India vs New Zealand, 3rd T20I: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿ ಸರಣಿ ಗೆದ್ದ ಟೀಮ್ ಇಂಡಿಯಾ
India vs New Zealand, 3rd T20I: 235 ರನ್ಗಳ ಬೃಹತ್ ಟಾರ್ಗೆಟ್ ಪಡೆದ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಹಾರ್ದಿಕ್ ಪಾಂಡ್ಯ ಯಶಸ್ವಿಯಾದರು.
India vs New Zealand, 3rd T20I: ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಭಾರತ ತಂಡ 2-1 ಅಂತರದಿಂದ ಗೆದ್ದುಕೊಂಡಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ಕೆ ಮಾಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ಆರಂಭಿಕ ಆಟಗಾರ ಇಶಾನ್ ಕಿಶನ್ ಕೇವಲ 1 ರನ್ಗಳಿಸಿ ಔಟಾಗಿದ್ದರು. ಆದರೆ 2ನೇ ವಿಕೆಟ್ಗೆ ಜೊತೆಯಾದ ಶುಭ್ಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ಭರ್ಜರಿ ಬ್ಯಾಟಿಂಗ್ ನಡೆಸಿದರು. ಅದರಲ್ಲೂ ಪವರ್ಪ್ಲೇನಲ್ಲಿ ಅಬ್ಬರಿಸಿದ ತ್ರಿಪಾಠಿ ಕೇವಲ 22 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್ನೊಂದಿಗೆ 44 ರನ್ ಬಾರಿಸಿ ಸೋಧಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ಇತ್ತ ರಾಹುಲ್ ತ್ರಿಪಾಠಿ ಔಟಾಗುತ್ತಿದ್ದಂತೆ ಅತ್ತ ಶುಭ್ಮನ್ ಗಿಲ್ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದರು. ಪರಿಣಾಮ ಕೇವಲ 54 ಎಸೆತಗಳಲ್ಲಿ ಶುಭ್ಮನ್ ಚೊಚ್ಚಲ ಟಿ20 ಶತಕ ಪೂರೈಸಿದರು. ಶತಕದ ಬಳಿಕ ಅಬ್ಬರ ಮುಂದುವರೆಸಿದ ಯುವ ದಾಂಡಿಗ 63 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 12 ಫೋರ್ನೊಂದಿಗೆ ಅಜೇಯ 126 ರನ್ ಬಾರಿಸಿದರು. ಶುಭ್ಮನ್ ಗಿಲ್ ಅವರ ಸ್ಪೋಟಕ ಶತಕದ ನೆರವಿನಿಂದ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 234 ರನ್ ಕಲೆಹಾಕಿತು.
235 ರನ್ಗಳ ಬೃಹತ್ ಟಾರ್ಗೆಟ್ ಪಡೆದ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಹಾರ್ದಿಕ್ ಪಾಂಡ್ಯ ಯಶಸ್ವಿಯಾದರು. ಮೊದಲ ಓವರ್ನಲ್ಲೇ ಫಿನ್ ಅಲೆನ್ (1) ವಿಕೆಟ್ ಅನ್ನು ಹಾರ್ದಿಕ್ ಪಾಂಡ್ಯ ಪಡೆದರೆ, 2ನೇ ಓವರ್ನಲ್ಲಿ ಅರ್ಷದೀಪ್ ಸಿಂಗ್ ಡೆವೊನ್ ಕಾನ್ವೆ (1) ಹಾಗೂ ಚಾಪ್ಮ್ಯಾನ್ (0) ಗೆ ಪೆವಿಲಿಯನ್ ಹಾದಿ ತೋರಿಸಿದರು.
ಇನ್ನು ಗ್ಲೆನ್ ಫಿಲಿಪ್ಸ್ (2) ಬಂದ ವೇಗದಲ್ಲೇ ಪಾಂಡ್ಯಗೆ ವಿಕೆಟ್ ಒಪ್ಪಿಸಿ ಹಿಂತಿರುಗಿದರು. ಮರು ಓವರ್ನಲ್ಲೇ ಉಮ್ರಾನ್ ಮಲಿಕ್ ಬ್ರೇಸ್ವೆಲ್ (8) ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಪರಿಣಾಮ ನ್ಯೂಜಿಲೆಂಡ್ ತಂಡವು ಕೇವಲ 21 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಡೇರಿಲ್ ಮಿಚೆಲ್ ಹಾಗೂ ಸ್ಯಾಂಟ್ನರ್ ತಂಡದ ಮೊತ್ತವನ್ನು 50 ರ ಗಡಿದಾಟಿಸಿದರು.
ಆದರೆ ಈ ವೇಳೆ ದಾಳಿಗಿಳಿದ ಶಿವಂ ಮಾವಿ ಸ್ಯಾಂಟ್ನರ್ (13) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಇಶ್ ಸೋಧಿ (0) ವಿಕೆಟ್ ಕೂಡ ಪಡೆದರು. ಆ ಬಳಿಕ ಬಂದ ಲಾಕಿ ಫರ್ಗುಸನ್ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಒಂದೆಡೆ ಡೇರಿಲ್ ಮಿಚೆಲ್ ನಿಧಾನಗತಿಯಲ್ಲಿ ತಂಡದ ಮೊತ್ತವನ್ನು ಹೆಚ್ಚಿಸುವ ಕಾಯಕ ಮುಂದುವರೆಸಿದರು. ಈ ಹಂತದಲ್ಲಿ ಟಿಕ್ನರ್ ವಿಕೆಟ್ ಪಡೆದು ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾಗೆ 9ನೇ ಯಶಸ್ಸು ತಂದುಕೊಟ್ಟರು. ಇನ್ನು ಡೇರಿಲ್ ಮಿಚೆಲ್ ವಿಕೆಟ್ ಪಡೆಯುವ ಮೂಲಕ ಉಮ್ರಾನ್ ಮಲಿಕ್ ನ್ಯೂಜಿಲೆಂಡ್ ತಂಡವನ್ನು ಕೇವಲ 66 ರನ್ಗಳಿಗೆ ಆಲೌಟ್ ಮಾಡಿದರು. ಇದರೊಂದಿಗೆ ಟೀಮ್ ಇಂಡಿಯಾ 168 ರನ್ಗಳ ಭರ್ಜರಿ ಜಯ ಸಾಧಿಸಿತು.
ಟೀಮ್ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ 4 ಓವರ್ನಲ್ಲಿ 16 ರನ್ ನೀಡಿ 4 ವಿಕೆಟ್ ಪಡೆದರೆ, ಉಮ್ರಾನ್ ಮಲಿಕ್, ಶಿವಂ ಮಾವಿ ಹಾಗೂ ಅರ್ಷದೀಪ್ ಸಿಂಗ್ ತಲಾ 2 ವಿಕೆಟ್ ಕಬಳಿಸಿದರು.
ಟೀಮ್ ಇಂಡಿಯಾ ಪ್ಲೇಯಿಂಗ್ 11: ಇಶಾನ್ ಕಿಶನ್, ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಕುಮಾರ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಿವಂ ಮಾವಿ, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಕುಲ್ದೀಪ್ ಯಾದವ್.
ನ್ಯೂಜಿಲೆಂಡ್ ಪ್ಲೇಯಿಂಗ್ 11: ಫಿನ್ ಅಲೆನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಮೈಕೆಲ್ ಬ್ರೇಸ್ವೆಲ್, ಮಿಚೆಲ್ ಸ್ಯಾಂಟ್ನರ್(ನಾಯಕ), ಇಶ್ ಸೋಧಿ, ಲಾಕಿ ಫರ್ಗುಸನ್, ಬೆನ್ ಲಿಸ್ಟರ್, ಬ್ಲೇರ್ ಟಿಕ್ನರ್.
Published On - 10:11 pm, Wed, 1 February 23