AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಹೋಗುತ್ತಾ ಭಾರತ? ಸ್ಪಷ್ಟ ಸಂದೇಶ ರವಾನಿಸಿದ ಅಮಿತ್​ ಶಾ

ICC Champions Trophy 2025: ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಇದೀಗ ಅಮಿತ್​ ಶಾ ನೀಡಿರುವ ಹೇಳಿಕೆಯಿಂದ, ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಹೋಗುತ್ತಾ ಭಾರತ? ಸ್ಪಷ್ಟ ಸಂದೇಶ ರವಾನಿಸಿದ ಅಮಿತ್​ ಶಾ
ಅಮಿತ್ ಶಾ
ಪೃಥ್ವಿಶಂಕರ
|

Updated on:Sep 09, 2024 | 4:31 PM

Share

ಮುಂದಿನ ವರ್ಷ ಅಂದರೆ 2025 ರಲ್ಲಿ ನಡೆಯಲ್ಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯವಹಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೇ. ಈ ಐಸಿಸಿ ಈವೆಂಟ್ ಅನ್ನು ಯಶಸ್ವಿಯಾಗಿ ನಡೆಸುವ ಸಲುವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗಾಗಲೇ ತಯಾರಿಯಲ್ಲಿ ತೊಡಗಿದೆ. ಆದರೆ, ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಬಗ್ಗೆ ಈ ಹಿಂದೆಯೇ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದ ಬಿಸಿಸಿಐ, ಭಾರತ ಸರ್ಕಾರ ಅನುಮತಿ ನೀಡಿದರೆ ಮಾತ್ರ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಾಗಿ ತಿಳಿಸಿತ್ತು. ಏತನ್ಮಧ್ಯೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಫೋಟಕ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಹೋಗುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಯಾವುದೇ ಮಾತುಕತೆಗೆ ಸಾಧ್ಯವಿಲ್ಲ

ವಾಸ್ತವವಾಗಿ ಕಳೆದ ಶುಕ್ರವಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ಚುನಾವಣೆಗೆ ಮೊದಲು ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯನ್ನು ಗೃಹ ಸಚಿವ ಅಮಿತ್​ ಶಾ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ಪಾಕಿಸ್ತಾನದ ಹೀನ ಕೃತ್ಯಗಳನ್ನು ಖಂಡಿಸಿದರು. ಇದರ ಜೊತೆಗೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಸುದಾರಿಸುವ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಭಯೋತ್ಪಾದನೆಯನ್ನು ಸಂಪೂರ್ಣವಾಗಿ ತೊಡೆದುಹಾಕುವವರೆಗೆ ನಾವು ಪಾಕಿಸ್ತಾನ ಸರ್ಕಾರದ ಜೊತೆ ಯಾವುದೇ ಮಾತುಕತೆಗೆ ಮುಂದಾಗುವುದಿಲ್ಲ. ಬದಲಿಗೆ, ಜಮ್ಮು ಮತ್ತು ಕಾಶ್ಮೀರದ ಯುವಕರ ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವರೊಂದಿಗೆ ಮಾತನಾಡಲು ನಾವು ಬಯಸುತ್ತೇವೆ ಎಂದರು.

ಎಲ್ಲವೂ ಸ್ಪಷ್ಟವಾಗಿದೆ

ಇದೀಗ ಅಮಿತ್​​ ಶಾ ಅವರ ಹೇಳಿಕೆಯನ್ನು ಚಾಂಪಿಯನ್ಸ್​ ಟ್ರೋಫಿಗೂ ಅನ್ವಯ ಮಾಡಲಾಗುತ್ತಿದ್ದು, ಭಾರತ ಸರ್ಕಾರ ಯಾವುದೇ ಸಂದರ್ಭದಲ್ಲೂ ಚಾಂಪಿಯನ್ಸ್ ಟ್ರೋಫಿ ಆಡಲು ಭಾರತೀಯ ಆಟಗಾರರನ್ನು ಅಲ್ಲಿಗೆ ಕಳುಹಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ಕೆಲ ಸಮಯದ ಹಿಂದೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೂಡ ಟೀಂ ಇಂಡಿಯಾವನ್ನು ಕಳುಹಿಸುವ ನಿರ್ಧಾರ ಸಂಪೂರ್ಣವಾಗಿ ಭಾರತ ಸರ್ಕಾರದ ಕೈಯಲ್ಲಿದೆ ಎಂದು ಹೇಳಿಕೆ ನೀಡಿದ್ದರು. ಹಾಗಾಗಿ ಅಮಿತ್ ಶಾ, ಪಾಕಿಸ್ತಾನದ ಬಗ್ಗೆ ಈ ರೀತಿಯ ಹೇಳಿಕೆ ನೀಡಿರುವುದನ್ನು ಗಮಿಸಿದರೆ ಭಾರತ ಸರ್ಕಾರ, ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂಬುದು ಖಚಿತವಾದಂತ್ತಾಗಿದೆ.

ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ?

ಅಮಿತ್ ಶಾ ಅವರ ಈ ಹೇಳಿಕೆಯ ಮುನ್ನವೇ, ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಬಿಸಿಸಿಐ ಈಗಾಗಲೇ ಐಸಿಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಟೀಂ ಇಂಡಿಯಾದ ಪಂದ್ಯಗಳನ್ನು ಶ್ರೀಲಂಕಾ ಅಥವಾ ದುಬೈನಲ್ಲಿ ನಡೆಸಬೇಕೆಂದು ಐಸಿಸಿ ಮುಂದೆ ಬಿಸಿಸಿಐ ಮನವಿ ಇಟ್ಟಿದೆ. ಆದರೆ, ಈ ಬಗ್ಗೆ ಐಸಿಸಿಯಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಾಸ್ತವವಾಗಿ 2023ರ ಏಷ್ಯಾಕಪ್‌ನ ಆತಿಥ್ಯ ಹಕ್ಕನ್ನು ಸಹ ಪಾಕಿಸ್ತಾನ ಪಡೆದುಕೊಂಡಿತ್ತು. ಆದರೆ ಆಗಲೂ ಬಿಸಿಸಿಐ ತಂಡವನ್ನು ಅಲ್ಲಿಗೆ ಕಳುಹಿಸಲು ನಿರಾಕರಿಸಿತ್ತು. ಇದರ ನಂತರ, ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಏಷ್ಯಾಕಪ್ ಅನ್ನು ಆಯೋಜಿಸಲಾಗಿತ್ತು. ಅದರಂತೆ ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಹಾಗೆಯೇ ಫೈನಲ್​ನಲ್ಲಿ ಶ್ರೀಲಂಕಾವನ್ನು ಮಣಿಸಿ ಚಾಂಪಿಯನ್ ಕೂಡ ಆಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:12 pm, Mon, 9 September 24