India vs England: ಬರೋಬ್ಬರಿ 19 ವರ್ಷಗಳ ಬಳಿಕ ಲೀಡ್ಸ್ನಲ್ಲಿ ಕಣಕ್ಕಿಳಿಯಲಿರುವ ಕೊಹ್ಲಿ ಪಡೆ: ಅಂಕಿ ಅಂಶ ಹೇಗಿದೆ?
Virat Kohli: ಆಗಸ್ಟ್ 25 ರಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯ ಲೀಡ್ಸ್ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶೇಷ ಎಂದರೆ ಬರೋಬ್ಬರಿ 19 ವರ್ಷಗಳ ಬಳಿಕ ಈ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಪಂದ್ಯವನ್ನು ಆಡುತ್ತಿದೆ.
ಇಂಗ್ಲೆಂಡ್ (England) ವಿರುದ್ಧದ ಐತಿಹಾಸಿಕ ಲಾರ್ಡ್ಸ್ ಟೆಸ್ಟ್‌ನಲ್ಲಿ (Lords Test) ಭರ್ಜರಿ ಗೆಲುವು ಪಡೆದಿದ್ದ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ಭಾರತ ತಂಡ (Team India) ಸದ್ಯ ಬುಧವಾರದಿಂದ ಹೆಡಿಂಗ್ಲೆಯಲ್ಲಿ (Headingley ) ಆರಂಭವಾಗಲಿರುವ ಮೂರನೇ ಟೆಸ್ಟ್ (3rd Test) ಪಂದ್ಯಕ್ಕೆ ಸಜ್ಜಾಗುತ್ತಿದೆ. ಮೊದಲ ಟೆಸ್ಟ್ ಪಂದ್ಯ ಮಳೆಯಿಂದ ಡ್ರಾಗೊಂಡರೆ, ಎರಡನೇ ಟೆಸ್ಟ್ ಪಂದ್ಯವನ್ನು ಭಾರತ 151 ರನ್‌ಗಳಿಂದ ಜಯ ದಾಖಲಿಸಿತು. ಇದರಿಂದ 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಯಿಂದ ಮುನ್ನಡೆ ಸಾಧಿಸಿದೆ. ಟೀಮ್ ಇಂಡಿಯಾ ಗೆಲುವಿನ ಓಟವನ್ನು ಮುಂದುವರೆಸುವ ಇರಾದೆಯಲ್ಲಿದ್ದರೆ, ಇತ್ತ ಆಂಗ್ಲರ (England) ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಇಂಜುರಿಯಿಂದ ಮಾರ್ಕ್ ವುಡ್ (Mark Wood) ಹೊರಬಿದ್ದರೆ, ಮೂರು ವರ್ಷಗಳ ಬಳಿಕ ಡೇವಿಡ್ ಮಲನ್ರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಈ ಮೂಲಕ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ತಯಾರಾಗಿದೆ. ಹೀಗೆ ನಾನಾ ವಿಚಾರಕ್ಕೆ ಮೂರನೇ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
ಆಗಸ್ಟ್ 25 ರಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯ ಲೀಡ್ಸ್ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶೇಷ ಎಂದರೆ ಬರೋಬ್ಬರಿ 19 ವರ್ಷಗಳ ಬಳಿಕ ಈ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಲೀಡ್ಸ್ನ ಹೆಡಿಂಗ್ಲೆ ಭಾರತಕ್ಕೆ ಅದೃಷ್ಟದ ಕ್ರೀಡಾಂಗಣ ಎಂದು ಹೇಳಲು ಸಾಧ್ಯವಿಲ್ಲ. ಯಾಕಂದ್ರೆ ಭಾರತ ಈ ವರೆಗೆ ಇಲ್ಲಿ ಇಂಗ್ಲೆಂಡ್ ವಿರುದ್ಧ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಎರಡರಲ್ಲಷ್ಟೆ ಗೆದ್ದಿದೆ. ಮೂರರಲ್ಲಿ ಇಂಗ್ಲೆಂಡ್ ಜಯಿಸಿದರೆ ಒಂದು ಡ್ರಾ ಆಗಿದೆ.
ಆದರೆ, ಈ ಮೈದಾನದಲ್ಲಿ ಕೊನೆಯದಾಗಿ ಆಡಿದ ಎರಡೂ ಪಂದ್ಯಗಳಲ್ಲಿ ಭಾರತ ಗೆದ್ದು ಬೀಗಿದೆ. ಕಪಿಲ್ ದೇವ್ ನಾಯಕತ್ವದಲ್ಲಿ 1986ರ ಟೆಸ್ಟ್ ಮತ್ತು 2002 ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಜಯ ಸಾಧಿಸಿತ್ತು. ಒಟ್ಟಾರೆಯಾಗಿ ಲೀಡ್ಸ್ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ 78 ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ತಂಡ 29 ಪಂದ್ಯಗಳಲ್ಲಿ ಗೆದ್ದರೆ, ಬೌಲಿಂಗ್ ಆಯ್ಕೆ ಮಾಡಿಕೊಂಡ ತಂಡ 31 ಪಂದ್ಯಗಳಲ್ಲಿ ಜಯ ಸಾಧಿಸಿದೆ. 18 ಪಂದ್ಯ ಫಲಿತಾಂಶವಿಲ್ಲದೆ ಡ್ರಾ ಆಗಿದೆ.
ಮೇಲ್ನೋಟಕ್ಕೆ ತವರಿನಂಗಳದಲ್ಲಿ ಇಂಗ್ಲೆಂಡ್ ಬಲಿಷ್ಠವಾಗಿ ಕಂಡರೂ ಟೀಮ್ ಇಂಡಿಯಾ ಗೆಲ್ಲುವ ನೆಚ್ಚಿನ ತಂಡವಾಗಿದೆ. ಹೆಡಿಂಗ್ಲೆ ಪಿಚ್ ಪಂದ್ಯದುದ್ದಕ್ಕೂ ವೇಗದ ಬೌಲರ್‌ಗಳಿಗೆ ಹೆಚ್ಚಿನ ಸಹಕಾರಿಯಾಗುವ ಸಾಧ್ಯತೆಯಿದೆ. ಇದರ ಜೊತೆಗೆ ಬ್ಯಾಟ್ಸ್‌ಮನ್‌ಗಳಿಗೂ ಪೂರಕವಾಗಿ ವರ್ತಿಸಲಿದೆ. ನಾಲ್ಕು ಮತ್ತು ಐದನೇ ದಿನದಲ್ಲಿ ಸ್ಪಿನ್ನರ್‌ಗಳು ಕೂಡ ಪಿಚ್‌ನ ಲಾಭವನ್ನು ಪಡೆಯುವ ಅವಕಾಶಗಳಿದೆ.
ಇನ್ನೂ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ತುಂಬಾ ಕಡಿಮೆಯಿದೆ. ಐದು ದಿನಗಳ ಕಾಲವೂ ಪಂದ್ಯ ನಡೆಯಲು ಪೂರಕವಾದ ವಾತಾವರಣವಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸುದ್ದಿ. ಸರಾಸರಿ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿದೆ. ಪಂದ್ಯ ನಡೆಯುವ ಐದು ದಿನಗಳಲ್ಲಿಯೂ ಮಳೆಯಾಗುವ ಸಾಧ್ಯತೆ ತುಂಬಾ ವಿರಳವಾಗಿದೆ.
ಇಂಗ್ಲೆಂಡ್ನಲ್ಲಿ ಬದಲಾವಣೆ?:
ಖಂಡಿತವಾಗಿಯೂ ಮೂರನೇ ಟೆಸ್ಟ್ಗೆ ಇಂಗ್ಲೆಂಡ್ ತಂಡದಲ್ಲಿ ದೊಡ್ಡ ಬದಲಾವಣೆ ಆಗುವ ನಿರೀಕ್ಷೆ ಇದೆ. ಯಾಕೆಂದರೆ ಮೂರು ವರ್ಷಗಳ ಬಳಿಕ ಡೇವಿಡ್ ಮಲನ್ ತಂಡ ಸೇರಿಕೊಂಡಿದ್ದಾರೆ. ಇಂಜುರಿಯಿಂದ ಸ್ಟಾರ್ ಬೌಲರ್ ಮಾರ್ಕ್ ವುಡ್ ಲಭ್ಯರಿಲ್ಲ. ಹೀಗಾಗಿ ತಂಡದಲ್ಲಿ ಕನಿಷ್ಠ ಮೂರು ಬದಲಾವಣೆ ಆಗುವುದು ಖಚಿತ ಎನ್ನಲಾಗಿದೆ.
ಭಾರತದಲ್ಲಿ ಬದಲಾವಣೆ?:
ಟೀಮ್ ಇಂಡಿಯಾದಲ್ಲೂ ಪ್ರಮುಖ ಎರಡು ಬದಲಾವಣೆಯ ಗಾಳಿ ಬೀಸುತ್ತಿದೆ. ಕಳಪೆ ಫಾರ್ಮ್ನಲ್ಲಿರುವ ಚೇತೇಶ್ವರ್ ಪೂಜಾರ ಕೈಬಿಟ್ಟು ಸೂರ್ಯಕುಮಾರ್ ಯಾದವ್ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಅಂತೆಯೆ ಮೊದಲೆರಡು ಟೆಸ್ಟ್ನಿಂದ ಹೊರಗಿದ್ದ ರವಿಚಂದ್ರನ್ ಅಶ್ವಿನ್ ಅವರು ರವೀಂದ್ರ ಜಡೇಜಾ ಜಾಗದಲ್ಲಿ ಕಣಕ್ಕಿಳಿಯಬಹುದು.
AFG vs PAK: ಪ್ರಯಾಣದ ಸಮಸ್ಯೆ: ಅಫ್ಘಾನಿಸ್ತಾನ-ಪಾಕಿಸ್ತಾನ ಏಕದಿನ ಸರಣಿ ಶ್ರೀಲಂಕಾದಿಂದ ಸ್ಥಳಾಂತರ
(India vs England Virat Kohli team playing in leeds headingley ground after 19 years here is the points data and details)
Published On - 11:55 am, Tue, 24 August 21