India vs Sri Lanka: ದ್ರಾವಿಡ್ ಗರಡಿ ಹುಡುಗರು ಎಡವಿದೆಲ್ಲಿ: ಭಾರತದ ಸೋಲಿಗೆ ಇದುವೇ ಪ್ರಮುಖ ಕಾರಣ..!

ಕೋಚ್ ರಾಹುಲ್ ದ್ರಾವಿಡ್ ಐವರು ಹೊಸ ಹುಡುಗರನ್ನು ಕಣಕ್ಕಿಳಿಸಿ ಪ್ರಯೋಗ ಮಾಡಿದ್ದರು. ಈ ಪ್ರಯೋಗ ಯಶಸ್ವಿಯಾಗಿತ್ತಾ ಅಥವಾ ಕೈ ಕೊಟ್ಟಿತ್ತಾ ಎಂಬುದನ್ನು ವಿಶ್ಲೇಷಿಸುವ ಮುನ್ನ, ಸೋಲಿಗೆ ಕಾರಣವಾದ ಪ್ರಮುಖ ಅಂಶಗಳನ್ನು ಗಮನಿಸಬೇಕಾಗುತ್ತದೆ. ಅದರಂತೆ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ ಕಾರಣವಾದ ಅಂಶಗಳನ್ನು ಇಲ್ಲಿ ತಿಳಿಸಲಾಗಿದೆ.

India vs Sri Lanka: ದ್ರಾವಿಡ್ ಗರಡಿ ಹುಡುಗರು ಎಡವಿದೆಲ್ಲಿ: ಭಾರತದ ಸೋಲಿಗೆ ಇದುವೇ ಪ್ರಮುಖ ಕಾರಣ..!
Rahul Dravid-Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 24, 2021 | 7:12 PM

ಕೊಲಂಬೊದ ಆರ್​.ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿತು. ಈ ಸೋಲಿನೊಂದಿಗೆ ಆತಿಥೇಯರ ವಿರುದ್ದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಅವಕಾಶವನ್ನು ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾ ತಪ್ಪಿಸಿಕೊಂಡಿದೆ. ಮಳೆ ಪೀಡಿತ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 225 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಶ್ರೀಲಂಕಾ ತಂಡವು 39 ನೇ ಓವರ್‌ನಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ಮುಟ್ಟಿತು. ಅಂದರೆ ಇಲ್ಲಿ ಶ್ರೀಲಂಕಾ ತಂಡವು 3 ವಿಕೆಟ್​ಗಳ ರೋಚಕ ಜಯ ತನ್ನದಾಗಿಸಿಕೊಂಡಿತು. ಅದು ಕೂಡ ಟೀಮ್ ಇಂಡಿಯಾ ಆಟಗಾರರು ಮಾಡಿದ ಕೆಲ ಬಾಲಿಶ ತಪ್ಪುಗಳಿಂದ ಎಂಬುದು ವಿಶೇಷ.

ಕೋಚ್ ರಾಹುಲ್ ದ್ರಾವಿಡ್ ಐವರು ಹೊಸ ಹುಡುಗರನ್ನು ಕಣಕ್ಕಿಳಿಸಿ ಪ್ರಯೋಗ ಮಾಡಿದ್ದರು. ಈ ಪ್ರಯೋಗ ಯಶಸ್ವಿಯಾಗಿತ್ತಾ ಅಥವಾ ಕೈ ಕೊಟ್ಟಿತ್ತಾ ಎಂಬುದನ್ನು ವಿಶ್ಲೇಷಿಸುವ ಮುನ್ನ, ಸೋಲಿಗೆ ಕಾರಣವಾದ ಪ್ರಮುಖ ಅಂಶಗಳನ್ನು ಗಮನಿಸಬೇಕಾಗುತ್ತದೆ. ಅದರಂತೆ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ ಕಾರಣವಾದ ಅಂಶಗಳನ್ನು ಇಲ್ಲಿ ತಿಳಿಸಲಾಗಿದೆ.

ಸ್ಪಿನ್ ಮುಂದೆ ಪರದಾಟ: ಟೀಮ್ ಇಂಡಿಯಾ ಒಂದು ಹಂತದಲ್ಲಿ 157 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲೇ ಇತ್ತು. ಆದರೆ ಮಳೆಯ ಬಳಿಕ ಲಂಕಾ ಸ್ಪಿನ್ನರ್​ಗಳು ಸಂಪೂರ್ಣ ಹಿಡಿತ ಸಾಧಿಸಿದರು. ಇತ್ತ ಅನುಭವಿ ಆಟಗಾರರಾದ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಮನೀಶ್ ಪಾಂಡೆ, ನಿತೀಶ್ ರಾಣಾ, ಸಂಜು ಸ್ಯಾಮ್ಸನ್ ಅವರಂತಹ ಬ್ಯಾಟ್ಸ್‌ಮನ್‌ಗಳು ಸ್ಪಿನ್ನರ್‌ಗಳಿಗೆ ತಮ್ಮ ವಿಕೆಟ್ ನೀಡಿದರು. ಶ್ರೀಲಂಕಾದ ಅಖಿಲಾ ಧನಂಜಯ ಹಾಗೂ ಪ್ರವೀಣ್ ಜಯವಿಕ್ರಮ ಪದಾರ್ಪಣೆ ಪಂದ್ಯದಲ್ಲೇ ತಲಾ 3 ವಿಕೆಟ್ ಪಡೆದು ಮಿಂಚಿದರು. ಅನಾನುಭವಿ ಸ್ಪಿನ್ನರ್​ಗಳ ವಿರುದ್ದ ಭಾರತೀಯ ಅನುಭವಿ ಬ್ಯಾಟ್ಸ್​ಮನ್​ಗಳು ಮಂಡಿಯೂರಿದ್ದು, ಟೀಮ್ ಇಂಡಿಯಾ ಕೇವಲ 225 ರನ್ ಗಳಿಸುವಂತೆ ಮಾಡಿತು.

ನಿರಾಶಾದಾಯಕ ಫೀಲ್ಡಿಂಗ್: ಕಡಿಮೆ ಮೊತ್ತದ ಸ್ಕೋರ್ ಹೊಂದಿರುವ ಪಂದ್ಯಗಳನ್ನು ಗೆಲ್ಲಲು ಉತ್ತಮ ಫೀಲ್ಡಿಂಗ್ ಅತ್ಯಗತ್ಯ. ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಕ್ಷೇತ್ರರಕ್ಷಣೆಯಲ್ಲಿ ಹಲವು ತಪ್ಪುಗಳನ್ನು ಮಾಡಿತು. ಮನೀಶ್ ಪಾಂಡೆ, ಪೃಥ್ವಿ ಶಾ, ಚೇತನ್ ಸಕಾರಿಯಾ, ನಿತೀಶ್ ರಾಣಾ ಅವರಂತಹ ಆಟಗಾರರು ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟರು. ಕ್ಯಾಪ್ಟನ್ ಶಿಖರ್ ಧವನ್ ಕೂಡ ಕ್ಯಾಚ್ ಕೈಚೆಲ್ಲಿದರು. ಹೀಗೆ ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳಿಗೆ ಹಲವು ಬಾರಿ ಟೀಮ್ ಇಂಡಿಯಾ ಜೀವದಾನ ನೀಡಿದ್ದು ಮುಳುವಾಯಿತು.

ಹೆಚ್ಚುವರಿ ರನ್: ಟೀಮ್ ಇಂಡಿಯಾ ತನ್ನ ಬೌಲಿಂಗ್​ನಲ್ಲಿ 30 ಎಕ್ಸ್​ಟ್ರಾ ರನ್​ಗಳನ್ನು ಬಿಟ್ಟುಕೊಟ್ಟಿತು. ಚೇತನ್ ಸಕಾರಿಯಾ ಮತ್ತು ರಾಹುಲ್ ಚಹರ್ ತಲಾ 2 ನೋ ಬಾಲ್ ಎಸೆದರೆ, ನವದೀಪ್ ಸೈನಿ 1 ನೋ ಬಾಲ್ ಎಸೆದು ದುಬಾರಿಯಾದರು. ಹೀಗೆ ಸಿಕ್ಕ ಫ್ರಿಹಿಟ್​ಗಳಲ್ಲೂ ರನ್​ಗಳಿಸುವ ಮೂಲಕ ಶ್ರೀಲಂಕಾ ತನ್ನ ರನ್​ಗತಿಯನ್ನು ಹೆಚ್ಚಿಸಿದರು.

ಮನೀಶ್ ಪಾಂಡೆ-ಹಾರ್ದಿಕ್ ಪಾಂಡ್ಯ ಅವರ ಕಳಪೆ ಫಾರ್ಮ್: ಪ್ರಸ್ತುತ ಟೀಮ್ ಇಂಡಿಯಾದಲ್ಲಿರುವ ಅನುಭವಿಗಳ ಪಟ್ಟಿಯಲ್ಲಿ ಮನೀಶ್ ಪಾಂಡೆ ಹಾಗೂ ಹಾರ್ದಿಕ್ ಪಾಂಡ್ಯ ಮುಂಚೂಣಿಯಲ್ಲಿದ್ದಾರೆ. ಆದರೆ ಈ ಇಬ್ಬರು ಆಟಗಾರರು ಮೂರನೇ ಏಕದಿನ ಪಂದ್ಯದಲ್ಲಿ ವಿಫಲವಾಗಿದ್ದು ಭಾರತ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಮೊದಲೆರಡು ಪಂದ್ಯಗಳಲ್ಲಿ ವೈಫಲ್ಯ ಹೊಂದಿದ್ದ ಪಾಂಡೆ ಹಾಗೂ ಪಾಂಡ್ಯರನ್ನು ಅನುಭವದ ಕಾರಣಕ್ಕೆ ಮೂರನೇ ಪಂದ್ಯಕ್ಕೂ ತಂಡದಲ್ಲಿರಿಸಲಾಗಿತ್ತು. ಆದರೆ ಪಾಂಡೆ 11 ಕ್ಕೆ ಮತ್ತು ಹಾರ್ದಿಕ್ ಪಾಂಡ್ಯ 19 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಇನ್ನು ಬೌಲಿಂಗ್​ನಲ್ಲಿ ಪಾಂಡ್ಯ 5 ಓವರ್‌ಗಳಲ್ಲಿ 43 ರನ್ ನೀಡಿ ದುಬಾರಿ ಎನಿಸಿಕೊಂಡರು. ಈ ಎಲ್ಲಾ ಅಂಶಗಳು ಟೀಮ್ ಇಂಡಿಯಾ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿತು. ಅದರಲ್ಲೂ ಕಡಿಮೆ ಟಾರ್ಗೆಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 30 ಎಕ್ಸ್​ಟ್ರಾ ರನ್ ನೀಡಿದ್ದು, ಭಾರತದ ಸೋಲಿಗೆ ಪ್ರಮುಖ ಕಾರಣವಾಯ್ತು ಎಂದೇ ಹೇಳಬಹುದು.

ಇದನ್ನೂ ಓದಿ: MS Dhoni: ಧೋನಿ ಕೋಚ್ ಆಗಲಿದ್ದಾರೆ: ಮಾಜಿ ಕ್ರಿಕೆಟಿಗನ ಭವಿಷ್ಯ..!

ಇದನ್ನೂ ಓದಿ: India vs Sri Lanka T20 Schedule: ಟಿ20 ಕದನಕ್ಕೆ ಟೀಮ್ ಇಂಡಿಯಾ ಸಜ್ಜು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ