
T20 World Cup 2026: ಟಿ20 ವಿಶ್ವಕಪ್ನ 48ನೇ ಪಂದ್ಯದಲ್ಲಿ ಭಾರತ ಮತ್ತು ಝಿಂಬಾಬ್ವೆ ತಂಡಗಳು ಮುಖಾಮುಖಿಯಾಗಲಿದೆ. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಈ ಮ್ಯಾಚ್ನಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತಂಡ ತನ್ನ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಬಹುದು. ಅದರಲ್ಲೂ ನೆಟ್ ರನ್ ರೇಟ್ ಹೆಚ್ಚಿಸಿಕೊಂಡರೆ ಮಾತ್ರ ಟೀಮ್ ಇಂಡಿಯಾದ ಸೆಮಿಫೈನಲ್ ಲೆಕ್ಕಾಚಾರ ಸರಳವಾಗಲಿದೆ. ಹಾಗಿದ್ರೆ ಝಿಂಬಾಬ್ವೆ ವಿರುದ್ಧ ಭಾರತ ತಂಡ ಎಷ್ಟು ರನ್ಗಳ ಅಂತರದಿಂದ ಗೆದ್ದರೆ ನೆಟ್ ರನ್ ರೇಟ್ ಪಾಸಿಟಿವ್ (+0.000 ಕ್ಕಿಂತ ಹೆಚ್ಚು) ಮಾಡಿಕೊಳ್ಳಬಹುದು ಎಂದು ನೋಡುವುದಾದರೆ…
ಅಂದರೆ ಮೊದಲು ಬ್ಯಾಟ್ ಮಾಡಿದರೆ ಕನಿಷ್ಠ 77 ರನ್ಗಳ ಜಯ ಸಾಧಿಸಿದರೆ ಮಾತ್ರ ಟೀಮ್ ಇಂಡಿಯಾದ ನೆಟ್ ರನ್ ರೇಟ್ +0.000 ಕ್ಕಿಂತ ಹೆಚ್ಚು ಆಗಲಿದೆ. ಇನ್ನು ಚೇಸಿಂಗ್ ಮಾಡಿದರೆ ಅತೀ ಕಡಿಮೆ ಎಸೆತಗಳಲ್ಲಿ ಗುರಿ ಬೆನ್ನತ್ತಿದರೆ ಮಾತ್ರ ಪಾಸಿಟಿವ್ ನೆಟ್ ರನ್ ರೇಟ್ ಪಡೆದುಕೊಳ್ಳಬಹುದು.
ಹೀಗಾಗಿ ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುವುದು ಅನಿವಾರ್ಯ. ಏಕೆಂದರೆ ಬೃಹತ್ ಮೊತ್ತ ಪೇರಿಸಿದರೆ ಮಾತ್ರ 77 ರನ್ಗಳ ಅಂತರದಿಂದ ಗೆಲ್ಲಲು ಸಾಧ್ಯ. ಇನ್ನು ಅತೀ ಕಡಿಮೆ ಓವರ್ಗಳಲ್ಲಿ ಗುರಿ ತಲುಪಿದರೆ ಮಾತ್ರ +0.000 ಕ್ಕಿಂತ ಹೆಚ್ಚಿ ನೆಟ್ ರನ್ ರೇಟ್ ಪಡೆದುಕೊಳ್ಳಬಹುದು. ಹೀಗಾಗಿ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ದಾಂಡಿಗರಿಂದ ಹೊಡಿಬಡಿ ಆಟವನ್ನು ನಿರೀಕ್ಷಿಸಬಹುದು.
ಭಾರತವು ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಎರಡೂ ತಂಡಗಳ ವಿರುದ್ಧ ಗೆದ್ದರೆ 4 ಅಂಕಗಳನ್ನು ಪಡೆಯುತ್ತದೆ. ಅತ್ತ ಸೌತ್ ಆಫ್ರಿಕಾ ತನ್ನ ಉಳಿದ ಪಂದ್ಯಗಳನ್ನು ಗೆದ್ದರೆ, ಅಂದರೆ ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ವಿರುದ್ಧ ಗೆದ್ದರೆ ಟೀಮ್ ಇಂಡಿಯಾಗೆ ನೆಟ್ ರನ್ ರೇಟ್ ಆಧಾರದಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಎದುರಾಗುವುದಿಲ್ಲ.
ಇದನ್ನೂ ಓದಿ: ಟಾಟಾ ಕಡೆಯಿಂದ ವೈಭವ್ ಸೂರ್ಯವಂಶಿಗೆ ಸಿಕ್ತು ಭರ್ಜರಿ ಗಿಫ್ಟ್
ಒಂದು ವೇಳೆ ಇಂದಿನ ಮೊದಲ ಪಂದ್ಯದಲ್ಲಿ (3 ಗಂಟೆಗೆ) ವೆಸ್ಟ್ ಇಂಡೀಸ್ ತಂಡವು ಸೌತ್ ಆಫ್ರಿಕಾ ವಿರುದ್ಧ ಗೆದ್ದರೆ, ಟೀಮ್ ಇಂಡಿಯಾ ಝಿಂಬಾಬ್ವೆ ವಿರುದ್ಧ ಅಮೋಘ ಗೆಲುವು ದಾಖಲಿಸುವುದು ಅನಿವಾರ್ಯ. ಏಕೆಂದರೆ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದರೂ ನೆಟ್ ರನ್ ರೇಟ್ ಪರಿಗಣನೆಗೆ ಬರಲಿದೆ. ಹೀಗಾಗಿ ಝಿಂಬಾಬ್ವೆ ವಿರುದ್ಧದ ಪಂದ್ಯದ ಮೂಲಕವೇ ಟೀಮ್ ಇಂಡಿಯಾ ತನ್ನ ನೆಟ್ ರನ್ ರೇಟ್ ಅನ್ನು ಹೆಚ್ಚಿಸಿಕೊಳ್ಳಬೇಕಿದೆ.
Published On - 10:24 am, Thu, 26 February 26