ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್: ಫೈನಲ್‌ನಲ್ಲಿ ಬಾಂಗ್ಲಾವನ್ನು ಮಣಿಸಿದ ಭಾರತಕ್ಕೆ ಚಾಂಪಿಯನ್ ಕಿರೀಟ

India Women Win Asia Cup Rising Stars Final: ಥೈಲ್ಯಾಂಡ್‌ನಲ್ಲಿ ನಡೆದ ವುಮೆನ್ಸ್ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಫೈನಲ್‌ನಲ್ಲಿ ಭಾರತ ಮಹಿಳಾ ತಂಡ ಬಾಂಗ್ಲಾದೇಶವನ್ನು ಸೋಲಿಸಿ ಚಾಂಪಿಯನ್ ಆಗಿದೆ. ತೇಜಲ್ ಹಸಬ್ನಿಸ್ (ಅಜೇಯ 51) ಹಾಗೂ ಪ್ರೇಮಾ ರಾವತ್ (3 ವಿಕೆಟ್) ಉತ್ತಮ ಪ್ರದರ್ಶನ ನೀಡಿದರು. ಭಾರತ 134 ರನ್ ಗಳಿಸಿ, ಬಾಂಗ್ಲಾದೇಶವನ್ನು 88 ರನ್‌ಗಳಿಗೆ ಕಟ್ಟಿಹಾಕಿ 46 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್: ಫೈನಲ್‌ನಲ್ಲಿ ಬಾಂಗ್ಲಾವನ್ನು ಮಣಿಸಿದ ಭಾರತಕ್ಕೆ ಚಾಂಪಿಯನ್ ಕಿರೀಟ
India Womens

Updated on: Feb 22, 2026 | 5:30 PM

ಥೈಲ್ಯಾಂಡ್‌ನ ಬ್ಯಾಂಕಾಕ್‌ನ ಟೆರ್ಡ್‌ಥೈ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ (Women Asia Cup Rising Stars) ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಭಾರತ (India vs Bangladesh) ಮಹಿಳಾ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ತೇಜಲ್ ಹಸಬ್ನಿಸ್ ಅವರ 34 ಎಸೆತಗಳಲ್ಲಿ ಅಜೇಯ 51 ರನ್‌ಗಳ ನೆರವಿನಿಂದ 134 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಎ ತಂಡ 19.1 ಓವರ್‌ಗಳಲ್ಲಿ 88 ರನ್‌ಗಳಿಗೆ ಆಲೌಟ್ ಆಗುವ ಮೂಲಕ 46 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಭಾರತದ ಪರ ಬೌಲಿಂಗ್​ನಲ್ಲಿ ಮಿಂಚಿದ ಪ್ರೇಮಾ ರಾವತ್ ತಮ್ಮ ನಾಲ್ಕು ಓವರ್‌ಗಳ ಖೋಟಾದಲ್ಲಿ ಕೇವಲ 12 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿದರು.

ರಾಧಾ- ತೇಜಲ್ ಜೊತೆಯಾಟ

ಬಾಂಗ್ಲಾದೇಶವು ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಫೈನಲ್​ಗೆ ಲಗ್ಗೆ ಇಟ್ಟಿತ್ತು. ಇತ್ತ ಪಂದ್ಯಾವಳಿಯ ಮೊದಲ ಸೆಮಿಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸುವ ಮೂಲಕ ಭಾರತ ಫೈನಲ್‌ಗೆ ಟಿಕೆಟ್ ಪಡೆದಿತ್ತು. ಫೈನಲ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಅಗ್ರ ನಾಲ್ಕು ಆಟಗಾರ್ತಿಯರು 50 ರನ್‌ಗಳ ಒಳಗೆ ಔಟಾದರು. ಆದಾಗ್ಯೂ, ನಾಯಕಿ ರಾಧಾ ಯಾದವ್ ಮತ್ತು ತೇಜಲ್ ಹಸಬ್ನಿಸ್ ನಡುವಿನ ಅರ್ಧಶತಕದ ಪಾಲುದಾರಿಕೆಯು ತಂಡದ ಸ್ಕೋರ್ ಅನ್ನು 100 ರ ಗಡಿ ದಾಟಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

ಕೊನೆಯವರೆಗೂ ಅಜೇಯರಾಗಿ ಉಳಿದ ತೇಜಲ್ ಹಸಬ್ನಿಸ್ 34 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಸೇರಿದಂತೆ 51 ರನ್ ಬಾರಿಸಿದರೆ, ರಾಧಾ ಯಾದವ್ 30 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 36 ರನ್ ಗಳಿಸಿದರು. ಈ ಇಬ್ಬರ ಇನ್ನಿಂಗ್ಸ್​ಗಳು ಭಾರತ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 134 ರನ್ ಗಳಿಸಲು ಸಹಾಯ ಮಾಡಿತು. ಇತ್ತ ಬಾಂಗ್ಲಾದೇಶ ಪರ ಫಾಹಿಮಾ ಖತುನ್ ನಾಲ್ಕು ಓವರ್​ಗಳಲ್ಲಿ 25 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು.

ಬಾಂಗ್ಲಾದೇಶಕ್ಕೆ 46 ರನ್‌ ಸೋಲು

ಫೈನಲ್‌ ಗೆಲ್ಲಲು 135 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 100 ರನ್‌ ಗಳಿಸಲು ಸಹ ವಿಫಲವಾಯಿತು. ಭಾರತದ ವಿರುದ್ಧದ ಅಂತಿಮ ಪಂದ್ಯದಲ್ಲಿ , ಬಾಂಗ್ಲಾದೇಶ ಕೇವಲ 88 ರನ್‌ಗಳಿಗೆ ಆಲೌಟ್ ಆಗಿ, 46 ರನ್‌ಗಳ ಸೋಲು ಕಂಡಿತು. ಆರಂಭಿಕ ಆಟಗಾರ್ತಿ ಶಮಿಮಾ ಸುಲ್ತಾನ 20 ರನ್‌ ಬಾರಿಸುವ ಮೂಲಕ ಬಾಂಗ್ಲಾದೇಶದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಸರ್ಮಿನ್ ಸುಲ್ತಾನ ಕೂಡ 18 ರನ್‌ ಬಾರಿಸಿದರು.

ಮಿಂಚಿದ ಭಾರತೀಯ ಬೌಲರ್‌ಗಳು

ಭಾರತದ ಪರ ಪ್ರೇಮಾ ರಾವತ್ ಅತ್ಯಂತ ಯಶಸ್ವಿ ಬೌಲರ್ ಆಗಿದ್ದು, 4 ಓವರ್‌ಗಳಲ್ಲಿ 12 ರನ್‌ಗಳಿಗೆ 3 ವಿಕೆಟ್ ಪಡೆದರೆ, ಸೋನಿಯಾ ಮೆಂಧಿಯಾ ಮತ್ತು ತನುಜಾ ಕನ್ವರ್ ತಲಾ 2 ವಿಕೆಟ್ ಪಡೆದರು. ಉಳಿದಂತೆ ನಾಯಕಿ ರಾಧಾ ಯಾದವ್ ಮತ್ತು ಸೈಮಾ ಠಾಕೂರ್ ತಲಾ 1 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:27 pm, Sun, 22 February 26