India vs Sri Lanka, 3rd T20: ಭರ್ಜರಿ ಜಯದೊಂದಿಗೆ ಸರಣಿ ಗೆದ್ದ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Jan 07, 2023 | 11:00 PM

India vs Sri Lanka, 3rd T20: 229 ರನ್​ಗಳ ಕಠಿಣ ಗುರಿ ಪಡೆದ ಶ್ರೀಲಂಕಾ ತಂಡಕ್ಕೆ ಕುಸಾಲ್ ಮೆಂಡಿಸ್ ಹಾಗೂ ಪಾತುಮ್ ನಿಸ್ಸಂಕಾ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 44 ರನ್​ ಬಾರಿಸಿದ್ದ ಈ ಜೋಡಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು.

India vs Sri Lanka, 3rd T20: ಭರ್ಜರಿ ಜಯದೊಂದಿಗೆ ಸರಣಿ ಗೆದ್ದ ಟೀಮ್ ಇಂಡಿಯಾ
Indian Team
Follow us on

India vs Sri Lanka, 3rd T20: ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 91 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯನ್ನು ಭಾರತ ತಂಡ 2-1 ಅಂತರದಿಂದ ಗೆದ್ದುಕೊಂಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಆಟಗಾರ ಇಶಾನ್ ಕಿಶನ್ (1) ಮೊದಲ ಓವರ್​ನಲ್ಲೇ ಕ್ಯಾಚ್ ನೀಡುವ ಮೂಲಕ ಹೊರನಡೆದರು. ಈ ವೇಳೆ ಕಣಕ್ಕಿಳಿದ ರಾಹುಲ್ ತ್ರಿಪಾಠಿ ಸ್ಪೋಟಕ ಬ್ಯಾಟಿಂಗ್ ನಡೆಸಿದರು. 2 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ನೊಂದಿಗೆ ಅಬ್ಬರಿಸಿದ ತ್ರಿಪಾಠಿ 16 ಎಸೆತಗಳಲ್ಲಿ 35 ರನ್ ಬಾರಿಸಿ ಕರುಣರತ್ನೆ ಎಸೆತದಲ್ಲಿ ಔಟಾದರು.

ಈ ಹಂತದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಅಕ್ಷರಶಃ ಅಬ್ಬರಿಸಿದರು. ಆರಂಭಿಕ ಆಟಗಾರ ಶುಭ್​ಮನ್ ಗಿಲ್ ಜೊತೆಗೂಡಿ ಇನಿಂಗ್ಸ್ ಕಟ್ಟಿದ ಸೂರ್ಯ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಮತ್ತೊಂದೆಡೆ ಗಿಲ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು.

ಪರಿಣಾಮ 11 ಓವರ್​ನಲ್ಲೇ ಟೀಮ್ ಇಂಡಿಯಾ ಮೊತ್ತ 100ರ ಗಡಿದಾಟಿತು. ಈ ಹಂತದಲ್ಲಿ 360 ಡಿಗ್ರಿಯಲ್ಲಿ ಬ್ಯಾಟ್ ಬೀಸಲಾರಂಭಿಸಿದ ಸೂರ್ಯ ಲಂಕಾ ಬೌಲರ್​ಗಳ ಬೆಂಡೆತ್ತಿದರು. ಈ ವೇಳೆ 46 ರನ್​ ಬಾರಿಸಿದ್ದ ಶುಭ್​ಮನ್ ಗಿಲ್ ಹಸರಂಗ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

ಇದನ್ನೂ ಓದಿ
IPL 2023: 2 ದೇಶಗಳಿಂದ ಐಪಿಎಲ್​ಗೆ ಆಯ್ಕೆಯಾದ ಏಕೈಕ ಕ್ರಿಕೆಟಿಗ
IPL 2023: RCB ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…
IPL 2023: ಐಪಿಎಲ್​ಗೆ ನಮೀಬಿಯಾ, ಐರ್ಲೆಂಡ್, ಜಿಂಬಾಬ್ವೆ ಆಟಗಾರರು ಎಂಟ್ರಿ
IPL 2023 RCB Team: RCB ಹೊಸ ತಂಡ ಹೀಗಿದೆ

ಆದರೆ ಮತ್ತೊಂದೆಡೆ ಆರ್ಭಟ ಮುಂದುವರೆಸಿದ್ದ ಸೂರ್ಯಕುಮಾರ್ ಯಾದವ್ ಕೇವಲ 45 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ ವೇಗವಾಗಿ ಶತಕ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡರು.
ಅಂತಿಮ ಹಂತದಲ್ಲಿ ಸೂರ್ಯಕುಮಾರ್​ಗೆ ಉತ್ತಮ ಸಾಥ್ ನೀಡಿದ ಅಕ್ಷರ್ ಪಟೇಲ್ 9 ಎಸೆತಗಳಲ್ಲಿ ಅಜೇಯ 21 ರನ್ ಬಾರಿಸಿದರು. ಇನ್ನೊಂದೆಡೆ 51 ಎಸೆತಗಳನ್ನು ಎದುರಿಸಿದ ಸೂರ್ಯ 9 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ನೊಂದಿಗೆ ಅಜೇಯ 112 ರನ್​ ಚಚ್ಚಿದರು. ಇದರೊಂದಿಗೆ ನಿಗದಿತ 20 ಓವರ್​ಗಳಲ್ಲಿ ಟೀಮ್ ಇಂಡಿಯಾ ಮೊತ್ತ 5 ವಿಕೆಟ್ ನಷ್ಟಕ್ಕೆ 228 ಕ್ಕೆ ಬಂದು ನಿಂತಿತು.

229 ರನ್​ಗಳ ಕಠಿಣ ಗುರಿ ಪಡೆದ ಶ್ರೀಲಂಕಾ ತಂಡಕ್ಕೆ ಕುಸಾಲ್ ಮೆಂಡಿಸ್ ಹಾಗೂ ಪಾತುಮ್ ನಿಸ್ಸಂಕಾ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 44 ರನ್​ ಬಾರಿಸಿದ್ದ ಈ ಜೋಡಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಆದರೆ ಈ ಹಂತದಲ್ಲಿ ದಾಳಿಗಿಳಿದ ಅಕ್ಷರ್ ಮೆಂಡಿಸ್​ನ ಔಟ್​ ಮಾಡಿ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಪಾತುಂ ನಿಸ್ಸಾಂಕ ಅರ್ಷದೀಪ್​ಗೆ ವಿಕೆಟ್ ಒಪ್ಪಿಸಿದರು.

ಆ ಬಳಿಕ ಬಂದ ಅವಿಷ್ಕಾ ಫರ್ನಾಂಡೊ (1) ಚರಿತ್ ಅಸಲಂಕಾ (19) ಹಾಗೂ ಧನಂಜಯ ಡಿಸಿಲ್ವಾ (22) ಹೆಚ್ಚು ಹೊತ್ತು ನಿಲ್ಲಲಿಲ್ಲ. ಇನ್ನು ವನಿಂದು ಹಸರಂಗ ಉಮ್ರಾನ್ ಮಲಿಕ್ ಎಸೆತದಲ್ಲಿ ಔಟಾದರು. ಇದರೊಂದಿಗೆ 106 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡು ಶ್ರೀಲಂಕಾ ಸಂಕಷ್ಟಕ್ಕೆ ಸಿಲುಕಿತು.

ಇದಾಗ್ಯೂ ಶ್ರೀಲಂಕಾ ತಂಡದ ನಾಯಕ ದುಸನ್ ಶಾನಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಚಹಾಲ್ ಅವರ ಒಂದೇ ಓವರ್​ನಲ್ಲಿ 2 ಸಿಕ್ಸ್ ಸಿಡಿಸುವ ಮೂಲಕ ಅಬ್ಬರಿಸಿದರು. ಆದರೆ ಮತ್ತೊಂದೆಡೆ ಕರುಣರತ್ನೆ ಶೂನ್ಯಕ್ಕೆ ಔಟಾದರೆ, ತೀಕ್ಷಣ (2) ಉಮ್ರಾನ್ ಮಲಿಕ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

17ನೇ ಓವರ್​ನಲ್ಲಿ ಅರ್ಷದೀಪ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಶಾನಕ (23) ಅಕ್ಷರ್ ಪಟೇಲ್​ಗೆ ಕ್ಯಾಚ್ ನೀಡಿದರು. ಇನ್ನು ಅಂತಿಮವಾಗಿ ಮಧುಶಂಕ   ಔಟಾಗುವ ಮೂಲಕ ಶ್ರೀಲಂಕಾ ತಂಡವು 137 ರನ್​ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಟೀಮ್ ಇಂಡಿಯಾ 91 ರನ್​ಗಳ ಭರ್ಜರಿ ಜಯ ಸಾಧಿಸಿತು.

ಟೀಮ್ ಇಂಡಿಯಾ ಪರ ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದರೆ, ಉಮ್ರಾನ್ ಮಲಿಕ್, ಚಹಾಲ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಕಬಳಿಸಿದರು.

ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೀಗಿದೆ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್​ಮನ್ ಗಿಲ್, ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜುವೇಂದ್ರ ಚಾಹಲ್

ಶ್ರೀಲಂಕಾ ಪ್ಲೇಯಿಂಗ್ 11 ಹೀಗಿದೆ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಅವಿಷ್ಕ ಫರ್ನಾಂಡೊ, ದಸುನ್ ಶಾನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತಾ, ದಿಲ್ಶನ್ ಮಧುಶಂಕ

 

 

Published On - 10:13 pm, Sat, 7 January 23