeeda pic.twitter.com/BuNDYfvPuD
— Sportskeeda (@Sportskeeda) June 20, 2025
270 ಕ್ಕೂ ಹೆಚ್ಚು ಜನರ ಸಾವು
ಏರ್ ಇಂಡಿಯಾ ವಿಮಾನ ಜೂನ್ 12 ರಂದು ಮಧ್ಯಾಹ್ನ 13:38 ಕ್ಕೆ ಟೇಕ್ ಆಫ್ ಆಯಿತು. ಏರ್ ಇಂಡಿಯಾ ಪ್ರಕಾರ, ಈ ವಿಮಾನದಲ್ಲಿ 242 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ಪ್ರಯಾಣಿಕರಲ್ಲಿ 169 ಭಾರತೀಯರೊಂದಿಗೆ ಬ್ರಿಟನ್, ಪೋರ್ಚುಗಲ್ ಮತ್ತು ಕೆನಡಾ ನಾಗರಿಕರು ಸೇರಿದ್ದರು. ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ಒಟ್ಟು 270 ಕ್ಕೂ ಹೆಚ್ಚು ಜನರು ಈ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದರು.
IND vs ENG: ಟಾಸ್ ಗೆದ್ದ ಇಂಗ್ಲೆಂಡ್; ಭಾರತದ ಪರ ಸುದರ್ಶನ್ ಪಾದಾರ್ಪಣೆ, ಕರುಣ್ಗೂ ಅವಕಾಶ
ಎರಡೂ ತಂಡಗಳ ಪ್ಲೇಯಿಂಗ್- 11
ಭಾರತ ತಂಡ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭ್ಮನ್ ಗಿಲ್ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಕರುಣ್ ನಾಯರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಇಂಗ್ಲೆಂಡ್: ಜ್ಯಾಕ್ ಕ್ರೌಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಶ್ ಟಂಗ್, ಶೋಯೆಬ್ ಬಶೀರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:51 pm, Fri, 20 June 25
