AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್ ನಡುವೆ ನಿವೃತ್ತಿ ಘೋಷಿಸಿದ ಭಾರತದ ಸ್ಟಾರ್ ಆಲ್‌ರೌಂಡರ್

Vijay Shankar Retires: ಭಾರತೀಯ ಕ್ರಿಕೆಟ್‌ನ ಸ್ಟಾರ್ ಆಲ್‌ರೌಂಡರ್ ವಿಜಯ್ ಶಂಕರ್ ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2026ರ ಐಪಿಎಲ್ ಪ್ಲೇಆಫ್‌ಗೆ ಮುನ್ನ ಈ ನಿರ್ಧಾರ ಪ್ರಕಟಿಸಿದ್ದು, ಸಿಎಸ್‌ಕೆ, ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್ ಸೇರಿದಂತೆ ಹಲವು ತಂಡಗಳನ್ನು ಪ್ರತಿನಿಧಿಸಿದ್ದರು. ತಮ್ಮ ವೃತ್ತಿಜೀವನದುದ್ದಕ್ಕೂ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಅವರ ಸಾಧನೆಗಳನ್ನು ಸ್ಮರಿಸುತ್ತಾ, ಕ್ರಿಕೆಟ್‌ನಿಂದ ಅವರ ನಿರ್ಗಮನವನ್ನು ಗೌರವಿಸಲಾಗುತ್ತಿದೆ.

ಐಪಿಎಲ್ ನಡುವೆ ನಿವೃತ್ತಿ ಘೋಷಿಸಿದ ಭಾರತದ ಸ್ಟಾರ್ ಆಲ್‌ರೌಂಡರ್
Vijay Shankar
ಪೃಥ್ವಿಶಂಕರ
|

Updated on:May 22, 2026 | 7:53 PM

Share

2026 ರ ಐಪಿಎಲ್ (IPL 2026) ಲೀಗ್ ಹಂತ ಮುಗಿದು ಪ್ಲೇಆಫ್ ಹಂತ ಆರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಭಾರತದ ಸ್ಟಾರ್ ಆಲ್‌ರೌಂಡರ್ ವಿಜಯ್ ಶಂಕರ್ (Vijay Shankar) ಐಪಿಎಲ್ ಹಾಗೂ ದೇಶಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಿದ್ದ ವಿಜಯ್ ಶಂಕರ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಡೇರ್‌ಡೆವಿಲ್ಸ್, ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಿವೃತ್ತಿ ವಿಚಾರವನ್ನು ಪ್ರಕಟಿಸಿರುವ ವಿಜಯ್ ಶಂಕರ್ ತಾನು ಉತ್ತಮ ಕ್ರಿಕೆಟಿಗನಾಗಲು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ

ತಮ್ಮ ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ವಿವರವಾಗಿ ಬರೆದುಕೊಂಡಿರುವ ವಿಜಯ್ ಶಂಕರ್ , ‘ಕ್ರಿಕೆಟ್ ನನ್ನ ಜೀವನ. 10 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ ನಾನು 25 ವರ್ಷ ತುಂಬುವ ಹೊತ್ತಿಗೆ ಎಲ್ಲಾ ಹಂತದ ಕ್ರಿಕೆಟ್ ಆಡಿದ್ದೇನೆ. ನನ್ನ ದೇಶಕ್ಕಾಗಿ ಆಡುವುದು ಯಾವಾಗಲೂ ನನ್ನ ಹೆಮ್ಮೆಯ ಮತ್ತು ಸಂತೋಷದ ಕ್ಷಣಗಳಲ್ಲಿ ಒಂದಾಗಿದೆ. ನಾನು ಕ್ರಿಕೆಟ್ ಆಡುವುದನ್ನು ಮುಂದುವರಿಸಲು ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನಾನು ಹೆಚ್ಚು ಇಷ್ಟಪಡುವದನ್ನು ಮಾಡಲು ಅವಕಾಶ ನೀಡಿದ್ದಕ್ಕಾಗಿ ಕೇವಲ ಧನ್ಯವಾದ ಹೇಳಿದರೆ ಸಾಕಾಗುವುದಿಲ್ಲ’.

ಮುಂದುವರೆದು, ‘ಬಿಸಿಸಿಐ ಮತ್ತು ಭಾರತೀಯ ಕ್ರಿಕೆಟ್ ತಂಡಕ್ಕೆ ಧನ್ಯವಾದ ಅರ್ಪಿಸಿರುವ ವಿಜಯ್ ಶಂಕರ್, ‘ನಾಗ್ಪುರದಲ್ಲಿ ನಡೆದ ಭಾರತದ 500 ನೇ ಏಕದಿನ ಪಂದ್ಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡುವುದು ಮತ್ತು 2019 ರ ವಿಶ್ವಕಪ್‌ನಲ್ಲಿ ಮೊದಲ ಎಸೆತದಲ್ಲಿ ಮೊದಲ ವಿಕೆಟ್ ಪಡೆದ ಕ್ಷಣಗಳನ್ನು ನಾನು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇನೆ. ನನ್ನ ಐಪಿಎಲ್ ತಂಡಗಳಾದ ಗುಜರಾತ್, ಸನ್​ರೈಸರ್ಸ್​, ಸಿಎಸ್‌ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ಗೆ ವಿಶೇಷ ಧನ್ಯವಾದಗಳು.

ಹಾಗೆಯೇ ತಮಿಳುನಾಡು ಪರ ಅಂಡರ್ 13, ಅಂಡರ್ 15, ಅಂಡರ್ 17, ಅಂಡರ್ 19, ಅಂಡರ್ 22 ಜೊತೆಗೆ ಸೀನಿಯರ್ ತಂಡದಲ್ಲೂ ಆಡಿದ್ದೇನೆ. ಪ್ರತಿ ಹಂತದಲ್ಲೂ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿರುವ ಶಂಕರ್, ಎಲ್ಲಾ ತರಬೇತುದಾರರು, ಸಹಾಯಕ ಸಿಬ್ಬಂದಿ, ಫಿಸಿಯೋಗಳು, ತರಬೇತುದಾರರು, ಮೈದಾನದ ಸಿಬ್ಬಂದಿ, ಮಾಧ್ಯಮ ಮತ್ತು ಸ್ನೇಹಿತರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿಜಯ್ ಶಂಕರ್ ವೃತ್ತಿಜೀವನ

ವಿಜಯ್ ಶಂಕರ್ ಭಾರತ ಪರ 12 ಏಕದಿನ ಪಂದ್ಯಗಳಲ್ಲಿ 31.8 ಸರಾಸರಿಯಲ್ಲಿ 223 ರನ್ ಗಳಿಸಿದ್ದಾರೆ. ಒಂಬತ್ತು ಟಿ20 ಪಂದ್ಯಗಳಲ್ಲಿ 25 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 101 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, ಶಂಕರ್ 13 ಶತಕಗಳು ಸೇರಿದಂತೆ 4,253 ರನ್ ಬಾರಿಸಿದ್ದಾರೆ. ಲಿಸ್ಟ್ ಎ ನಲ್ಲಿ ಎರಡು ಶತಕಗಳು ಸೇರಿದಂತೆ 2,790 ರನ್ ಬಾರಿಸಿರುವ ಶಂಕರ್, ಟಿ20 ಪಂದ್ಯಗಳಲ್ಲಿ 12 ಅರ್ಧಶತಕಗಳು ಸೇರಿದಂತೆ 2,583 ರನ್ ಕಲೆಹಾಕಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:49 pm, Fri, 22 May 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More