T20 World Cup 2026: ಭಾರತ vs ಪಾಕಿಸ್ತಾನ್ ಮುಖಾಮುಖಿಗೆ ಡೇಟ್ ಫಿಕ್ಸ್

T20 World Cup 2026: ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್​ನಲ್ಲಿ 20 ತಂಡಗಳು ಭಾಗವಹಿಸಲಿವೆ. ಈ ತಂಡಗಳ ನಡುವಣ ಕದನವು ​ಫೆಬ್ರವರಿ ಮತ್ತು ಮಾರ್ಚ್ ನಡುವೆ ನಡೆಯಲಿದೆ. ಈ ಟೂರ್ನಿಯ ಮೊದಲ ಸುತ್ತಿನಲ್ಲೇ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ.

T20 World Cup 2026: ಭಾರತ vs ಪಾಕಿಸ್ತಾನ್ ಮುಖಾಮುಖಿಗೆ ಡೇಟ್ ಫಿಕ್ಸ್
Ind Vs Pak

Updated on: Nov 22, 2025 | 10:12 AM

ಟಿ20 ವಿಶ್ವಕಪ್ 2026ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಫೆಬ್ರವರಿ 7 ರಿಂದ ಆರಂಭವಾಗಲಿರುವ ಈ ಬಾರಿಯ ಚುಟುಕು ವಿಶ್ವಕಪ್​ಗೆ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯವಹಿಸಲಿದೆ. ಅದರಂತೆ ಮೊದಲ ಪಂದ್ಯವು ಶ್ರೀಲಂಕಾದಲ್ಲಿ ನಡೆಯುವ ಸಾಧ್ಯತೆಯಿದ್ದು, ಫೈನಲ್ ಪಂದ್ಯಕ್ಕೆ ಭಾರತ ಆತಿಥ್ಯವಹಿಸಲಿದೆ. ಅಷ್ಟೇ ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ್ ಮೊದಲ ಸುತ್ತಿನಲ್ಲೇ ಮುಖಾಮುಖಿಯಾಗಲಿರುವುದು ಕೂಡ ಖಚಿತವಾಗಿದೆ.

ಟಿ20 ವಿಶ್ವಕಪ್​ನ ಕರುಡು ವೇಳಾಪಟ್ಟಿ ಸಿದ್ಧವಾಗಿದ್ದು, ಈ ವೇಳಾಪಟ್ಟಿ ಪ್ರಕಾರ ಭಾರತ ಮತ್ತು ಪಾಕಿಸ್ತಾನ್ ಫೆಬ್ರವರಿ 15 ರಂದು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಪಾಕಿಸ್ತಾನ್ ತಂಡವು ಭಾರತದಲ್ಲಿ ಟೂರ್ನಿ ಆಡಲು ನಿರಾಕರಿಸಿರುವುದರಿಂದ ಸಾಂಪ್ರದಾಯಿಕ ಎದುರಾಳಿಗಳ ಕದನವನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗುತ್ತದೆ. ಅಷ್ಟೇ ಅಲ್ಲದೆ ಪಾಕಿಸ್ತಾನ್ ತಂಡವು ಸೆಮಿಫೈನಲ್​ಗೇರಿದರೆ ಆ ಪಂದ್ಯವನ್ನು ಸಹ ಶ್ರೀಲಂಕಾದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

ಹಾಗೆಯೇ ಪಾಕಿಸ್ತಾನ್ ತಂಡವು ಫೈನಲ್​ಗೆ ಪ್ರವೇಶಿಸಿದರೆ ಟಿ20 ವಿಶ್ವಕಪ್​ನ ಅಂತಿಮ ಹಣಾಹಣಿ ಕೂಡ ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲೇ ಜರುಗಲಿದೆ. ಇನ್ನು ನಾಕೌಟ್ ಹಂತಕ್ಕೇರುವ ಮುನ್ನ ಪಾಕ್ ತಂಡ ಟೂರ್ನಿಯಿಂದ ಹೊರಬಿದ್ದರೆ ಸೆಮಿಫೈನಲ್ಸ್  ಪಂದ್ಯಗಳಿಗೆ ಕೊಲ್ಕತ್ತಾ ಮತ್ತು ಮುಂಬೈ ಆತಿಥ್ಯವಹಿಸಲಿದೆ. ಅದೇ ರೀತಿ ಫೈನಲ್ ಪಂದ್ಯವನ್ನು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

20 ತಂಡಗಳ ಟೂರ್ನಿ:

ಮುಂಬರುವ ಟಿ20 ವಿಶ್ವಕಪ್ 20 ತಂಡಗಳ ಟೂರ್ನಿ. ಹೀಗಾಗಿ ಈ ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಅದರಂತೆ ಪ್ರತಿ ಗ್ರೂಪ್​ನಲ್ಲಿ 5 ತಂಡಗಳಿರಲಿವೆ ಎಂದು ತಿಳಿದು ಬಂದಿದೆ. ಅದರಂತೆ ಮೊದಲ ಸುತ್ತಿನಲ್ಲಿ ಪ್ರತಿ ತಂಡಗಳು ನಾಲ್ಕು ಪಂದ್ಯಗಳನ್ನಾಡಲಿದೆ. ಇದಾದ ಬಳಿಕ ಸೂಪರ್-8 ಮ್ಯಾಚ್​ಗಳು ಜರುಗುವ ಸಾಧ್ಯತೆಯಿದೆ.

ಅಂದರೆ ಪ್ರತಿ ಗ್ರೂಪ್​ಗಳ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ ಹಂತಕ್ಕೇರಬಹುದು. ಅದರಂತೆ ದ್ವಿತೀಯ ಸುತ್ತಿನಲ್ಲಿ 8 ತಂಡಗಳು ಕಾಣಿಸಿಕೊಳ್ಳಲಿದೆ. ಈ ಎಂಟು ತಂಡಗಳಿಂದ ನಾಲ್ಕು ತಂಡಗಳು ಸೆಮಿಫೈನಲ್​ಗೇರಲಿದೆ. ಸೆಮಿಫೈನಲ್​ನಲ್ಲಿ ಗೆಲ್ಲುವ 2 ತಂಡಗಳು ಫೈನಲ್​ನಲ್ಲಿ ಮುಖಾಮುಖಿಯಾಗಲಿದೆ.

ಇದನ್ನೂ ಓದಿ: ಝೀರೋಗೆ ಆಲೌಟಾಗಿ ಪಂದ್ಯ ಸೋತ ಟೀಮ್ ಇಂಡಿಯಾ

ಟಿ20 ವಿಶ್ವಕಪ್​​ನಲ್ಲಿ ಕಣಕ್ಕಿಳಿಯುವ ತಂಡಗಳು:

  • ಭಾರತ
  • ಶ್ರೀಲಂಕಾ
  • ಪಾಕಿಸ್ತಾನ್
  • ಬಾಂಗ್ಲಾದೇಶ್
  • ಆಸ್ಟ್ರೇಲಿಯಾ
  • ಇಂಗ್ಲೆಂಡ್
  • ವೆಸ್ಟ್ ಇಂಡೀಸ್
  • ಐರ್ಲೆಂಡ್
  • ನ್ಯೂಝಿಲೆಂಡ್
  • ಅಫ್ಘಾನಿಸ್ತಾನ್
  • ಸೌತ್ ಆಫ್ರಿಕಾ
  • ಯುಎಸ್​ಎ
  • ಕೆನಡಾ
  • ನೆದರ್​ಲೆಂಡ್ಸ್
  • ಇಟಲಿ
  • ನಮೀಬಿಯಾ
  • ಝಿಂಬಾಬ್ವೆ
  • ನೇಪಾಳ
  • ಒಮಾನ್
  • ಯುಎಇ.

Published On - 10:09 am, Sat, 22 November 25