India vs England 4th Test: ನಾಲ್ಕನೇ ದಿನದಾಟ ನಿರ್ಣಾಯಕ: ಇಂಗ್ಲೆಂಡ್ ವಿರುದ್ದ ಗೆಲ್ಲಲು ಭಾರತ ಏನು ಮಾಡಬೇಕು?
Team India: ಮೂರನೇ ದಿನದಾಟದಲ್ಲಿ ಭಾರತವು ಸಂಪೂರ್ಣ ಬ್ಯಾಟ್ ಮಾಡಬೇಕಿದೆ. ಅಲ್ಲದೆ ನಾಲ್ಕನೇ ದಿನದಾಟವನ್ನೂ ಆಡಿ 400ಕ್ಕೂ ಅಧಿಕ ಮೊತ್ತ ಪೇರಿಸಬೇಕಿದೆ.

India vs England 4th Test: ಓವಲ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯ ರೋಚಕ ತಿರುವು ಪಡೆಯುವ ಸಾಧ್ಯತೆಯಿದೆ. ಎರಡನೇ ದಿನ, ಇಂಗ್ಲೆಂಡ್ ತಂಡವನ್ನು ಟೀಮ್ ಇಂಡಿಯಾ (Team India) ಬೌಲರ್‌ಗಳು 290 ಕ್ಕೆ ಆಲೌಟ್ ಮಾಡಿದರು. ಆದಾಗ್ಯೂ, ಆತಿಥೇಯರು 99 ರನ್ ಗಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ ಕೇವಲ 191 ರನ್ ಗಳಿಗೆ ಆಲೌಟ್ ಆಗಿದ್ದ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದಿದೆ. ಇದೀಗ ಮೂರನೇ ದಿನದಾಟ ನಡೆಯುತ್ತಿದ್ದು, ಇನ್ನೂ ಎರಡು ದಿನದಾಟಗಳು ಬಾಕಿ ಉಳಿದಿವೆ. ಹೀಗಾಗಿ ಪಂದ್ಯ ಗೆಲ್ಲಲು ಭಾರತೀಯ ಬ್ಯಾಟ್ಸ್ಮನ್ಗಳು ಕ್ರೀಸ್ ಕಚ್ಚಿ ನಿಲ್ಲುವುದು ಅನಿವಾರ್ಯ.
ಏಕೆಂದರೆ ಓವಲ್ ಮೈದಾನದಲ್ಲಿ ನಾಲ್ಕನೇ ಇನಿಂಗ್ಸ್ನಲ್ಲಿ ಅತ್ಯುತ್ತಮವಾಗಿ ರನ್ಗಳಿಸಲು ಸಾಧ್ಯವಾಗುತ್ತದೆ. ಹೀಗಾಗಿ ಭಾರತ ಕಡಿಮೆ ಮೊತ್ತಗಳಿಸಿದರೆ ಗೆಲುವು ಇಂಗ್ಲೆಂಡ್ ಪಾಲಾಗುವುದು ಬಹುತೇಕ ಖಚಿತ. ಏಕೆಂದರೆ ಇದೇ ಮೈದಾನದಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಭಾರತದ ಹೆಸರಿನಲ್ಲಿದೆ. 1979 ರಲ್ಲಿ ಭಾರತ ತಂಡವು ಈ ಮೈದಾನದಲ್ಲಿ 8 ವಿಕೆಟ್ ನಷ್ಟಕ್ಕೆ 429 ರನ್ ಗಳಿಸುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಈ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ ನಾಲ್ಕನೇ ಇನ್ನಿಂಗ್ಸ್ ನಲ್ಲಿ 221 ರನ್ಗಳ ಮ್ಯಾರಥಾನ್ ಇನ್ನಿಂಗ್ಸ್ ಆಡಿದರು. ಇದಲ್ಲದೇ, 1947 ರಲ್ಲಿ ದಕ್ಷಿಣ ಆಫ್ರಿಕಾ ಕೂಡ ಈ ಮೈದಾನದಲ್ಲಿ ಏಳು ವಿಕೆಟ್ ನಷ್ಟದಲ್ಲಿ 423 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು.
ಇನ್ನು ಇಂಗ್ಲೆಂಡ್ ತಂಡವು ಈ ಮೈದಾನದಲ್ಲಿ ಎರಡು ಬಾರಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 300 ಕ್ಕಿಂತ ಹೆಚ್ಚು ಸ್ಕೋರ್ ಮಾಡುವ ಮೂಲಕ ಪಂದ್ಯವನ್ನು ಉಳಿಸಿಕೊಂಡಿದೆ. 2007 ರಲ್ಲಿ, ರಾಹುಲ್ ದ್ರಾವಿಡ್ ನೇತೃತ್ವದ ಟೀಮ್ ಇಂಡಿಯಾ ವಿರುದ್ಧ, ಇಂಗ್ಲೆಂಡ್ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಆರು ವಿಕೆಟ್ ನಷ್ಟಕ್ಕೆ 369 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಇದಲ್ಲದೇ, 1965 ರಲ್ಲಿ, ಇಂಗ್ಲೆಂಡ್ ತಂಡವು ನಾಲ್ಕನೇ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕು ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿ ಫಲಿತಾಂಶವನ್ನು ಡ್ರಾನಲ್ಲಿ ಅಂತ್ಯಗೊಳಿಸಿದ್ದರು.
ಹೀಗಾಗಿ ಮೂರನೇ ದಿನದಾಟದಲ್ಲಿ ಭಾರತವು ಸಂಪೂರ್ಣ ಬ್ಯಾಟ್ ಮಾಡಬೇಕಿದೆ. ಅಲ್ಲದೆ ನಾಲ್ಕನೇ ದಿನದಾಟವನ್ನೂ ಆಡಿ 400ಕ್ಕೂ ಅಧಿಕ ಮೊತ್ತ ಪೇರಿಸಬೇಕಿದೆ. 400ಕ್ಕೂ ಅಧಿಕ ಮೊತ್ತ ಬಾರಿಸಿದರೆ ಮಾತ್ರ ಇಂಗ್ಲೆಂಡ್ ತಂಡಕ್ಕೆ ಕನಿಷ್ಠ 300 ರನ್ಗಳ ಟಾರ್ಗೆಟ್ ನೀಡಬಹುದು. ಏಕೆಂದರೆ ಇಂಗ್ಲೆಂಡ್ ತಂಡವು ಈಗಾಗಲೇ 99 ರನ್ಗಳ ಮುನ್ನಡೆ ಪಡೆದುಕೊಂಡಿದೆ.
ಇನ್ನು ನಾಲ್ಕನೇ ದಿನದಾಟದ ಅಂತ್ಯದಲ್ಲಿ ಭಾರತ ಡಿಕ್ಲೇರ್ ಮಾಡಿಕೊಳ್ಳುವುದು ಉತ್ತಮ. ಒಂದು ವೇಳೆ ನಾಲ್ಕನೇ ದಿನದಾಟದೊಳಗೆ ಟೀಮ್ ಇಂಡಿಯಾ ಆಲೌಟ್ ಆಗಿ 300 ರನ್ಗಳ ಅಸುಪಾಸಿನಲ್ಲಿ ಟಾರ್ಗೆಟ್ ನೀಡಿದರೆ ಇಂಗ್ಲೆಂಡ್ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚಿರಲಿದೆ. ಏಕೆಂದರೆ ಮೊದಲ ಇನಿಂಗ್ಸ್ನಲ್ಲಿ ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯದ ಹೊರತಾಗಿಯೂ ಇಂಗ್ಲೆಂಡ್ ತಂಡ 290 ರನ್ ಪೇರಿಸಿತ್ತು. ಹೀಗಾಗಿ ನಾಲ್ಕನೇ ದಿನದಾಟ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಲಿದೆ. ಈ ಹಿಂದಿನ ಅಂಕಿ ಅಂಶಗಳು ಕೂಡ ಓವಲ್ ಪಿಚ್ ನಾಲ್ಕನೇ ಇನಿಂಗ್ಸ್ ವೇಳೆಗೆ ಬ್ಯಾಟಿಂಗ್ಗೆ ಹೆಚ್ಚು ಸಹಕಾರಿ ಎಂಬುದನ್ನು ಸಾರುತ್ತದೆ. ಹೀಗಾಗಿ ಭಾರತ-ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಯಾರ ಹಿಡಿತದಲ್ಲಿರುತ್ತದೆ ಎಂಬುದು ಇಡೀ ಪಂದ್ಯದ ಫಲಿತಾಂಶವನ್ನು ನಿರ್ಧರಿಸುತ್ತದೆ ಎನ್ನಬಹುದು.
ಇದನ್ನೂ ಓದಿ: T20 World Cup 2021: ನಮಗಲ್ಲ, ಭಾರತಕ್ಕೆ ಟೆನ್ಶನ್ ಜಾಸ್ತಿ ಎಂದ ಪಾಕ್ ನಾಯಕ
ಇದನ್ನೂ ಓದಿ: ಅತ್ಯುತ್ತಮ ಮೈಲೇಜ್ ನೀಡುವ ಅತೀ ಕಡಿಮೆ ಬೆಲೆಯ ಸ್ಕೂಟರ್ ಬಿಡುಗಡೆ
ಇದನ್ನೂ ಓದಿ: Crime News: ಸಿಂಧೂರ ಹಚ್ಚಿದಕ್ಕೆ ಮಗಳನ್ನು ಕೊಂದ ತಾಯಿ
(India will need at least 300 runs lead to win, know fourth innings record at Oval)
Published On - 4:41 pm, Sat, 4 September 21
