IND vs SL: 3ನೇ ಏಕದಿನ ಪಂದ್ಯದಲ್ಲಿ ಭಾರತ ಪರ 5 ಜನ ಪದಾರ್ಪಣೆ ಮಾಡಿದ್ದು ಯಾಕೆ ಗೊತ್ತಾ?: ಇಲ್ಲಿದೆ ಕಾರಣ
India vs Sri Lanka: ಟೀಮ್ ಇಂಡಿಯಾ ಇಂತಹ ದೊಡ್ಡ ನಿರ್ಧಾರವನ್ನು ಯಾಕೆ ತೆಗೆದುಕೊಂಡಿತು ಎಂಬ ಗೊಂದಲ ಎಲ್ಲರಲ್ಲೂ ಮೂಡಿದೆ. ಈ ಬಗ್ಗೆ ನಾಯಕ ಶಿಖರ್ ಧವನ್ ಸ್ಪಷ್ಟೀಕರಣ ನೀಡಿದ್ದಾರೆ.
ಕೊಲಂಬೊದಲ್ಲಿ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಅಂತಿಮ ಮೂರನೇ ಏಕದಿನ ಪಂದ್ಯದಲ್ಲಿ ಭಾರತ (India vs Sri lanka) 3 ವಿಕೆಟ್ಗಳಿಂದ ಸೋಲುಕಂಡಿತು. ಮೊದಲ ಎರಡು ಪಂದ್ಯದಲ್ಲಿ ಜಯ ಸಾಧಿಸಿದ ಕಾರಣ 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿತು. ಆದರೂ ಟೀಮ್ ಇಂಡಿಯಾಕ್ಕೆ (Team India) ಕ್ಲೀನ್ಸ್ವೀಪ್ ಮಾಡುವ ಅವಕಾಶ ಕೈ ತಪ್ಪಿತು. ಭಾರತದ ಸೋಲಿಗೆ ಐದು ಹೊಸ ಆಟಗಾರರು ಪದಾರ್ಪಣೆ ಮಾಡಿದ್ದೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ಶಿಖರ್ ಧವನ್ (Shikhar Dhawan) ಈರೀತಿಯ ದೊಡ್ಡ ಬದಲಾವಣೆ ಮಾಡಿದ ಬಗ್ಗೆ ಕ್ರಿಕೆಟ್ ಪಂಡಿತರೇ ಅಸಮಾಧಾನ ಹೊರಹಾಕುತ್ತಿದ್ದಾರೆ.
ಈ ರೀತಿ ಒಂದೇ ಪಂದ್ಯಕ್ಕೆ ಐವರು ಹೊಸ ಆಟಗಾರರನ್ನು ಅಡಿಸಿದ ಕೋಚ್ ದ್ರಾವಿಡ್ ಮತ್ತು ಟೀಂ ಮ್ಯಾನೇಜ್ ಮೆಂಟ್ ನಿರ್ಧಾರವನ್ನು ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೀಕಿಸಿದ್ದಾರೆ. ತಂಡದಲ್ಲಿದ್ದಾರೆ ಎಂದು ಎಲ್ಲರಿಗೂ ಅವಕಾಶ ನೀಡಬಾರದು. ನಿಜವಾಗಿಯೂ ಅರ್ಹತೆ ಇದ್ದರೆ ಮಾತ್ರ ಅವಕಾಶ ನೀಡಬೇಕು ಎಂದು ಅವರು ಹೇಳಿದ್ದಾರೆ.
ಟೀಮ್ ಇಂಡಿಯಾ ಇಂತಹ ದೊಡ್ಡ ನಿರ್ಧಾರವನ್ನು ಯಾಕೆ ತೆಗೆದುಕೊಂಡಿತು ಎಂಬ ಗೊಂದಲ ಎಲ್ಲರಲ್ಲೂ ಮೂಡಿದೆ. ಈ ಬಗ್ಗೆ ನಾಯಕ ಶಿಖರ್ ಧವನ್ ಸ್ಪಷ್ಟೀಕರಣ ನೀಡಿದ್ದಾರೆ. “ಪ್ರತಿಯೊಬ್ಬರು ದೀರ್ಘ ಅವಧಿಯಿಂದ ಕ್ವಾರಂಟೈನ್‌ನಲ್ಲಿ ಉಳಿದಿದ್ದಾರೆ. ಅಲ್ಲದೆ, ನಾವು ಈಗಾಗಲೇ ಏಕದಿನ ಸರಣಿಯನ್ನು ವಶಕ್ಕೆ ಪಡೆದುಕೊಂಡಿದ್ದೆವು. ಹೀಗಾಗಿ ಪ್ರಮುಖ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಐವರು ಹೊಸಬರು ಸೇರಿದಂತೆ ಆರು ಮಂದಿಗೆ ಅಂತಿಮ ಪಂದ್ಯದಲ್ಲಿ ಅವಕಾಶ ನೀಡಲಾಯಿತು. ಇದು ನನಗೆ ತುಂಬಾ ಸಂತೋಷ ನೀಡಿದೆ,” ಎಂದು ಧವನ್ ಹೇಳಿದ್ದಾರೆ.
“ಕೆಲವು ಕಡೆಗಳನ್ನು ತಪ್ಪು ಮಾಡಿದ್ದೇವೆ. ಎಲ್ಲಿ ಸುಧಾರಿಸಬಹುದು ಮತ್ತು ತಂತ್ರಗಳು ಎಲ್ಲಿ ಉತ್ತಮವಾಗಬಹುದು ಎಂಬ ಬಗ್ಗೆ ನಾನು ವಿಶ್ಲೇಷಿಸುತ್ತೇನೆ. ಮುಂಬರುವ ಟಿ-20 ಸರಣಿಯನ್ನು ಎದುರು ನೋಡುತ್ತಿದ್ದೇನೆ. ನಾವು ಕಡಿಮೆ ಮೊತ್ತದ ಗುರಿ ನೀಡಿದ್ದರೂ ಕೂಡ, ಅಷ್ಟೇ ರನ್‌ಗಳಿಗೆ ಎದುರಾಳಿ ತಂಡವನ್ನು ನಿಯಂತ್ರಿಸಲು ಹೋರಾಟ ನಡೆಸುತ್ತೇವೆ” ಎಂದು ಹೇಳಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ನಡುವೆ ಮೂರು ಪಂದ್ಯಗಳ ಟಿ-20 ಸರಣಿ ನಡೆಯಲಿದೆ. ಮೊದಲ ಪಂದ್ಯ ಜುಲೈ 25 ರಂದು ಭಾನುವಾರ, ಎರಡನೇ ಪಂದ್ಯ ಜುಲೈ 27 ಮಂಗಳವಾರ ಮತ್ತು ಅಂತಿಮ ಟಿ-20 ಜುಲೈ 27 ಗುರುವಾರದಂದು ಆಯೋಜಿಸಲಾಗಿದೆ. ಎಲ್ಲಾ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
Tokyo Olympics 2020: ಹಾಕಿಯಲ್ಲಿ ಭಾರತ ಶುಭಾರಂಭ: ನ್ಯೂಜಿಲೆಂಡ್ ವಿರುದ್ಧ ರೋಚಕ ಜಯ
(India vs Sri lanka Shikhar Dhawan reveals why India fielded five debutants in third ODI against Sri Lanka)