
ಕೋಲ್ಕತ್ತಾದ ಈಡನ್ಗಾರ್ಡನ್ಸ್ ಮೈದಾನದಲ್ಲಿ ನಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಿನ ಸೂಪರ್ 8 ಸುತ್ತಿನ ಪಂದ್ಯ ರಣರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಮೊದಲೇ ಹೇಳಿದಂತೆ ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಸೆಮಿಫೈನಲ್ ಟಿಕೆಟ್ ಸಿಗುತ್ತಿತ್ತು. ಹೀಗಾಗಿ ಎರಡು ತಂಡಗಳು ಗೆಲುವಿಗಾಗಿ ರಣತಂತ್ರವನ್ನೇ ಹೆಣೆದಿದ್ದವು. ಆದರೆ ಕೆಚ್ಚೆದೆಯ ಆಟವನ್ನಾಡಿದ ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದು ಸೆಮಿಫೈನಲ್ಗೆ ಅರ್ಹತೆ ಪಡೆಯಿತು. ಟೀಂ ಇಂಡಿಯಾದ ಈ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್ (Sanju Samson) ಎಂದರೆ ತಪ್ಪಾಗಲಾರದು. ಆರಂಭಿಕನಾಗಿ ಕಣಕ್ಕಿಳಿದಿದ್ದ ಸಂಜು ತಂಡದ ಪರ ಏಕಾಂಗಿ ಹೋರಾಟ ನಡೆಸಿದರು. ಸಂಜು ಅವರ ಈ ಸ್ಮರಣೀಯ ಇನ್ನಿಂಗ್ಸ್ನಿಂದಾಗಿ ವಿಂಡೀಸ್ ನೀಡಿದ 195 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಐತಿಹಾಸಿಕ ಜಯ ಸಾಧಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ಗೆ ಉತ್ತಮ ಆರಂಭ ಸಿಕ್ಕಿತು. ಶಾಯ್ ಹೋಪ್ ಹಾಗೂ ಚೇಸ್ ಮೊದಲ ವಿಕೆಟ್ಗೆ 68 ರನ್‌ಗಳ ಜೊತೆಯಾಟ ನೀಡಿದರು. ವಿಂಡೀಸ್ನ ಈ ಆರಂಭಕ್ಕೆ ಭಾರತದ ಫಿಲ್ಡರ್ಗಳ ಕೊಡುಗೆಯೂ ಅಪಾರವಾಗಿತ್ತು. ವರುಣ್ ಚಕ್ರವರ್ತಿ ರನೌಟ್ ತಪ್ಪಿಸಿದರೆ, ಅಭಿಷೇಕ್ ಶರ್ಮಾ ಸುಲಭ ಕ್ಯಾಚ್ ಕೈಚೆಲ್ಲಿದರು. ಇದರ ಲಾಭ ಪಡೆದ ವಿಂಡೀಸ್ ವಿಕೆಟ್ಗಳ ಪತನದ ನಡುವೆಯೂ ಭಾರತದ ಬೌಲರ್ಗಳ ಮೇಲೆ ಸವಾರಿ ನಡೆಸಿತು.
ಆದಾಗ್ಯೂ ಮೊದಲ 10 ಓವರ್ಗಳಲ್ಲಿ ಭಾರತ ಉತ್ತಮವಾಗಿ ಬೌಲ್ ಮಾಡಿ ಕೇವಲ 82 ರನ್ ಬಿಟ್ಟುಕೊಟ್ಟಿತು. ಆದರೆ ಕೊನೆಯ 10 ಓವರ್ಗಳಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ವಿಂಡೀಸ್ 113 ರನ್ ಕಲೆಹಾಕಿತು. ವಿಂಡೀಸ್ ಪರ ರೊಸ್ಟನ್ ಚೇಸ್ ಅತ್ಯಧಿಕ 40 ರನ್‌ಗಳ ಇನ್ನಿಂಗ್ಸ್ ಆಡಿದರೆ, ಪೊವೆಲ್ ಹಾಗೂ ಜೇಸನ್ ಹೋಲ್ಡರ್ ಕ್ರಮವಾಗಿ 34 ಮತ್ತು 37 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಇವರಿಬ್ಬರ ನಡುವೆ ಐದನೇ ವಿಕೆಟ್ಗೆ 74 ರನ್‌ಗಳ ಜೊತೆಯಾಟವೂ ಮೂಡಿಬಂತು. ಇದರ ಪರಿಣಾಮವಾಗಿ ವಿಂಡೀಸ್ ಪಡೆ 20 ಓವರ್ಗಳಲ್ಲಿ 195 ರನ್ ಕಲೆಹಾಕಿತು.
ಭಾರತ ಈ ಪಂದ್ಯವನ್ನು ಗೆಲ್ಲಬೇಕಿದ್ದರೆ ತನ್ನ ಹಿಂದಿನ ಇತಿಹಾಸವನ್ನು ಬದಲಿಸಬೇಕಿತ್ತು. ಏಕೆಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಇಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟಿರಲಿಲ್ಲ. ಹೀಗಾಗಿ ಅತಿದೊಡ್ಡ ಗುರಿಯನ್ನು ಮುಂದಿಟ್ಟುಕೊಟ್ಟು ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮತ್ತೊಮ್ಮೆ ಕೈಕೊಟ್ಟ ಆರಂಭಿಕ ಅಭಿಷೇಕ್ ಶರ್ಮಾ 10 ರನ್‌ಗಳಿಗೆ ಸುಸ್ತಾದರು. ಅಭಿಷೇಕ್ ನಂತರ ಬಂದ ಇಶಾನ್ ಕಿಶನ್ ಕೂಡ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಅವರು ಕೂಡ ಕೇವಲ 10 ರನ್‌ಗಳಿಗೆ ಔಟಾದರು. ಆದಾಗ್ಯೂ, ಒಂದು ತುದಿಯಲ್ಲಿ ವಿಕೆಟ್‌ಗಳು ಬಿದ್ದಾಗ, ಇನ್ನೊಂದು ತುದಿಯಲ್ಲಿ ನಿಂತಿದ್ದ ಸಂಜು ಸ್ಯಾಮ್ಸನ್ ಮಾತ್ರ ನಿರ್ಣಾಯಕ ಪಂದ್ಯದಲ್ಲಿ ತಮ್ಮ ಅನುಭವವನ್ನು ಧಾರೆ ಎರೆದರು.
IND vs WI: 2 ಕ್ಯಾಚ್ ಡ್ರಾಪ್, 10 ರನ್ಗೆ ಔಟ್; ಅಪ್ರಯೋಜಕ ಅಭಿಷೇಕ್ ಶರ್ಮಾ
ಆರಂಭಿಕನಾಗಿ ಬಂದು ಕೊನೆಯವರೆಗೂ ಅಜೇಯರಾಗಿ ಉಳಿದ ಸಂಜು ಸ್ಯಾಮ್ಸನ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದ ಬಳಿಕ ಡಗೌಟ್ಗೆ ಮರಳಿದರು. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ ಅಜೇಯ 97 ರನ್ ಗಳಿಸಿದರು. 104 ಸ್ಟ್ರೈಕ್ ರೇಟ್‌ನಲ್ಲಿ ಆಡಿದ ಈ ಇನ್ನಿಂಗ್ಸ್‌ನಲ್ಲಿ 12 ಬೌಂಡರಿಗಳು ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಟಿ20 ವಿಶ್ವಕಪ್ ರನ್ ಚೇಸ್‌ನಲ್ಲಿ ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಧಿಕ ಇನ್ನಿಂಗ್ಸ್ ಇದಾಗಿದೆ. ಇದಕ್ಕೂ ಮೊದಲು, 82 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿ ಈ ದಾಖಲೆ ಇತ್ತು. ಇನ್ನು ಈ ಪಂದ್ಯದಲ್ಲಿ ಸಂಜು ಹೊರತಾಗಿ ತಿಲಕ್ ವರ್ಮಾ ಕೂಡ 27 ರನ್‌ಗಳ ಕಾಣಿಕೆ ನೀಡಿದರು. ಕೊನೆಯಲ್ಲಿ ಶಿವಂ ದುಬೆ ಕೂಡ ಅಜೇಯ 8 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:47 pm, Sun, 1 March 26