ICC Under 19 Womens T20 World Cup 2023: ಸೌತ್ ಆಫ್ರಿಕಾದ ಸೆನ್ವೆಸ್ ಪಾರ್ಕ್ ಕ್ರಿಕೆಟ್ ಮೈದಾನದಲ್ಲಿ ನಡೆದ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು ಫೈನಲ್ ಪ್ರವೇಶಿಸಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ಗಳಿಂದ ಜಯಭೇರಿ ಬಾರಿಸಿ ಅಂತಿಮ ಘಟ್ಟ ತಲುಪಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಅಂಡರ್ 19 ತಂಡದ ನಾಯಕಿ ಶಫಾಲಿ ವರ್ಮಾ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
2ನೇ ಓವರ್ನಲ್ಲಿ ಟೀಮ್ ಇಂಡಿಯಾಗೆ ಮನ್ನತ್ ಕಶ್ಯತ್ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಟಿಟಾಸ್ ಸಧು ಎಸೆತದಲ್ಲಿ ಎಮ್ಮಾ ಮೆಕ್ಲಿಯೊಡ್ ಎಲ್ಬಿಡಬ್ಲ್ಯೂ ಆದರು. ಈ ಹಂತದಲ್ಲಿ ಜೊತೆಯಾದ ಗೇಝ್ ಹಾಗೂ ಪ್ಲಿಂಮ್ಮರ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು.
ಈ ವೇಳೆ ದಾಳಿಗಿಳಿದ ಅರ್ಚನಾ ದೇವಿ ಪ್ಲಿಂಮ್ಮರ್ನ (35) ಔಟ್ ಮಾಡಿದರೆ, ಪರ್ಶವಿ ಚೋಪ್ರಾ ಗೇಝ್ (26) ವಿಕೆಟ್ ಪಡೆದರು. ಬ್ಯಾಕ್ ಟು ಬ್ಯಾಕ್ ಎರಡು ಪಡೆದ ಟೀಮ್ ಇಂಡಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಪರಿಣಾಮ ನ್ಯೂಜಿಲೆಂಡ್ ತಂಡದ ಮಧ್ಯಮ ಕ್ರಮಾಂಕವು ರನ್ಗಳಿಸಲು ಪರದಾಡಿತು.
ಇದನ್ನೂ ಓದಿ: ವಿದೇಶದಲ್ಲಿ ಪಂದ್ಯವಾಡುತ್ತಿದ್ದ ಆಟಗಾರನನ್ನು ಕ್ರೀಡಾ ಸಚಿವನಾಗಿ ಆಯ್ಕೆ ಮಾಡಿದ ಪಾಕ್ ಸರ್ಕಾರ
ಇತ್ತ ಕರಾರುವಾಕ್ ದಾಳಿ ಸಂಘಟಿಸಿದ ಟೀಮ್ ಇಂಡಿಯಾ ಆಟಗಾರ್ತಿಯರು 20 ಓವರ್ಗಳಲ್ಲಿ 9 ವಿಕೆಟ್ ಪಡೆದುಕೊಂಡು ನ್ಯೂಜಿಲೆಂಡ್ ತಂಡವನ್ನು ಕೇವಲ 107 ರನ್ಗಳಿಗೆ ನಿಯಂತ್ರಿಸಿದರು. ಟೀಮ್ ಇಂಡಿಯಾ ಪರ ಪರ್ಶವಿ ಚೋಪ್ರಾ 4 ಓವರ್ಗಳಲ್ಲಿ ಕೇವಲ 20 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು.
109 ರನ್ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ಶಫಾಲಿ ವರ್ಮಾ (10) ಬಿರುಸಿನ ಬ್ಯಾಟಿಂಗ್ಗೆ ಮುಂದಾಗಿ ಬೇಗನೆ ಔಟಾದರು. ಆದರೆ ಮತ್ತೊಂದೆಡೆ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಶ್ವೇತಾ ಸೆಹ್ರಾವತ್ 45 ಎಸೆತಗಳಲ್ಲಿ 10 ಫೋರ್ನೊಂದಿಗೆ ಅಜೇಯ 61 ರನ್ ಬಾರಿಸಿದರು. ಇನ್ನು ಸೌಮ್ಯ ತಿವಾರಿ 22 ರನ್ಗಳ ಉಪಯುಕ್ತ ಕಾಣಿಕೆ ನೀಡಿ ಔಟಾದರು. ಅದರಂತೆ ಟೀಮ್ ಇಂಡಿಯಾ 14.2 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 112 ರನ್ಗಳಿಸುವ ಮೂಲಕ 8 ವಿಕೆಟ್ಗಳ ಜಯ ಸಾಧಿಸಿತು.
ಈ ಗೆಲುವಿನೊಂದಿಗೆ ಭಾರತೀಯ ಅಂಡರ್ 19 ಮಹಿಳಾ ತಂಡವು ಫೈನಲ್ ಪ್ರವೇಶಿಸಿದೆ. 2ನೇ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದ್ದು, ಇದರಲ್ಲಿ ಗೆಲ್ಲುವ ತಂಡ ಜನವರಿ 29 ರಂದು ಭಾರತದ ವಿರುದ್ಧ ಫೈನಲ್ ಆಡಲಿದೆ.
Published On - 4:32 pm, Fri, 27 January 23