IND vs NZ: ಹರ್ಷಿತ್ ರಾಣಾ ಕನಸು ಭಗ್ನ; ವದಂತಿಗಳಿಗೆ ಸ್ಪಷ್ಟನೆ ನೀಡಿದ ಟೀಂ ಇಂಡಿಯಾ ಕೋಚ್
Harshith Rana: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ಹರ್ಷಿತ್ ರಾಣಾ ಅವರನ್ನು ಭಾರತ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ ಎಂಬ ವದಂತಿಗಳು ಹರಡಿದ್ದವು. ಆದರೆ, ಭಾರತ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರು ಈ ವದಂತಿಗಳನ್ನು ನಿರಾಕರಿಸಿದ್ದಾರೆ. ಮುಂಬೈನಲ್ಲಿ ನಡೆಯುವ ಪಂದ್ಯಕ್ಕೆ ಹಿಂದಿನ ತಂಡವನ್ನೇ ಆಯ್ಕೆ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಣಾ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಈ ಬಾರಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಕೊನೆಯ ಪಂದ್ಯ ನವೆಂಬರ್ 1 ರಿಂದ ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಪಾಳಯದಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ವಾಸ್ತವವಾಗಿ ಸರಣಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತ ನಂತರ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ ಎಂದು ಇತ್ತೀಚೆಗೆ ವರದಿಗಳು ಕೇಳಿಬಂದಿದ್ದವು. ಅದರಂತೆ ತಂಡಕ್ಕೆ ಯುವ ಆಲ್‌ರೌಂಡರ್ ಹರ್ಷಿತ್ ರಾಣಾರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿ ಮಾಡಲಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೇ ನೀಡಿರುವ ಭಾರತ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಈ ವದಂತಿಗಳನ್ನು ತಳ್ಳಿ ಹಾಕಿದ್ದಾರೆ.
ಇದೆಲ್ಲ ವದಂತಿ ಎಂದ ಸಹಾಯಕ ಕೋಚ್
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಸರಣಿಯ ಮೂರನೇ ಮತ್ತು ಕೊನೆಯ ಟೆಸ್ಟ್ ಪಂದ್ಯಕ್ಕೆ 22 ವರ್ಷದ ವೇಗದ ಬೌಲರ್ ಹರ್ಷಿತ್ ರಾಣಾ ಟೀಮ್ ಇಂಡಿಯಾದಲ್ಲಿ ಸೇರ್ಪಡೆಗೊಂಡಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಲಾರಂಭಿಸಿತು. ಇದರ ಜೊತೆಗೆ ನವೆಂಬರ್ 1 ರಿಂದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಹರ್ಷಿತ್ ರಾಣಾ ತಂಡಕ್ಕೆ ಪಾದಾರ್ಪಣೆ ಮಾಡಬಹುದು ಎಂದು ಹೇಳಲಾಗಿತ್ತು. ಆದರೆ ಭಾರತ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರು ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಅಂದರೆ ಹರ್ಷಿತ್ ರಾಣಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿಲ್ಲ ಎಂದು ಪಂದ್ಯಕ್ಕೂ ಮುನ್ನ ಸ್ಪಷ್ಟಪಡಿಸಿದ್ದಾರೆ.
ಹರ್ಷಿತ್ ಒಬ್ಬ ಉದಯೋನ್ಮುಖ ವೇಗದ ಬೌಲರ್ ಆಗಿದ್ದು, ಅವರನ್ನು ಭವಿಷ್ಯದ ತಾರೆ ಎಂದು ಕರೆಯಲಾಗುತ್ತಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿರುವ 18 ಸದಸ್ಯರ ತಂಡದಲ್ಲಿಯೂ ಸ್ಥಾನ ಪಡೆದಿದ್ದಾರೆ. ಪುಣೆ ಟೆಸ್ಟ್‌ನಲ್ಲಿ ಭಾರತ ತಂಡದ ಕಳಪೆ ಪ್ರದರ್ಶನದ ನಂತರ, ನ್ಯೂಜಿಲೆಂಡ್ ವಿರುದ್ಧದ ಮಧ್ಯಂತರ ಸರಣಿಗೆ ಹರ್ಷಿತ್ ರಾಣಾ ಅವರನ್ನು ತಂಡಕ್ಕೆ ಸೇರಿಸಲಾಗಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಇದಕ್ಕೂ ಮುನ್ನ ಆರಂಭಿಕ ಪಂದ್ಯದ ಬಳಿಕ ವಾಷಿಂಗ್ಟನ್ ಸುಂದರ್ ತಂಡವನ್ನು ಪ್ರವೇಶಿಸಿದ್ದರು. ಆದರೆ ಈ ಬಾರಿ ಹಾಗಲ್ಲ. ಅದೇ ಹಳೆಯ ತಂಡದೊಂದಿಗೆ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಆಡಲಿದೆ.
ರಣಜಿ ಟ್ರೋಫಿಯಲ್ಲಿ ರಾಣಾ ಶೈನ್
ಹರ್ಷಿತ್ ರಾಣಾ ಪ್ರಸ್ತುತ ರಣಜಿ ಟ್ರೋಫಿಯಲ್ಲಿ ದೆಹಲಿ ತಂಡದ ಪರ ಆಡುತ್ತಿದ್ದಾರೆ. ಇತ್ತೀಚೆಗೆ ದೆಹಲಿ ತಂಡ ಅಸ್ಸಾಂ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಹರ್ಷಿತ್ ರಾಣಾ ದೆಹಲಿ ತಂಡದ ಪರ ಉತ್ತಮ ಪ್ರದರ್ಶನ ನೀಡಿದರು. ಹರ್ಷಿತ್ ರಾಣಾ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದರು. ಇದಲ್ಲದೆ, ಬ್ಯಾಟಿಂಗ್ನಲ್ಲೂ ಕಮಾಲ್ ಮಾಡಿದ ರಾಣಾ 59 ರನ್‌ಗಳ ಇನ್ನಿಂಗ್ಸ್ ಆಡಿದರು.
ಮೂರನೇ ಟೆಸ್ಟ್‌ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ