Rahul Dravid: ಪಾಕ್ ವಿರುದ್ಧದ ಪಂದ್ಯಕ್ಕೆ ಕೆಲವೇ ಗಂಟೆಗಳಿರುವಾಗ ಭಾರತಕ್ಕೆ ಸಿಕ್ತು ಗುಡ್ ನ್ಯೂಸ್: ಏನದು?
IND vs PAK, Asia Cup 2022: ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಟೀಮ್ ಇಂಡಿಯಾಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇಂದು ತಂಡ ಸೇರಿಕೊಳ್ಳಲಿದ್ದಾರೆ.
ಏಷ್ಯಾಕಪ್ನ (Asia Cup 2022) ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಇಂದು ಸಂಜೆ 7:30ಕ್ಕೆ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಡೋ–ಪಾಕ್ ಕದನ ಆಯೋಜಿಸಲಾಗಿದ್ದು, ಪಂದ್ಯ ವೀಕ್ಷಿಸಲು ಇಡೀ ವಿಶ್ವವೇ ಕಾದು ಕುಳಿತಿದೆ. ಕಳೆದ ವರ್ಷದ ಐಸಿಸಿ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಸೋಲುಂಡ ಭಾರತಕ್ಕೆ (India vs Pakistan) ಇದು ಸೇಡಿನ ಪಂದ್ಯ ಕೂಡ ಆಗಿದೆ. ಹೀಗೆ ಅನೇಕ ಕಾರಣಗಳಿಂದ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ ದುಬೈ ಕಂಡೀಷನ್ ಬಗ್ಗೆ ಚೆನ್ನಾಗಿ ಅರಿತಿರುವ ಬಾಬರ್ ಪಡೆ ತಿರುಗಿ ಬಿದ್ದರೆ ಪಂದ್ಯ ರೋಚಕತೆ ಪಡೆದುಕೊಳ್ಳಲಿದೆ. ಹೀಗಿರುವಾಗ ಟೀಮ್ ಇಂಡಿಯಾಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಇಂದು ತಂಡ ಸೇರಿಕೊಳ್ಳಲಿದ್ದಾರೆ.
ಏಷ್ಯಾಕಪ್ಗಾಗಿ ಯುಎಇಗೆ ತೆರಳುವ ಮುನ್ನ ನಡೆಸಲಾದ ಕೋವಿಡ್ ಟೆಸ್ಟ್ನಲ್ಲಿ ರಾಹುಲ್ ದ್ರಾವಿಡ್ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಇವರು ಭಾರತ ತಂಡದೊಂದಿಗೆ ದುಬೈಗೆ ಹೋಗಿಲ್ಲ. ಅವರನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿತ್ತು. ದ್ರಾವಿಡ್ ಬದಲಿಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಟೀಮ್ ಇಂಡಿಯಾ ಹಂಗಾಮಿ ಕೋಚ್ ಆಗಿ ನೇಮಕ ಮಾಡಲಾಯಿತು. ಆದರೀಗ ಪಂದ್ಯ ಆರಂಭಕ್ಕೆ ಕೆಲ ಸಮಯ ಇರುವಾಗ ದ್ರಾವಿಡ್ ಕೋವಿಡ್ನಿಂದ ಗುಣಮುಖರಾಗಿ ತಂಡ ಸೇರಿಕೊಳ್ಳಲು ಸಜ್ಜಾಗಿದ್ದಾರೆ. ಇಂದು ಸಂಜೆಯ ಒಳಗೆ ಇವರು ಯುಎಇ ತಲುಪಲಿದ್ದಾರಂತೆ.
ಹದಿನೈದನೆ ಆವೃತ್ತಿಯ ಏಷ್ಯಾಕಪ್ ಟೂರ್ನಿಗೆ ಶನಿವಾರ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಬಗ್ಗು ಬಡಿದಿರುವ ಅಫ್ಘಾನಿಸ್ತಾನ ತಂಡ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಇಂದು ಎರಡನೇ ಪಂದ್ಯ ನಡೆಯಲಿದ್ದು, ಇಡೀ ವಿಶ್ವವೇ ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಮುಖಾಮುಖಿ ಆಗಲಿದೆ. ಸ್ಟಾರ್ ಆಟಗಾರರಿಂದಲೇ ತುಂಬಿರುವ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಯಾವರೀತಿ ಇರಲಿದೆ ಎಂಬ ಕುತೂಹಲ ಕೂಡ ಇದೆ.
ಭಾರತದ ಪ್ಲೇಯಿಂಗ್ XI ಹೇಗಿದೆ?:
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಪರ ಕಣಕ್ಕಿಳಿಯುವ 11 ಆಟಗಾರರು ಯಾರು ಎಂಬುದು ಬಹಿರಂಗವಾಗಿದೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯೇ ಹಿಂಟ್ ಒಂದನ್ನ ನೀಡಿದೆ. ಇಂಡಿಯನ್ ಕ್ರಿಕೆಟ್ ಟೀಮ್ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಟ್ಟು 11 ಆಟಗಾರರ ಫೋಟೋವನ್ನು ಸ್ಲೈಡ್ ಮೂಲಕ ಹಂಚಿಕೊಳ್ಳಲಾಗಿದೆ.
ಬಿಸಿಸಿಐ ಹಂಚಿಕೊಂಡಿರುವ ಫೋಟೋದ ಮೊದಲ ಸ್ಲೈಡ್ನಲ್ಲಿ ಓಪನರ್ಗಳಾದ ನಾಯಕ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಇದ್ದಾರೆ. ನಂತರ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್, ಆವೇಶ್ ಖಾನ್ ಹಾಗೂ ಅರ್ಶ್ದೀಪ್ ಸಿಂಗ್ ಹೀಗೆ 11 ಆಟಗಾರರು ಈ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಕ್ಕೆ ಅನೇಕರು ಕಮೆಂಟ್ ಕೂಡ ಮಾಡುತ್ತಿದ್ದು ಬಿಸಿಸಿಐ ಪಾಕಿಸ್ತಾನ ವಿರುದ್ಧದ ಪಂದ್ಯದಕ್ಕೆ ಭಾರತ ಪ್ಲೇಯಿಂಗ್ ಇಲೆವೆನ್ ಕುರಿತು ನೀಡಿರುವ ಸುಳಿವು ಇದಾಗಿದೆ ಎಂದು ಹೇಳುತ್ತಿದ್ದಾರೆ.
Published On - 9:06 am, Sun, 28 August 22