Praveen Kumar: ಭಾರತೀಯರೂ ಬಾಲ್ ಟ್ಯಾಂಪರಿಂಗ್ ಮಾಡ್ತಾರೆ: ಪ್ರವೀಣ್ ಕುಮಾರ್ ಶಾಕಿಂಗ್ ಹೇಳಿಕೆ
Praveen Kumar: 2008 ಮತ್ತು 2010 ರಲ್ಲಿ ಸ್ವಿಂಗ್ ಬೌಲಿಂಗ್ ಮೂಲಕ ಗಮನಾರ್ಹ ಪ್ರದರ್ಶನ ನೀಡಿದ್ದ ಪ್ರವೀಣ್ ಕುಮಾರ್ 2011 ರ ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಗಾಯದ ಕಾರಣದಿಂದಾಗಿ ಅವರಿಗೆ ವಿಶ್ವಕಪ್ ಆಡಲು ಸಾಧ್ಯವಾಗಿರಲಿಲ್ಲ.
ಬಾಲ್ ಟ್ಯಾಂಪರಿಂಗ್ ಕುರಿತು ಟೀಮ್ ಇಂಡಿಯಾ (Team India) ಮಾಜಿ ವೇಗಿ ಪ್ರವೀಣ್ ಕುಮಾರ್ (Praveen Kumar) ನೀಡಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಭಾರತ ಸೇರಿದಂತೆ ಎಲ್ಲಾ ತಂಡಗಳ ಬೌಲರ್ಗಳು ಚೆಂಡನ್ನು ವಿರೂಪಗೊಳಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ 2018 ರ ಸೌತ್ ಆಫ್ರಿಕಾ ಪ್ರವಾಸದ ಸಮಯದಲ್ಲಿ ಚೆಂಡು ವಿರೂಪಗೊಳಿಸಿದ್ದರು. ಈ ಮೋಸದಾಟದ ಬೆಳಕಿಗೆ ಬರುತ್ತಿದ್ದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಇಬ್ಬರನ್ನು 12 ತಿಂಗಳ ಕಾಲ ಕ್ರಿಕೆಟ್ನಿಂದ ನಿಷೇಧಿಸಿದ್ದರು.
ಇದೀಗ ಕ್ರಿಕೆಟ್ ಅಂಗಳದಲ್ಲಿ ಬಾಲ್ ಟ್ಯಾಂಪರಿಂಗ್ ಸಾಮಾನ್ಯ ವಿಷಯ ಎಂದು ಪ್ರವೀಣ್ ಕುಮಾರ್ ಹೇಳಿದ್ದಾರೆ. ಭಾರತೀಯ ಬೌಲರ್ಗಳು ಸೇರಿದಂತೆ ಎಲ್ಲರೂ ಚೆಂಡನ್ನು ವಿರೂಪಗೊಳಿಸಿ ಸ್ವಿಂಗ್ ತಂತ್ರಗಳನ್ನು ಪ್ರಯೋಗಿಸುತ್ತಾರೆ ಎಂದಿದ್ದಾರೆ.
ಖಾಸಗಿ ಚಾನೆಲ್ವೊಂದರ ಸಂದರ್ಶನದಲ್ಲಿ ಮಾತನಾಡಿದ ಪ್ರವೀಣ್ ಕುಮಾರ್, ಬಾಲ್ ಟ್ಯಾಂಪರಿಂಗ್ ಎಲ್ಲಾ ತಂಡಗಳು ಸ್ಪಲ್ಪ ಮಟ್ಟಿಗೆ ಮಾಡುತ್ತಾರೆ. ಇದನ್ನು ಪಾಕಿಸ್ತಾನ್ ಬೌಲರ್ಗಳು ಹೆಚ್ಚು ಮಾಡುತ್ತಿದ್ದರು. ಬಾಲ್ ಟ್ಯಾಂಪರಿಂಗ್ ಮಾಡಿದರೂ, ಆ ಕೌಶಲ್ಯವನ್ನು ಹೇಗೆ ಬಳಸಬೇಕೆಂದು ತಿಳಿದಿರಬೇಕು. ನಾನು ಚೆಂಡನ್ನು ಸ್ಕ್ರಾಚ್ ಮಾಡಿ ಯಾರಿಗಾದರೂ ಕೊಟ್ಟರೆ, ಅದನ್ನು ರಿವರ್ಸ್-ಸ್ವಿಂಗ್ ಮಾಡುವ ಕೌಶಲ್ಯವನ್ನು ಹೊಂದಿರಬೇಕಾಗುತ್ತದೆ ಎಂದು ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಇದೀಗ ಬಾಲ್ ಟ್ಯಾಂಪರಿಂಗ್ ಕುರಿತಾಗಿ ಪ್ರವೀಣ್ ಕುಮಾರ್ ನೀಡಿರುವ ಹೇಳಿಕೆಯು ಚರ್ಚೆಗೆ ಕಾರಣವಾಗಿದ್ದು, ಮತ್ತೊಮ್ಮೆ ಚೆಂಡು ವಿರೂಪದ ವಿಷಯಗಳು ಮುನ್ನಲೆಗೆ ಬಂದಿದೆ. ಹೀಗಾಗಿ ಈ ವಿಚಾರವನ್ನು ಐಸಿಸಿ ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ.
ಪ್ರವೀಣ್ ಕುಮಾರ್ ವೃತ್ತಿಜೀವನ:
ಟೀಮ್ ಇಂಡಿಯಾ ಪರ 2007 ರಲ್ಲಿ ಪಾದಾರ್ಪಣೆ ಮಾಡಿದ್ದ ಪ್ರವೀಣ್ ಕುಮಾರ್ 68 ಏಕದಿನ, 10 ಟಿ20 ಮತ್ತು 6 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕ್ರಮವಾಗಿ 77, 8 ಮತ್ತು 27 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ.
ಇದನ್ನೂ ಓದಿ: Team India: ಪ್ರತಿಷ್ಠಿತ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಬಿಗ್ ಶಾಕ್..!
2008 ಮತ್ತು 2010 ರಲ್ಲಿ ಸ್ವಿಂಗ್ ಬೌಲಿಂಗ್ ಮೂಲಕ ಗಮನಾರ್ಹ ಪ್ರದರ್ಶನ ನೀಡಿದ್ದ ಪ್ರವೀಣ್ ಕುಮಾರ್ 2011 ರ ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಗಾಯದ ಕಾರಣದಿಂದಾಗಿ ಅವರಿಗೆ ವಿಶ್ವಕಪ್ ಆಡಲು ಸಾಧ್ಯವಾಗಿರಲಿಲ್ಲ. ಅಲ್ಲದೆ 2012 ರಲ್ಲಿ ಕೊನೆಯ ಬಾರಿ ಟೀಮ್ ಇಂಡಿಯಾ ಪರ ಕಾಣಿಸಿಕೊಂಡಿದ್ದ ಪ್ರವೀಣ್ ಕುಮಾರ್ 2018 ರಲ್ಲಿ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು.