Melbourne Weather: ಭಾರತ- ಪಾಕ್ ಪಂದ್ಯ ನಡೆಯಲಿರುವ ಮೆಲ್ಬೋರ್ನ್ನಲ್ಲಿ ಈಗ ಹವಾಮಾನ ಹೇಗಿದೆ?
India vs Pakistan, T20 World Cup: ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಹೈವೋಲ್ಟೇಜ್ ಪಂದ್ಯ ಇಂದು ನಡೆಯಲಿದೆ. ಹಾಗಾದರೆ ಪಂದ್ಯ ಆಯೋಜಿಸಿರುವ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಸುತ್ತಮುತ್ತ ಹವಾಮಾನ ವರದಿ ಹೇಗಿದೆ? ಎಂಬುದನ್ನು ನೋಡೋಣ.
ಐಸಿಸಿ ಟಿ20 ವಿಶ್ವಕಪ್ (T20 World Cup) ಮಹಾ ಟೂರ್ನಿಯಲ್ಲಿ ರೋಚಕತೆ ಸೃಷ್ಟಿಸಿರುವ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಹೈವೋಲ್ಟೇಜ್ ಪಂದ್ಯ ಇಂದು ನಡೆಯಲಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಈ ಕದನಕ್ಕೆ ಸಾಕ್ಷಿಯಾಗಲಿದ್ದು, ಟಿಕೆಟ್ ಸೋಲ್ಡ್ ಔಟಾದ ಪರಿಣಾಮ ಹೌಸ್ ಫುಲ್ ನಿರೀಕ್ಷಿಸಲಾಗಿದೆ. ಇಡೀ ವಿಶ್ವವೇ ಈ ಪಂದ್ಯ ವೀಕ್ಷಿಸಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದೆ. ಆದರೆ, ಭಾರತ–ಪಾಕ್ ಪಂದ್ಯದ ದಿನ ವರುಣನ ಆರ್ಭಟ ಜೋರಾಗಿರಲಿದೆ ಎಂದು ಈ ಹಿಂದೆ ಆಸ್ಟ್ರೇಲಿಯಾದ ಹವಾಮಾನ ಇಲಾಖೆ ತಿಳಿಸಿತ್ತು. ಹೀಗಿರುವಾಗ ಇದೀಗ ಮೆಲ್ಬೋರ್ನ್ನಲ್ಲಿ (Melbourne) ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಕಡಿಮೆ ಆಗಿದ್ದು, ಪಂದ್ಯ ನಡೆಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಯೆಲ್ಲೋ ಅಲರ್ಟ್ ಘೋಷಣೆ:
ಮೂರು ದಿನಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ 100 ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಎಚ್ಚರಿಸಿತ್ತು. ಫೆಸಿಫಿಕ್ ಮಹಾಸಾಗರದಲ್ಲಿ ಲಾ ನಿನಾ ಶೀತ ಗಾಳಿ ಬೀಸುತ್ತಿದ್ದು, ಇದರಿಂದ ಆಸ್ಟ್ರೇಲಿಯಾದ ಬಹುತೇಕ ಕಡೆ ಮಳೆಯಾಗಲಿದೆ ಎಂದು ವೆದರ್ ರಿಪೋರ್ಟ್ ತಿಳಿಸಿದೆ. ಮುಖ್ಯವಾಗಿ ಬ್ರಿಸ್ಬೇನ್, ಸಿಡ್ನಿ ಮತ್ತು ಮೆಲ್ಬೋರ್ನ್ ಭಾಗದಲ್ಲಿ ಹೆಚ್ಚಿನ ವರ್ಷಧಾರೆಯಾಗಲಿದೆ. ಅದರಲ್ಲೂ ಅಕ್ಟೋಬರ್ 23 ರಂದು ಮೆಲ್ಬೋರ್ನ್ ಭಾಗದಲ್ಲಿ ಶೇ.80 ರಷ್ಟು ಮಳೆಯಾಗಲಿದೆ. ಹೀಗಾಗಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ನಡೆಯುವುದು ಅನುಮಾನ ಎಂದು ಸ್ಕೈ ನ್ಯೂಸ್ ಹವಾಮಾನಶಾಸ್ತ್ರಜ್ಞ ರಾಬ್ ಶಾರ್ಪ್ ತಿಳಿಸಿದ್ದರು. ಅಲ್ಲದೆ ಎರಡು ದಿನಗಳ ಹಿಂದೆ ಆಸ್ಟ್ರೇಲಿಯಾದ MET ಇಲಾಖೆಯು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿತ್ತು.
T20 World Cup 2022: 15 ದಿನ, 12 ತಂಡ, 30 ಪಂದ್ಯ; ಸೂಪರ್ 12 ಸುತ್ತಿನ ವೇಳಾಪಟ್ಟಿ ಹೀಗಿದೆ
ಮೆಲ್ಬೋರ್ನ್ ಭಾಗದಲ್ಲಿ ನಿರಂತರ ಮಳೆ ಸುರಿದರೆ ಭಾರತ ಪಾಕಿಸ್ತಾನ ಪಂದ್ಯ ನಡೆಯುವುದು ಅನುಮಾನ ಎಂದೇ ಹೇಳಲಾಗಿತ್ತು. ಆದರೀಗ ಗುಡ್ ನ್ಯೂಸ್ ಸಿಕ್ಕಿದೆ. ಮೆಲ್ಬೋರ್ನ್ನಲ್ಲಿ ಮಳೆಯ ಅಬ್ಬರ ಕಡಿಮೆ ಆಗಿದೆ. ಶನಿವಾರ ಸಣ್ಣ ಪ್ರಮಾಣದ ಮಳೆ ಆಗಿದೆಯಷ್ಟೆ. ಭಾನುವಾರ ಆಸ್ಟ್ರೇಲಿಯಾ ಕಾಲಮಾನ ಮಧ್ಯಾಹ್ನದ ಹೊತ್ತಿಗೆ ಮೆಲ್ಬೋರ್ನ್ನಲ್ಲಿ ಮಳೆಯ ಸೂಚನೆಯಿಲ್ಲ. ಸಂಜೆ ವೇಳೆಗೆ ಕೊಂಚ ಮಳೆ ಆಗಬಹುದು ಎಂದು ಹೇಳಲಾಗಿದೆ. ಈಗೀನ ಸ್ಥಿತಿ ನೋಡಿದರೆ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗುವುದು ಖಚಿತವಾಗಿದೆ.
It’s overcast in Melbourne but the forecast has improved a lot and there now appears to be just a small chance of any showers this evening. ?? #T20WorldCup #INDvPAK
— Melinda Farrell (@melindafarrell) October 22, 2022
ಮಳೆ ಬಂದರೆ ಏನುಗತಿ?:
ಭಾರತ ಹಾಗೂ ಪಾಕಿಸ್ತಾನ ನಡುವಣ ಕದನಕ್ಕೆ ಮಳೆ ಅಡ್ಡಿಯಾದರೆ ಪಂದ್ಯವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ. ಒಂದು ವೇಳೆ ಪಂದ್ಯ ನಡೆಸಲು ಅವಕಾಶವಿದ್ದರೆ ಭಾರತೀಯ ಕಾಲಮಾನ ಸಂಜೆ 4.30 ತನಕ ಕಾದು ನೋಡಬಹುದು. ಇದರ ನಡುವೆ ಮಳೆ ನಿಂತರೆ ಓವರ್ ಕಡಿತದೊಂದಿಗೆ ಪಂದ್ಯವನ್ನು ಶುರು ಮಾಡಬಹುದು. ಇನ್ನು ಪಂದ್ಯ ನಡೆಸಲು ಕಟ್ ಆಫ್ ಟೈಮ್ ನಿಗದಿತ ಪಡಿಸಿದ ಬಳಿಕ ಮಳೆ ನಿಂತರೆ ಉಭಯ ತಂಡಗಳಿಗೂ ತಲಾ 5 ಓವರ್‌ಗಳ ಪಂದ್ಯವನ್ನು ನಡೆಸಬಹುದು. ಒಂದುವೇಳೆ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಗುತ್ತದೆ. ಯಾವುದೇ ಮೀಸಲು ದಿನ ಇರುವುದಿಲ್ಲ.
ಅನೇಕ ಕಾರಣಗಳಿಂದ ಭಾರತ ಹಾಗೂ ಪಾಕಿಸ್ತಾನ ನಡುವಣ ಈ ಪಂದ್ಯ ಕುತೂಹಲ ಕೆರಳಿಸಿದೆ. ಕಳೆದ ವರ್ಷದ ವರೆಗೂ ಟೀಮ್ ಇಂಡಿಯಾ 50 ಓವರ್ ಹಾಗೂ 20 ಓವರ್‌ಗಳ ಮಾದರಿಗಳ ವಿಶ್ವಕಪ್ ಟೂರ್ನಿಗಳಲ್ಲಿ ಪಾಕ್ ವಿರುದ್ಧ ಸೋಲಿಲ್ಲದ ಸರದಾರನಾಗಿ ಮೆರೆದಿತ್ತು. ಆದರೆ, ದುಬೈನಲ್ಲಿ ನಡೆದಿದ್ದ ಟಿ20 ವಿಶ್ವಕಪ್ 2021 ಪಂದ್ಯದಲ್ಲಿ ಈ ಗೆಲುವಿನ ಸರಪಣಿ ಕಳಚಿಬಿತ್ತು. ಆ ಪಂದ್ಯದಲ್ಲಿ ಕೊಹ್ಲಿ ಪಡೆಯ ವಿರುದ್ಧ ಪಾಕಿಸ್ತಾನ ಹತ್ತು ವಿಕೆಟ್‌ಗಳ ಜಯಸಾಧಿಸಿತ್ತು. ಹೀಗಾಗಿ ಭಾರತಕ್ಕೆ ಇದೊಂದು ಸೇಡಿನ ಪಂದ್ಯ ಎಂದುಕೂಡ ಹೇಳಬಹುದು.