Pratika Rawal: 40,76,18,89,67,154..! ಟೀಂ ಇಂಡಿಯಾದಲ್ಲಿ ಅಂಪೈರ್​ ಮಗಳದ್ದೇ ಕಾರುಬಾರು

|

Updated on: Jan 15, 2025 | 3:23 PM

Pratika Rawal's Century: ಭಾರತ ಮಹಿಳಾ ಕ್ರಿಕೆಟ್ ತಂಡದ ಯುವ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಅವರು ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 154 ರನ್‌ಗಳ ಚೊಚ್ಚಲ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇದಲ್ಲದೆ ಅವರು ಸ್ಮೃತಿ ಮಂಧಾನರೊಂದಿಗೆ 233 ರನ್‌ಗಳ ದಾಖಲೆಯ ಜೊತೆಯಾಟವನ್ನು ಮಾಡಿದರು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದಲೂ ಅವರ ಪ್ರದರ್ಶನ ಗಮನ ಸೆಳೆದಿದ್ದು ತಮ್ಮ ಆರಂಭಿಕ ಕೆರಿಯರ್‌ನಲ್ಲೇ ಪ್ರತೀಕಾ ಅವರ ಪ್ರತಿಭೆ ಅದ್ಭುತವಾಗಿದೆ.

Pratika Rawal: 40,76,18,89,67,154..! ಟೀಂ ಇಂಡಿಯಾದಲ್ಲಿ ಅಂಪೈರ್​ ಮಗಳದ್ದೇ ಕಾರುಬಾರು
ಪ್ರತೀಕಾ ರಾವಲ್
Follow us on

ಪ್ರತೀಕಾ ರಾವಲ್.. ಪ್ರಸ್ತುತ ಭಾರತ ಮಹಿಳಾ ಏಕದಿನ ತಂಡದಲ್ಲಿ ತನ್ನ ಆಟದ ಮೂಲಕವೇ ವಿಶ್ವ ಕ್ರಿಕೆಟ್​ನ ತನ್ನತ್ತ ಸೆಳೆಯುತ್ತಿರುವ ಹೆಸರು. ತಿಂಗಳ ಹಿಂದೆ ಭಾರತದ ಪರ ಏಕದಿನ ಕ್ರಿಕೆಟ್​ಗೆ​ ಕಾಲಿಟ್ಟಿದ್ದ ಈ ಯುವ ಬ್ಯಾಟರ್ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಶೆಫಾಲಿ ವರ್ಮಾ ಅವರ ಅನುಪಸ್ಥಿತಿಯಲ್ಲಿ ಸ್ಮೃತಿ ಮಂಧಾನ ಜೊತೆ ಇನ್ನಿಂಗ್ಸ್ ಆರಂಭಿಸುವ ಜವಬ್ದಾರಿ ಹೊತ್ತಿರುವ ಪ್ರತೀಕಾ, ತಮ್ಮ ಭರವಸೆಯ ಆಟದ ಮೂಲಕ ಶೆಫಾಲಿ ವರ್ಮಾರ ಸ್ಥಾನವನ್ನು ಅಲುಗಾಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಪ್ರತೀಕಾ, ಇದೀಗ ನಡೆಯುತ್ತಿರುವ ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರನ್​ಗಳ ಶಿಖರ ಕಟ್ಟಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದಲ್ಲದೆ ಅದನ್ನು 154 ರನ್​ಗಳ ಬೃಹತ್ ಮೊತ್ತವಾಗಿ ಪರಿವರ್ತಿಸಿದ್ದಾರೆ.

233 ರನ್​ಗಳ ಜೊತೆಯಾಟ

ಈ ಪಂದ್ಯದಲ್ಲಿ ಪ್ರತೀಕಾ ಹೊರತಾಗಿ ಸ್ಮೃತಿ ಮಂಧಾನ ಕೂಡ ಶತಕ ಬಾರಿಸಿದರು. ಅಲ್ಲದೆ ಈ ಇಬ್ಬರು ಮುರಿಯದ ವಿಕೆಟ್​ಗೆ ಬರೋಬ್ಬರಿ 233 ರನ್​ಗಳ ಜೊತೆಯಾಟ ನೀಡಿದರು. ಇದು ಈ ಇಬ್ಬರ ನಡುವಿನ ಅತಿದೊಡ್ಡ ಆರಂಭಿಕ ಪಾಲುದಾರಿಕೆಯಾಗಿದೆ. ಈ ವೇಳೆಗೆ ಸ್ಮೃತಿ ಮಂಧಾನ 80 ಎಸೆತಗಳಲ್ಲಿ 12 ಬೌಂಡರಿ ಹಾಗೂ 7 ಸಿಕ್ಸರ್​ಗಳ ಸಹಿತ 135 ರನ್ ಬಾರಿಸುವುದರೊಂದಿಗೆ ಏಕದಿನದಲ್ಲಿ ಅತೀ ವೇಗದ ಶತಕ ಸಿಡಿಸಿದ ದಾಖಲೆ ನಿರ್ಮಿಸಿದರೆ, ಕೊನೆಯ ಹಂತದವರೆಗೂ ಬ್ಯಾಟಿಂಗ್ ಮಾಡಿದ ಪ್ರತೀಕಾ 129 ಎಸೆತಗಳಲ್ಲಿ 20 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 154 ರನ್ ಸಿಡಿಸಿ ಔಟಾದರು.

6 ಇನ್ನಿಂಗ್ಸ್‌ಗಳಲ್ಲಿ ಗಮನಾರ್ಹ ಪ್ರದರ್ಶನ

ಪ್ರತೀಕಾ ರಾವಲ್ ವೆಸ್ಟ್ ಇಂಡೀಸ್ ವಿರುದ್ಧ ಸ್ವದೇಶಿ ಏಕದಿನ ಸರಣಿಯಲ್ಲಿ ಪಾದಾರ್ಪಣೆ ಮಾಡಿದರು. ಅಂದಿನಿಂದ ಅವರು ನಿರಂತರವಾಗಿ ಸ್ಮೃತಿ ಮಂಧಾನ ಅವರೊಂದಿಗೆ ಭಾರತದ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಇಲ್ಲಿಯವರೆಗೆ ಇಬ್ಬರೂ 6 ಏಕದಿನ ಇನ್ನಿಂಗ್ಸ್‌ಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದು, 5 ಇನ್ನಿಂಗ್ಸ್​ಗಳಲ್ಲಿ ಐವತ್ತು ಪ್ಲಸ್ ರನ್‌ಗಳ ಜೊತೆಯಾಟವನ್ನಾಡಿದ್ದಾರೆ. ಈ ಪೈಕಿ 1ರಲ್ಲಿ ದ್ವಿಶತಕದ ಜೊತೆಯಾಟವಿದ್ದರೆ, ಉಳಿದ ಮೂರು ಪಂದ್ಯಗಳಲ್ಲಿ ಶತಕದ ಜೊತೆಯಾಟವಿತ್ತು. ಒಂದು ಪಂದ್ಯದಲ್ಲಿ ಇಬ್ಬರೂ ಸೇರಿ 70 ರನ್ ಸೇರಿಸಿದ್ದರು.

ಪ್ರತೀಕಾ-ಸ್ಮೃತಿ ಜುಗಲ್​ಬಂಧಿ

ಪ್ರತೀಕಾ ರಾವಲ್ ಮತ್ತು ಸ್ಮೃತಿ ಮಂಧಾನ ವೆಸ್ಟ್ ಇಂಡೀಸ್ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ 110, 110 ಮತ್ತು 22 ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಮಾಡಿದ್ದರು. ಇದೀಗ ಐರ್ಲೆಂಡ್ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ 70, 156 ಮತ್ತು 233 ರನ್‌ಗಳ ಜೊತೆಯಾಟವನ್ನಾಡಿ ತಂಡಕ್ಕೆ ಭರವಸೆ ಮೂಡಿಸಿದ್ದಾರೆ. ಇದಲ್ಲದೆ ಪ್ರತೀಕಾ ವೈಯಕ್ತಿಕವಾಗಿಯೂ ಅದ್ಭುತ ಪ್ರದರ್ಶನ ತೋರಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಕ್ರಮವಾಗಿ 40,76,18 ರನ್ ಕಲೆಹಾಕಿದ್ದರೆ, ಇದೀಗ ಐರ್ಲೆಂಡ್ ವಿರುದ್ಧ ಕ್ರಮವಾಗಿ 89,67,154 ರನ್​ಗಳ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

ಪ್ರತೀಕಾ ರಾವಲ್ ತಂದೆ ಅಂಪೈರ್

ಇನ್ನು ಪ್ರತೀಕಾ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ, ಅವರು ದೆಹಲಿ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಅವರ ತಂದೆ ಪ್ರದೀಪ್ ರಾವಲ್ ಬಿಸಿಸಿಐನಿಂದ ಅನುಮೋದಿಸಲ್ಪಟ್ಟ ಲೆವೆಲ್ 2 ಅಂಪೈರ್. ಬಾಲ್ಯದಲ್ಲಿ ಬಾಸ್ಕೆಟ್‌ಬಾಲ್‌ ಕಡೆಗೆ ಒಲವು ತೋರಿದ್ದ ಪ್ರತೀಕಾ ಭಾರತ ಕ್ರಿಕೆಟ್‌ಗೆ ಕಾಲಿಟ್ಟ ಕೂಡಲೇ ವಿಶ್ವ ಕ್ರಿಕೆಟ್‌ನಲ್ಲಿ ನಡುಕ ಹುಟ್ಟಿಸಿದ್ದಾರೆ. ಇದೇ ಟ್ರೆಂಡ್‌ ಮುಂದುವರಿದರೆ ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ಎದುರಾಳಿಗಳಿಗೆ ತಲೆನೋವಾಗಿ ಕಾಡಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:20 pm, Wed, 15 January 25