
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಜೂನ್ 20 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಲೀಡ್ಸ್‌ನಲ್ಲಿ (Leeds Test) ನಡೆಯಲಿದ್ದು, ಟೀಂ ಇಂಡಿಯಾ (Team India) ಪಾಲಿಗೆ ಈ ಪಂದ್ಯ ಅತಿ ಮುಖ್ಯವಾಗಿದೆ. ಏಕೆಂದರೆ ಟೀಂ ಇಂಡಿಯಾ ಕಳೆದ ಬಾರಿಯ ಪ್ರವಾಸದಲ್ಲಿ ಅಂದರೆ 2021 ರಲ್ಲಿ ಇದೇ ಮೈದಾನದಲ್ಲಿ ಪಂದ್ಯವನ್ನಾಡಿತ್ತು. ಆದರೆ ಈ ಪಂದ್ಯದಲ್ಲಿ ಇನ್ನಿಂಗ್ಸ್ ಸೋಲು ಅನುಭವಿಸಿತ್ತು. ಹೀಗಾಗಿ ಕಳೆದ ಬಾರಿಯ ಹೀನಾಯ ಸೋಲನ್ನು ಮರೆತು ಗಿಲ್ ಪಡೆ ಕಣಕ್ಕಿಳಿಬೇಕಿದೆ. ಆದಾಗ್ಯೂ ಯುವ ಆಟಗಾರರೇ ತುಂಬಿರುವ ಟೀಂ ಇಂಡಿಯಾ ಲೀಡ್ಸ್ ಟೆಸ್ಟ್ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾ ಎಂಬುದೇ ಪ್ರಶ್ನೆ. ಏಕೆಂದರೆ ಲೀಡ್ಸ್‌ನಲ್ಲಿ ಟೀಂ ಇಂಡಿಯಾ ಕೊನೆಯ ಬಾರಿಗೆ ಆಡಿದಾಗ ತಂಡದಲ್ಲಿದ್ದ 6 ಲೆಜೆಂಡರಿ ಆಟಗಾರರು ಈಗ ತಂಡದಲಿಲ್ಲ.
ಕಳೆದ ಬಾರಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರಂತಹ ಬ್ಯಾಟ್ಸ್‌ಮನ್‌ಗಳು ಲೀಡ್ಸ್ ಟೆಸ್ಟ್‌ನಲ್ಲಿ ಆಡಿದ್ದರು. ಆದರೆ ಈ ಬಾರಿ ಈ ನಾಲ್ವರು ಶ್ರೇಷ್ಠ ಆಟಗಾರರು ತಂಡದಲ್ಲಿಲ್ಲ. ಪೂಜಾರ, ರಹಾನೆಗೆ ಬಹಳ ಸಮಯದಿಂದ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಇತ್ತ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಮೊದಲೇ ಟೆಸ್ಟ್ಗೆ ನಿವೃತ್ತ ಘೋಷಿಸಿದರು. ಕೊನೆಯ ಬಾರಿಗೆ ರೋಹಿತ್ ಮತ್ತು ವಿರಾಟ್ ಲೀಡ್ಸ್ ಟೆಸ್ಟ್‌ನಲ್ಲಿ ಆಡಿದಾಗ ಇಬ್ಬರ ಪ್ರದರ್ಶನವೇನು ಹೇಳಿಕೊಳ್ಳುವಂತಿರಲಿಲ್ಲ. ರೋಹಿತ್ ಶರ್ಮಾ 105 ಎಸೆತಗಳನ್ನು ಎದುರಿಸಿ ಮೊದಲ ಇನ್ನಿಂಗ್ಸ್‌ನಲ್ಲಿ 19 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 59 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 7 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 55 ರನ್ ಗಳಿಸಿ ಔಟಾಗಿದ್ದರು.
IND vs ENG: ಪಟೌಡಿ ಟ್ರೋಫಿ ಹೆಸರು ಬದಲಾವಣೆ; ಮೊದಲ ಬಾರಿಗೆ ಮೌನ ಮುರಿದ ಸಚಿನ್ ತೆಂಡೂಲ್ಕರ್
ಇನ್ನು ಬೌಲರ್ಗಳ ಬಗ್ಗೆ ಹೇಳುವುದಾದರೆ.. ಕಳೆದ ಲೀಡ್ಸ್ ಟೆಸ್ಟ್‌ನಲ್ಲಿ ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಅವರಂತಹ ಇಬ್ಬರು ಅತ್ಯುತ್ತಮ ಬೌಲರ್‌ಗಳು ತಂಡದಲ್ಲಿ ಆಡಿದ್ದರು. ಆದರೀಗ ಇಬ್ಬರೂ ಟೀಂ ಇಂಡಿಯಾದಿಂದ ಹೊರಗಿದ್ದಾರೆ. ಇಶಾಂತ್ ಶರ್ಮಾ ಬಹಳ ಸಮಯದಿಂದ ಟೀಂ ಇಂಡಿಯಾದಿಂದ ಹೊರಗಿದ್ದರೆ, ಮೊಹಮ್ಮದ್ ಶಮಿ ಕಳಪೆ ಫಿಟ್‌ನೆಸ್‌ನಿಂದ ತಂಡದಿಂದ ಹೊರಗಿದ್ದಾರೆ.
ಈಗ ಇಲ್ಲಿರುವ ಪ್ರಶ್ನೆಯೆಂದರೆ, ಈ 6 ದೈತ್ಯ ಆಟಗಾರರಿಲ್ಲದೆ ಟೀಂ ಇಂಡಿಯಾ ಲೀಡ್ಸ್‌ನಲ್ಲಿ ಹೇಗೆ ಆಡುತ್ತದೆ ಎಂಬುದು. ಅಂದಹಾಗೆ, ಟೀಂ ಇಂಡಿಯಾದಲ್ಲಿ ಪ್ರತಿಭೆಯ ಕೊರತೆಯಿಲ್ಲ. ನಾಯಕ ಶುಭ್ಮನ್ ಗಿಲ್ ಈಗ ವಿರಾಟ್ ಕೊಹ್ಲಿ ಸ್ಥಾನದಲ್ಲಿ ಆಡಲಿದ್ದಾರೆ. ಮತ್ತೊಂದೆಡೆ, ಕೆಎಲ್ ರಾಹುಲ್ ಮತ್ತು ಜೈಸ್ವಾಲ್ ಇಬ್ಬರೂ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಬುಮ್ರಾ, ಸಿರಾಜ್ ಹೊರತುಪಡಿಸಿ, ಬೌಲಿಂಗ್ ಜವಾಬ್ದಾರಿ ಪ್ರಸಿದ್ಧ್ ಕೃಷ್ಣ ಮತ್ತು ಶಾರ್ದೂಲ್ ಠಾಕೂರ್ ಅವರ ಕೈಯಲ್ಲಿರುತ್ತದೆ. ಒಟ್ಟಾರೆಯಾಗಿ, ತಂಡ ಇನ್ನೂ ಬಲಿಷ್ಠವಾಗಿದೆಯಾದರೂ ಅನುಭವದ ಕೊರತೆಯಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ