ಭಾರತ ಹಾಗೂ ಇಂಗ್ಲೆಂಡ್ (India vs England) ನಡುವೆ ಬಾಕಿ ಉಳಿದಿರುವ ಐದನೇ ಟೆಸ್ಟ್ ಪಂದ್ಯ ಜುಲೈ 1 ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಲೀಸೆಸ್ಟರ್ಷೈರ್ (India vs Leicestershire) ತಂಡದ ವಿರುದ್ಧ ಅಭ್ಯಾಸವನ್ನು ಆಡುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ಪಡೆ ಆಂಗ್ಲರ ನಾಡಲ್ಲಿ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಅನುಭವಿ ಹಿರಿಯ ಆಟಗಾರರೇ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ನಾಯಕ ರೋಹಿತ್, ವಿರಾಟ್ ಕೊಹ್ಲಿ (Virat Kohli), ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಹೀಗೆ ಸ್ಟಾರ್ ಆಟಗಾರರು ಅಭ್ಯಾಸ ಪಂದ್ಯದಲ್ಲೇ ಮುಗ್ಗರಿಸಿದ್ದಾರೆ. ಇವರೆಲ್ಲರ ನಡುವೆ ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯವನ್ನು ಆಡದ ವಿಕೆಟ್ ಕೀಪರ್- ಬ್ಯಾಟರ್ ಶ್ರೀಕರ್ ಭರತ್ ಭಾರತದ ಮಾನ ಉಳಿಸಿದ್ದಾರೆ. ಲೀಸೆಸ್ಟರ್ಷೈರ್ ಬೌಲರ್ಗಳನ್ನು ಎಚ್ಚರಿಕೆಯಿಂದ ಎದುರಿಸಿದ ಇವರು ತಂಡದ ಮೊತ್ತವನ್ನು 200ರ ಗಡಿ ದಾಟಿಸುವಂತೆ ಮಾಡಿದ್ದಾರೆ.
ಹೌದು, ಭಾರತ 100 ರನ್ಗೂ ಮೊದಲೇ ತನ್ನ ಮುಖ್ಯ 5 ವಿಕೆಟ್ಗಳನ್ನು ಕಳೆದುಕೊಂಡಿತು. ಓಪನರ್ಗಳಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಮೊದಲ ವಿಕೆಟ್ಗೆ 35 ರನ್ಗಳ ಕಾಣಿಕೆ ನೀಡಿದರಷ್ಟೆ. 28 ಎಸೆತಗಳಲ್ಲಿ 21 ರನ್ ಗಳಿಸಿ ಗಿಲ್ ಔಟಾದರೆ, 47 ಎಸೆತಗಳಲ್ಲಿ 25 ರನ್ ಗಳಿಸಿ ಹಿಟ್ಮ್ಯಾನ್ ಪೆವಿಲಿಯನ್ ಸೇರಿಕೊಂಡರು. ಹನುಮಾ ವಿಹಾರಿ ಆಟ ಕೇವಲ 3 ರನ್ಗೆ ಅಂತ್ಯವಾಯಿತು. ಭರವಸೆ ಮೂಡಿಸಿದ್ದ ವಿರಾಟ್ ಕೊಹ್ಲಿ ಆರಂಭದಲ್ಲಿ ಚೆನ್ನಾಗಿಯೇ ಬ್ಯಾಟಿಂಗ್ ಮಾಡಿದರು. ಆದರೆ, ದೊಡ್ಡ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ.
ENG vs NED: ಮುಟ್ಟಿದ್ದೆಲ್ಲ ಚಿನ್ನ; ಧೋನಿ ಹೆಸರಿನಲ್ಲಿದ್ದ 17 ವರ್ಷಗಳ ಹಳೆಯ ದಾಖಲೆ ಮುರಿದ ಬಟ್ಲರ್..!
69 ಎಸೆತಗಳನ್ನು ಎದುರಿಸಿದ ಕೊಹ್ಲಿ 4 ಫೋರ್, 1 ಸಿಕ್ಸರ್ನೊಂದಿಗೆ 33 ರನ್ಗೆ ಔಟಾದರು. ಶ್ರೇಯಸ್ ಅಯ್ಯರ್ ಕಳಪೆ ಫಾರ್ಮ್ ಮುಂದುವರೆಸಿ ಸೊನ್ನೆ ಸುತ್ತಿದರು. ರವೀಂದ್ರ ಜಡೇಜಾ ಕೂಡ 13 ರನ್ಗೆ ಸುಸ್ತಾದರು. ಈ ಸಂದರ್ಭ ಕ್ರೀಸ್ಗೆ ಬಂದ ಶ್ರೀಕರ್ ಭರತ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ಆದರೆ, ಶಾರ್ದೂಲ್ ಥಾಕೂರ್(6) ಇವರಿಗೆ ಸಾಥ್ ನೀಡಲಿಲ್ಲ. ಉಮೇಶ್ ಯಾದವ್ 23 ರನ್ ಗಳಿಸಿ ಕೆಲಹೊತ್ತು ಕ್ರೀಸ್ನಲ್ಲಿದ್ದರು. ಇದೀಗ ಮೊಹಮ್ಮದ್ ಶಮಿ ಜೊತೆಯಾಗಿರುವ ಭರತ್ ಭಾರತಕ್ಕೆ ರನ್ ಕೊಡುಗೆ ನೀಡುತ್ತಿದ್ದಾರೆ.
ಮೊದಲ ದಿನದಾಟದ ಅಂತ್ಯಕ್ಕೆ ಭಾರತ 60.2 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 246 ರನ್ ಕಲೆಹಾಕಿದೆ. ಭರತ್ 111 ಎಸೆತಗಳಲ್ಲಿ 8 ಫೋರ್, 1 ಸಿಕ್ಸರ್ನೊಂದಿಗೆ 70 ರನ್ ಗಳಿಸಿ ಕ್ರೀಸ್ನಲ್ಲಿದ್ದರೆ, ಶಮಿ 26 ಎಸೆತಗಳಲ್ಲಿ 18 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಲೀಸೆಸ್ಟರ್ಷೈರ್ ಪರ ರೋಮನ್ ವಾಲ್ಕರ್ 5 ವಿಕೆಟ್ ಕಿತ್ತು ಮಿಂಚಿದರೆ, ವಿಲ್ ಡೇವಿಸ್ 2 ಹಾಗೂ ಪ್ರಸಿದ್ಧ್ ಕೃಷ್ಣ 1 ವಿಕೆಟ್ ಪಡೆದರು.
ಭಾರತದ ವಿಕೆಟ್‌ಕೀಪರ್ ರಿಷಭ್ ಪಂತ್, ಚೇತೇಶ್ವರ್ ಪೂಜಾರ, ಜಸ್‌ಪ್ರೀತ್ ಬೂಮ್ರಾ ಮತ್ತು ಪ್ರಸಿದ್ಧ ಕೃಷ್ಣ ಅವರು ಈ ಪಂದ್ಯದಲ್ಲಿ ಲೀಸಿಸ್ಟರ್ ತಂಡವನ್ನು ಪ್ರತಿನಿಧಿಸಿದ್ದಾರೆ. ನಾಲ್ಕು ದಿನಗಳ ಈ ಅಭ್ಯಾಸ ಪಂದ್ಯದಲ್ಲಿ ಮೊದಲ ದಿನವೇ ಭಾರತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು ಚಿಂತೆಗೀಡು ಮಾಡಿದೆ. ಭಾರತ ಈ ಟೆಸ್ಟ್ ಸರಣಿಯಲ್ಲಿ 2-1 ಅಂತರದ ಮುನ್ನಡೆ ಪಡೆದುಕೊಂಡಿದೆ. ಜುಲೈ 1 ರಿಂದ ಬರ್ಮಿಂಗ್ಹ್ಯಾಮ್ನಲ್ಲಿ ಐದನೇ ಟೆಸ್ಟ್ ಕದನ ಶುರುವಾಗಲಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:35 am, Fri, 24 June 22