ಸೋಲಿನ ಸುಳಿಯಲ್ಲಿದ್ದ ಭಾರತಕ್ಕೆ ವರುಣನ ಕೃಪೆ; ಡಕ್ವರ್ತ್ ಲೂಯಿಸ್ ನಿಯಮದಡಿ ಗೆಲುವು

ವೆಲ್ಲಿಂಗ್ಟನ್‌ನಲ್ಲಿ ನಡೆದ ಭಾರತ-ನ್ಯೂಜಿಲೆಂಡ್ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ DLS ನಿಯಮದಡಿ ರೋಚಕ ಜಯ ಸಾಧಿಸಿದೆ. ಭಾರತೀಯ ಬೌಲರ್‌ಗಳ ಅದ್ಭುತ ಪ್ರದರ್ಶನದಿಂದ ನ್ಯೂಜಿಲೆಂಡ್ ಕೇವಲ 134 ರನ್‌ಗಳಿಗೆ ಆಲೌಟ್ ಆಯಿತು. ಗುರ್‌ನೂರ್ ಬ್ರಾರ್ 4 ವಿಕೆಟ್ ಪಡೆದು ಮಿಂಚಿದರು. ಗುರಿ ಬೆನ್ನಟ್ಟುವಾಗ ಮಳೆ ಬಂದಿದ್ದರಿಂದ ಭಾರತಕ್ಕೆ ಗೆಲುವು ಒಲಿಯಿತು.

ಸೋಲಿನ ಸುಳಿಯಲ್ಲಿದ್ದ ಭಾರತಕ್ಕೆ ವರುಣನ ಕೃಪೆ; ಡಕ್ವರ್ತ್ ಲೂಯಿಸ್ ನಿಯಮದಡಿ ಗೆಲುವು
ಭಾರತ Vs ನ್ಯೂಜಿಲೆಂಡ್
Image Credit source: PTI

Updated on: Nov 07, 2026 | 3:34 PM

ವೆಲ್ಲಿಂಗ್ಟನ್‌ನ ಹೆನ್ರಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯವನ್ನು ಡಕ್ವರ್ತ್​ ಲೂಯಿಸ್ ನಿಯಮದಡಿಯಲ್ಲಿ 4 ರನ್​​ಗಳಿಂದ ಗೆದ್ದುಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಭಾರತೀಯ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿ ಕೇವಲ 134 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೂಡ ಗೆಲುವಿನ ಸನಿಹದಲ್ಲಿ ಹಳಿತಪ್ಪಿದ್ದಂತೆ ಕಾಣಲಾರಂಭಿಸಿತು. ಆದರೆ ಭಾರತದ ಪಾಲಿಗೆ ವರವಾಗಿ ಬಂದ ವರುಣ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದ.

ನ್ಯೂಜಿಲೆಂಡ್ ಬ್ಯಾಟಿಂಗ್ ವೈಫಲ್ಯ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಆರಂಭದಿಂದಲೇ ಭಾರತೀಯ ಬೌಲರ್‌ಗಳ ಎದುರು ರನ್ ಗಳಿಸಲು ಪರದಾಡಿತು. ಆರಂಭಿಕರಾದ ವಿಲ್ ಯಂಗ್ 6 ರನ್ ಗಳಿಸಿದರೆ, ಟಿಮ್ ಸೈಫರ್ಟ್ ಖಾತೆ ತೆರೆಯುವ ಮೊದಲೇ ವಿಕೆಟ್ ಕಳೆದುಕೊಂಡರು. ಹೆನ್ರಿ ನಿಕೋಲ್ಸ್ 11 ರನ್ ಗಳಿಸಿ ಔಟಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಡ್ಯಾರಿಲ್ ಮಿಚೆಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು 104 ಎಸೆತಗಳಲ್ಲಿ 55 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮಿಚೆಲ್ ಸ್ಯಾಂಟ್ನರ್ 31 ರನ್ ಗಳಿಸಿ ಕೊಂಚ ಪ್ರತಿರೋಧ ತೋರಿದರು. ಉಳಿದ ಬ್ಯಾಟರ್‌ಗಳು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಅಂತಿಮವಾಗಿ ನ್ಯೂಜಿಲೆಂಡ್ ತಂಡ 41 ಓವರ್‌ಗಳಲ್ಲಿ 134 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

Loading...

ಭಾರತೀಯ ಬೌಲರ್‌ಗಳ ಅದ್ಭುತ ಪ್ರದರ್ಶನ

ಭಾರತದ ಯುವ ವೇಗದ ಬೌಲರ್ ಗುರ್‌ನೂರ್ ಬ್ರಾರ್ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. 10 ಓವರ್‌ಗಳಲ್ಲಿ ಕೇವಲ 30 ರನ್ ನೀಡಿ 4 ವಿಕೆಟ್ ಕಬಳಿಸಿದರು. ಉಳಿದಂತೆ ಆಕಿಬ್ ನಬಿ 31 ರನ್ ನೀಡಿ 2 ವಿಕೆಟ್ ಪಡೆದರೆ, ಅಂಶುಲ್ ಕಾಂಬೋಜ್ 25 ರನ್​ಗೆ 2 ವಿಕೆಟ್ ಹಾಗೂ ಅಕ್ಷರ್ ಪಟೇಲ್ ಕೂಡ 2 ವಿಕೆಟ್ ಪಡೆದರು.

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us