India vs Pakistan: ಭಾರತ-ಪಾಕಿಸ್ತಾನ್ ತಂಡಗಳ ಚಿಂತೆ ಹೆಚ್ಚಿಸಿದ ಸೌತ್ ಆಫ್ರಿಕಾ

India vs Pakistan: ಭಾರತ ಮತ್ತು ಪಾಕಿಸ್ತಾನ್ ತಂಡಗಳು ಟಿ20 ವಿಶ್ವಕಪ್​ನಲ್ಲಿ ಒಟ್ಟು 7 ಬಾರಿ ಸೆಣಸಿದೆ. ಈ ವೇಳೆ ಟೀಮ್ ಇಂಡಿಯಾ 5 ಬಾರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಪಾಕಿಸ್ತಾನ್ ತಂಡ ಗೆದ್ದಿರುವುದು ಕೇವಲ ಒಂದು ಬಾರಿ ಮಾತ್ರ. ಇನ್ನೊಂದು ಪಂದ್ಯವು ಟೈನಲ್ಲಿ ಅಂತ್ಯಗೊಂಡಿತ್ತು. ಈ ಟೈ ಪಂದ್ಯದಲ್ಲಿ ಬೌಲ್​ ಔಟ್ ಮೂಲಕ ಭಾರತ ತಂಡ ಜಯ ಸಾಧಿಸಿತ್ತು.

India vs Pakistan: ಭಾರತ-ಪಾಕಿಸ್ತಾನ್ ತಂಡಗಳ ಚಿಂತೆ ಹೆಚ್ಚಿಸಿದ ಸೌತ್ ಆಫ್ರಿಕಾ
IND vs PAK- SA
Follow us
ಝಾಹಿರ್ ಯೂಸುಫ್
|

Updated on: Jun 09, 2024 | 9:59 AM

T20 World Cup 2024: ಟಿ20 ವಿಶ್ವಕಪ್​ನ 19ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ನ್ಯೂಯಾರ್ಕ್​ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಉಭಯ ತಂಡಗಳಿಗೆ ಹೊಸ ಚಿಂತೆ ಶುರುವಾಗಿದೆ. ಹೀಗೆ ದಿಢೀರ್ ಚಿಂತೆ ಶುರುವಾಗಲು ಕಾರಣ ಸೌತ್ ಆಫ್ರಿಕಾ ತಂಡದ ಪ್ರದರ್ಶನ.

ಹೌದು, ಶನಿವಾರ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೌತ್ ಆಫ್ರಿಕಾ ಮತ್ತು ನೆದರ್​ಲೆಂಡ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್​ಲೆಂಡ್ಸ್ ತಂಡ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 103 ರನ್​ಗಳಿಸಲಷ್ಟೇ ಶಕ್ತರಾದರು.

ಈ ಸುಲಭ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ ಕೂಡ ರನ್​ ಗಳಿಸಲು ಪರದಾಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಬಲಿಷ್ಠ ದಾಂಡಿಗರನ್ನೇ ಹೊಂದಿರುವ ಸೌತ್ ಆಫ್ರಿಕಾ ತಂಡವು ಪವರ್​ಪ್ಲೇನಲ್ಲಿ ಕಲೆಹಾಕಿದ್ದು ಕೇವಲ 16 ರನ್​ಗಳು ಮಾತ್ರ.

ಇನ್ನು 104 ರನ್​ಗಳ ಗುರಿಯನ್ನು ಮುಟ್ಟಲು ಬರೋಬ್ಬರಿ 18.5 ಓವರ್​ಗಳನ್ನು ತೆಗೆದುಕೊಂಡಿದ್ದರು. ಅದರಲ್ಲೂ ಹೊಡಿಬಡಿ ದಾಂಡಿಗನಂದೇ ಖ್ಯಾತಿ ಪಡೆದಿರುವ ಡೇವಿಡ್ ಮಿಲ್ಲರ್ ಅವರ ಸಾಹಸದಿಂದ ಸೌತ್ ಆಫ್ರಿಕಾ ತಂಡ ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಯಿತು ಎಂದರೆ ತಪ್ಪಾಗಲಾರದು.

ಏಕೆಂದರೆ ಈ ಪಂದ್ಯದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಲು ಡೇವಿಡ್ ಮಿಲ್ಲರ್ ಅಜೇಯ 59 ರನ್ ಬಾರಿಸಿದ್ದರು. ಆದರೆ ಈ ಅರ್ಧಶತಕದ ಇನಿಂಗ್ಸ್​ಗಾಗಿ ತೆಗೆದುಕೊಂಡಿರುವುದು ಬರೋಬ್ಬರಿ 51 ಎಸೆತಗಳನ್ನು ಎಂಬುದು ಇಲ್ಲಿ ಉಲ್ಲೇಖಾರ್ಹ.

ಅಂದರೆ ಸ್ಪೋಟಕ ದಾಂಡಿಗನೆಂದೇ ಖ್ಯಾತಿ ಪಡೆದಿರುವ ಡೇವಿಡ್ ಮಿಲ್ಲರ್ 51 ಎಸೆತಗಳಲ್ಲಿ 59 ರನ್​ ಬಾರಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ 6 ವಿಕೆಟ್ ಕಳೆದುಕೊಂಡು ಸೌತ್ ಆಫ್ರಿಕಾ ತಂಡವು 18.5 ಓವರ್​ಗಳಲ್ಲಿ ಗುರಿ ಮುಟ್ಟಿತ್ತು.

ಇಂಡೊ-ಪಾಕ್ ಚಿಂತೆಗೆ ಕಾರಣವೇನು?

ಬಲಿಷ್ಠ ದಾಂಡಿಗರ ಬಳಗ ಹೊಂದಿರುವ ಸೌತ್ ಆಫ್ರಿಕಾ ತಂಡ ರನ್​ ಗಳಿಸಲು ಪರದಾಡಿದ ಇದೇ ಮೈದಾನದಲ್ಲೇ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗುತ್ತಿದೆ. ಇಲ್ಲಿ ಟೀಮ್ ಇಂಡಿಯಾ ಈಗಾಗಲೇ ಒಂದು ಪಂದ್ಯವಾಡಿದ್ದು, ಈ ವೇಳೆಯೂ ಬ್ಯಾಟಿಂಗ್ ಕಷ್ಟಕರವಾಗಿತ್ತು ಎಂಬುದನ್ನು ಖುದ್ದು ರೋಹಿತ್ ಶರ್ಮಾ ಹೇಳಿದ್ದಾರೆ.

ಇದಾಗ್ಯೂ ಭಾರತ ಮತ್ತು ಪಾಕ್ ನಡುವಣ ಪಂದ್ಯಕ್ಕೂ ಮುನ್ನ ನಸ್ಸೌ ಮೈದಾನದ ಪಿಚ್​ನಲ್ಲಿ ಕೆಲ ಮಾರ್ಪಾಡಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಶನಿವಾರ ನಡೆದ ನೆದರ್​ಲೆಂಡ್ಸ್ ವಿರುದ್ದದ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ರನ್​ ಗಳಿಸಲು ಪರದಾಡುತ್ತಿರುವುದು ಕಂಡು ಬಂದಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದಲ್ಲೂ ಬ್ಯಾಟರ್​ಗಳಿಂದ ಅಬ್ಬರ ನಿರೀಕ್ಷಿಸುವಂತಿಲ್ಲ.

ಇದನ್ನೂ ಓದಿ: Babar Azam: ಬಾಬರ್ ಅಬ್ಬರಕ್ಕೆ ಕಿಂಗ್ ಕೊಹ್ಲಿಯ ದಾಖಲೆ ಉಡೀಸ್

ಹೀಗಾಗಿ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಬೃಹತ್ ಮೊತ್ತ ಮೂಡಿಬರುವ ಸಾಧ್ಯತೆ ತುಂಬಾ ಕಡಿಮೆ. ಅದರಲ್ಲೂ ಕ್ರೀಸ್ ಕಚ್ಚಿ ನಿಂತು ಆಡಬೇಕಾದ ಅನಿವಾರ್ಯತೆ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಬ್ಯಾಟರ್​ಗಳ ಮುಂದಿದೆ. ಹೀಗಾಗಿ ತಾಳ್ಮೆಯುತ ಬ್ಯಾಟಿಂಗ್ ಪ್ರದರ್ಶಿಸುವ ತಂಡ ನಸ್ಸೌ ಸ್ಟೇಡಿಯಂನಲ್ಲಿ ವಿಜಯ ಪತಾಕೆ ಹಾರಿಸುವುದನ್ನು ಎದುರು ನೋಡಬಹುದು.