ಭಾರತ-ವೆಸ್ಟ್ ಇಂಡೀಸ್ ನಡುವಣ 5 ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯವು ಮಂಗಳವಾರ ನಡೆಯಲಿದೆ. ಸೋಮವಾರವಷ್ಟೇ ಸೇಂಟ್ ಕಿಟ್ಸ್ ಮೈದಾನದಲ್ಲಿ 2ನೇ ಟಿ20 ಪಂದ್ಯವಾಡಿದ್ದ ಉಭಯ ತಂಡಗಳು, ಇದೀಗ ಅದೇ ಮೈದಾನದಲ್ಲಿ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈಗಾಗಲೇ ಮೊದಲ ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಜಯಿಸಿದೆ. ಇದೀಗ ಮೂರನೇ ಪಂದ್ಯಕ್ಕಾಗಿ ಗಂಟೆಗಳ ಅಂತರದಲ್ಲಿ ಎರಡೂ ತಂಡಗಳು ಸಜ್ಜಾಗಬೇಕಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ 2ನೇ ಪಂದ್ಯದಲ್ಲಿ ಮಕಾಡೆ ಮಲಗಿತು. ಅದರಲ್ಲೂ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಒಬೆಡ್ ಮೆಕಾಯ್ ದಾಳಿಗೆ ತತ್ತರಿಸಿದ್ದರು.
4 ಓವರ್ಗಳನ್ನು ಎಸೆದ ಮೆಕಾಯ್ ಒಂದು ಮೇಡನ್ ಓವರ್ ಸೇರಿದಂತೆ ಕೇವಲ 17 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಪರಿಣಾಮ ಟೀಮ್ ಇಂಡಿಯಾ 19.4 ಓವರ್ಗಳಲ್ಲಿ 138 ರನ್ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 19.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿತು.
ಇದೀಗ ವೆಸ್ಟ್ ಇಂಡೀಸ್ ಗೆದ್ದಿರುವ ಸೇಂಟ್ ಕಿಟ್ಸ್ ಮೈದಾನದಲ್ಲೇ ಮೂರನೇ ಪಂದ್ಯವಾಡಲಾಗುತ್ತಿದೆ. ಹೀಗಾಗಿಯೇ ಈ ಪಂದ್ಯದ ಮೇಲೆ ಕುತೂಹಲ ಹೆಚ್ಚಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಗೆಲ್ಲುವ ತಂಡವು ಸರಣಿಯಲ್ಲಿ ಮೇಲುಗೈ ಸಾಧಿಸಲಿದೆ. ಹೀಗಾಗಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ಎದುರು ನೋಡಬಹುದು.
ಎಷ್ಟು ಗಂಟೆಗೆ ಪಂದ್ಯ ಶುರು?
ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಬೇಕಿತ್ತು. ಆದರೆ 2ನೇ ಪಂದ್ಯವು ತಡವಾಗಿ ಆರಂಭವಾಗಿದ್ದ ಕಾರಣ, ಆಟಗಾರರಿಗೆ ಹೆಚ್ಚಿನ ವಿಶ್ರಾಂತಿ ನೀಡಲು ಮೂರನೇ ಪಂದ್ಯದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಅದರಂತೆ 8 ಗಂಟೆಯ ಬದಲಿಗೆ ಈ ಪಂದ್ಯವು ರಾತ್ರಿ 9.30 ರಿಂದ ಶುರುವಾಗಲಿದೆ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಭಾರತದಲ್ಲಿ ಈ ಪಂದ್ಯವನ್ನು ಡಿಡಿ ಸ್ಪೋರ್ಟ್ಸ್ ಚಾನೆಲ್ನಲ್ಲಿ ವೀಕ್ಷಿಸಬಹುದು. ಹಾಗೆಯೇ ಫ್ಯಾನ್ ಕೋಡ್ ಆ್ಯಪ್ನಲ್ಲೂ ಈ ಪಂದ್ಯದ ಲೈವ್ ಸ್ಟೀಮಿಂಗ್ ಇರಲಿದೆ.
ಉಭಯ ತಂಡಗಳು ಹೀಗಿವೆ:
ವೆಸ್ಟ್ ಇಂಡೀಸ್ ಟಿ20 ತಂಡ: ನಿಕೋಲಸ್ ಪೂರನ್ (ನಾಯಕ) , ಡೆವೊನ್ ಥಾಮಸ್ (ವಿಕೆಟ್ ಕೀಪರ್) , ಬ್ರಾಂಡನ್ ಕಿಂಗ್ , ಕೈಲ್ ಮೇಯರ್ಸ್ , ಶಿಮ್ರಾನ್ ಹೆಟ್ಮೆಯರ್ , ರೋವ್ಮನ್ ಪೊವೆಲ್ , ಓಡಿಯನ್ ಸ್ಮಿತ್ , ಜೇಸನ್ ಹೋಲ್ಡರ್ , ಅಕೆಲ್ ಹೋಸೇನ್ , ಅಲ್ಜಾರಿ ಜೋಸೆಫ್ , ಓಬೆಡ್ ಮೆಕಾಯ್ , ಕೀಮೋ ಬ್ರೋಕ್ ಶೆಫರ್ , ಷಮರ್ ಬ್ರೋಕ್ ಪಾಲ್ , ಹೇಡನ್ ವಾಲ್ಷ್.
ಭಾರತ ಟಿ20 ತಂಡ: ರೋಹಿತ್ ಶರ್ಮಾ (ನಾಯಕ) , ರಿಷಬ್ ಪಂತ್ ( ವಿಕೆಟ್ ಕೀಪರ್) , ಸೂರ್ಯಕುಮಾರ್ ಯಾದವ್ , ಶ್ರೇಯಸ್ ಅಯ್ಯರ್ , ಹಾರ್ದಿಕ್ ಪಾಂಡ್ಯ , ರವೀಂದ್ರ ಜಡೇಜಾ , ದಿನೇಶ್ ಕಾರ್ತಿಕ್ , ರವಿಚಂದ್ರನ್ ಅಶ್ವಿನ್ , ಭುವನೇಶ್ವರ್ ಕುಮಾರ್ , ಅವೇಶ್ ಖಾನ್ , ಅರ್ಷದೀಪ್ ಸಿಂಗ್ , ರವಿ ಬಿಷ್ಣೋಯ್ , ಸಂಜು ಸ್ಯಾಮ್ಸನ್ , ಹರ್ಷಲ್ ಪಟೇಲ್ , ದೀಪಕ್ ಹೂಡಾ, ಕುಲ್ದೀಪ್ ಯಾದವ್.