India vs Pakistan: ಭಾರತ- ಪಾಕಿಸ್ತಾನ ಪಂದ್ಯಕ್ಕಿದೆಯೆ ಮಳೆಯ ಕಾಟ?: ಇಲ್ಲಿದೆ ಹವಾಮಾನ ವರದಿ
Dubai weather forecast: ಬದ್ದವೈರಿ ಪಾಕಿಸ್ತಾನ ವಿರುದ್ಧ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲಿರುವ ಭಾರತದ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಹಾಗಾದರೆ ಈ ಹೈವೋಲ್ಟೇಜ್ ಸೆಣೆಸಾಟಕ್ಕೆ ವರುಣ ಅಡ್ಡಿ ಪಡಿಸುತ್ತಾನ ಎಂಬುದನ್ನು ನೋಡೋಣ.
ಭಾರತ ಕ್ರಿಕೆಟ್ ತಂಡ ಏಷ್ಯಾಕಪ್ 2022 ರಲ್ಲಿ (Asia Cup 2022) ಇಂದು ತನ್ನ ಅಭಿಯಾನವನ್ನು ಆರಂಭಿಸಲಿದೆ. ಬದ್ದವೈರಿ ಪಾಕಿಸ್ತಾನ ವಿರುದ್ಧ ದುಬೈ (Dubai) ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲಿರುವ ಭಾರತದ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಸೋಲುಂಡ ಭಾರತಕ್ಕೆ (India vs Pakistan) ಇದು ಸೇಡಿನ ಪಂದ್ಯ ಕೂಡ ಆಗಿದೆ. ಹೀಗೆ ಅನೇಕ ಕಾರಣಗಳಿಂದ ಈ ಕದನ ಸಾಕಷ್ಟು ಕುತೂಹಲ ಕೆರಳಿಸಿದೆ. ಹಾಗಾದರೆ ಈ ಹೈವೋಲ್ಟೇಜ್ ಸೆಣೆಸಾಟಕ್ಕೆ ವರುಣ ಅಡ್ಡಿ ಪಡಿಸುತ್ತಾನ ಎಂಬುದನ್ನು ನೋಡೋಣ.
ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿಲ್ಲ. ಹೀಗಾಗಿ ಪಂದ್ಯ ನಿರಾತಂಕವಾಗಿ ಸಾಗಲಿದೆ. ದಿನವಿಡೀ ಶುಭ್ರ ವಾತಾವರಣದಿಂದ ಕೂಡಿರಲಿದೆ. ಪಂದ್ಯದ ದಿನದಂದು ಗಾಳಿಯ ವೇಗವು ಗಂಟೆಗೆ 17 ಕಿಮೀ ಇರಬಹುದು ಎಂದು ಹೇಳಲಾಗಿದ್ದು ತಾಪಮಾನವು ಸುಮಾರು 40 ಡಿಗ್ರಿ ಸೆಲ್ಸಿಯಸ್‌ನಿಂದ 31 ಡಿಗ್ರಿ ಸೆಲ್ಸಿಯಸ್ ಇರಲಿದೆಯಂತೆ. ಹೀಗಾಗಿ ಯಾವುದೇ ಅಡೆತಡೆ ಇಲ್ಲದೆ ಈ ರೋಚಕ ಪಂದ್ಯ ನಡೆಯಲಿದೆ.
ಟಾಸ್ ಕೂಡ ಈ ಪಂದ್ಯದಲ್ಲಿ ಬಹುಮುಖ್ಯ ಪಾತ್ರವಹಿಸಲಿದ್ದು, ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಯಾಕೆಂದರೆ ಇಲ್ಲಿ ಚೇಸಿಂಗ್ ಮಾಡಿದ ತಂಡ ಹೆಚ್ಚು ಗೆದ್ದ ಇತಿಹಾಸವಿದೆ. ಮೊದಲ ಇನ್ನಿಂಗ್ಸ್ ಸರಾಸರಿ 142 ರನ್ ಆದರೆ, ಎರಡನೇ ಇನ್ನಿಂಗ್ಸ್ ಸರಾಸರಿ 124 ಆಗಿದೆ. 211 ರನ್ ಗಳಿಸಿರುವುದು ಈ ಗ್ರೌಂಡ್ನ ಗರಿಷ್ಠ ಸ್ಕೋರ್ ಆಗಿದೆ.
ಅಲ್ಲದೆ ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತ ಹಾಗೂ ಪಾಕ್ ಆಟಗಾರರು ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಪಾಕಿಸ್ತಾನಕ್ಕೆ ಇದು ಎರಡನೇ ತವರಿದ್ದಂತೆ. ಭಾರತದ ಆಟಗಾರರು ಇಲ್ಲಿ ಅನೇಕ ಐಪಿಎಲ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇಲ್ಲಿನ ಪಿಚ್ ಸಮಯೋಜಿತವಾಗಿದೆ. ಹೊಸ ಚೆಂಡಿನಲ್ಲಿ ವೇಗಿಗಳು ಲಾಭ ಪಡೆದುಕೊಳ್ಳಬಹುದಾಗಿದೆ. ಆದರೆ, ಈ ಪಿಚ್‌ನಲ್ಲಿ ವಿಕೆಟ್‌ಗಳನ್ನು ಉಳಿಸಿಕೊಳ್ಳುವುದು ಬಹುಮುಖ್ಯ ಸಂಗತಿಯಾಗಿದೆ. ಪಂದ್ಯ ಸಾಗುತ್ತಿದ್ದಂತೆ ಬ್ಯಾಟಿಂಗ್ ಸ್ವಲ್ಪ ಸುಲಭವಾಗುತ್ತದೆ.
ಈ ಪಿಚ್‌ನಲ್ಲಿ ನಿಧಾನಗತಿಯ ಬೌಲರ್‌ಗಳು ಹೆಚ್ಚಿನ ಯಶಸ್ಸು ಸಾಧಿಸಿದ ಇತಿಹಾಸವಿದೆ. ಭಾರತ ಪರ ಹರ್ಷಲ್ ಪಟೇಲ್ ಇದ್ದಿದ್ದರೆ ಪ್ಲಸ್ ಪಾಯಿಂಟ್ ಆಗಿರಬಹುದಿತ್ತು. ಆದರೆ, ಅವರು ಇಂಜುರಿಯಿಂದಾಗಿ ಏಷ್ಯಾಕಪ್ಗೆ ಆಯ್ಕೆಯಾಗಲಿಲ್ಲ. ಅಂತೆಯೆ ಸ್ಪಿನ್ನರ್‌ಗಳ ದಾಳಿಯ ಮುಂದೆ ಬ್ಯಾಟರ್‌ಗಳು ಪರದಾಡುವುದು ಖಚಿತ. ಭಾರತ ಈ ಪಿಚ್‌ನಲ್ಲಿ ನಮೀಬಿಯ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಸ್ಕಾಟ್ಲೆಂಡ್ ತಂಡದ ವಿರುದ್ಧ ಆಡಿದೆ. ಇದರಲ್ಲಿ ನಮೀಬಿಯ ಮತ್ತು ಸ್ಕಾಟ್ಲೆಂಡ್ ವಿರುದ್ಧ ಮಾತ್ರ ಜಯ ಸಾಧಿಸಿದೆ.
ಭಾರತ ಸಂಭಾವ್ಯ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್.
ಪಾಕಿಸ್ತಾನ ಸಂಭಾವ್ಯ ಪ್ಲೇಯಿಂಗ್ XI: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಝಾಮಾನ್, ಆಸಿಫ್ ಅಲಿ, ಹೈದರ್ ಅಲಿ/ಖುಶ್ದಿಲ್ ಶಾ, ಶಾದಾಬ್ ಖಾನ್, ಹಾರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ, ಮೊಹಮ್ಮದ್ ನವಾಜ್, ಉಸ್ಮಾನ್ ಖಾದಿರ್/ಇಫ್ತಿಕರ್ ಅಹ್ಮದ್.
Published On - 11:05 am, Sun, 28 August 22