ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ನಲ್ಲಿ (IPL 2021) ಪಂಜಾಬ್ ಕಿಂಗ್ಸ್ (PBKS) ಅಭಿಯಾನ ಅಂತ್ಯಗೊಂಡಿದೆ. ಆಡಿದ 14 ಪಂದ್ಯಗಳಲ್ಲಿ 8 ಸೋಲು ಹಾಗೂ 6 ಗೆಲುವಿನೊಂದಿಗೆ ಪಂಜಾಬ್ ತಂಡವು ಪಾಯಿಂಟ್ ಟೇಬಲ್ನಲ್ಲಿ 5ನೇ ಸ್ಥಾನ ಅಲಂಕರಿಸಿದೆ. ಈ ಬಾರಿ ಪಂಜಾಬ್ ಕಿಂಗ್ಸ್ ತಂಡವು ನೀರಸ ಪ್ರದರ್ಶನ ನೀಡಿದರೂ ತಂಡದ ನಾಯಕ ಕೆಎಲ್ ರಾಹುಲ್ (KL Rahul) ಮಾತ್ರ ಎಂದಿನಂತೆ ಈ ಸಲ ಕೂಡ ಆರ್ಭಟಿಸಿದ್ದಾರೆ. ಅದರಲ್ಲೂ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಸಿಎಸ್ಕೆ ನೀಡಿದ 137 ರನ್ಗಳ ಸಾಧಾರಣ ಸವಾಲು ಬೆನ್ನತ್ತಿದ ಪಂಜಾಬ್ಗೆ ರಾಹುಲ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಪಂಜಾಬ್ ನಾಯಕ ಸಿಕ್ಸ್-ಫೋರ್ಗಳ ಸುರಿಮಳೆಗೈದರು.
ಅದರಂತೆ ರಾಹುಲ್ ಬ್ಯಾಟ್ನಿಂದ ಮೂಡಿಬಂದ ಒಟ್ಟು ಸಿಕ್ಸ್ಗಳ ಸಂಖ್ಯೆ 8. ಹಾಗೆಯೇ ಫೋರ್ಗಳ ಸಂಖ್ಯೆ 7. ಹೀಗೆ ಭರ್ಜರಿ ಇನಿಂಗ್ಸ್ ಆಡಿದ ರಾಹುಲ್ ಅಂತಿಮವಾಗಿ 42 ಎಸೆತಗಳಲ್ಲಿ ಅಜೇಯ 98 ರನ್ ಬಾರಿಸುವ ಮೂಲಕ 13 ಓವರ್ನಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಬಲಿಷ್ಠ ಸಿಎಸ್ಕೆಗೆ 6 ವಿಕೆಟ್ಗಳಿಂದ ಸೋಲುಣಿಸಿ ವಿರೋಚಿತವಾಗಿ ಐಪಿಎಲ್ ಅಭಿಯಾನಕ್ಕೆ ವಿದಾಯ ಹೇಳಿದರು. ಅಷ್ಟೇ ಅಲ್ಲದೆ ಕೆಎಲ್ಆರ್ ಅವರ ಈ ಭರ್ಜರಿ ಇನಿಂಗ್ಸ್ನೊಂದಿಗೆ ಹಲವು ದಾಖಲೆಗಳು ಕೂಡ ನಿರ್ಮಾಣವಾಗಿರುವುದು ವಿಶೇಷ.
ಹೌದು, ಒಂದೆಡೆ ರಾಹುಲ್ ಬ್ಯಾಟ್ನಿಂದ ಸಿಕ್ಸ್-ಫೋರ್ಗಳ ಸುರಿಮಳೆಯಾಗುತ್ತಿದ್ದಂತೆ ಇತ್ತ ದಾಖಲೆಗಳು ಕೂಡ ನಿರ್ಮಾಣವಾಗುತ್ತಿತ್ತು. ಅದರಂತೆ ಒಂದು ಭರ್ಜರಿ ಇನಿಂಗ್ಸ್ನಿಂದ ಕೆಎಲ್ ರಾಹುಲ್ 6 ದಾಖಲೆಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಆ ದಾಖಲೆಗಳಾವುವು ಎಂದರೆ…
1000 ರನ್ – ಕೆಎಲ್ ರಾಹುಲ್ ಯುಎಇಯಲ್ಲಿ 1000 ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. 25 ಐಪಿಎಲ್ ಪಂದ್ಯಗಳಿಂದ ಕೆಎಲ್ಆರ್ 1083 ರನ್ಗಳನ್ನು ಕಲೆಹಾಕಿದ್ದಾರೆ.
2548 ರನ್ – ಪಂಜಾಬ್ ಫ್ರಾಂಚೈಸಿ ಪರ ಅತೀ ಹೆಚ್ಚು ರನ್ಗಳಿಸಿದ ಬ್ಯಾಟರ್ ಎಂಬ ದಾಖಲೆ ಕೂಡ ಕೆಎಲ್ ರಾಹುಲ್ ಪಾಲಾಗಿದೆ. ಈ ಹಿಂದೆ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಪಂಜಾಬ್ ಪರ 2477 ರನ್ ಬಾರಿಸಿ ಅಗ್ರಸ್ಥಾನದಲ್ಲಿದ್ದರು. ಸಿಎಸ್ಕೆ ವಿರುದ್ದ 98 ರನ್ ಬಾರಿಸುವುದರೊಂದಿಗೆ ರಾಹುಲ್ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅಲ್ಲದೆ 2548 ರನ್ ಗಳೊಂದಿಗೆ ಪಂಜಾಬ್ ಫ್ರಾಂಚೈಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
600 ರನ್– ಐಪಿಎಲ್ 2021 ರಲ್ಲಿ 600 ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಕೂಡ ರಾಹುಲ್ ಪಾತ್ರರಾಗಿದ್ದಾರೆ.
3 ಬಾರಿ 600 ರನ್ – ಡೇವಿಡ್ ವಾರ್ನರ್ ಮತ್ತು ಕ್ರಿಸ್ ಗೇಲ್ ನಂತರ ಐಪಿಎಲ್ ಸೀಸನ್ನಲ್ಲಿ 3 ಬಾರಿ 600 ರನ್ ಪೂರೈಸಿದ ಮೂರನೇ ಆಟಗಾರ ಎಂಬ ದಾಖಲೆ ಕೂಡ ಕೆಎಲ್ ರಾಹುಲ್ ಪಾಲಾಗಿದೆ.
2ನೇ ಆಟಗಾರ – ಐಪಿಎಲ್ ಚೇಸಿಂಗ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೂ ರಾಹುಲ್ ಪಾತ್ರರಾಗಿದ್ದಾರೆ. ಸಿಎಸ್ಕೆ ವಿರುದ್ದ ರಾಹುಲ್ 98 ರನ್ ಬಾರಿಸಿ ಈ ಸಾಧನೆ ಮಾಡಿದ್ದಾರೆ. ಇನ್ನು ಅಗ್ರಸ್ಥಾನದಲ್ಲಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಇದ್ದು, ಕೊಹ್ಲಿ 2016 ರಲ್ಲಿ ಚೇಸಿಂಗ್ನಲ್ಲಿ 106 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.
30 ಸಿಕ್ಸ್– ಒಂದು ಸೀಸನ್ನಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ನಾಯಕರ ಪಟ್ಟಿಯಲ್ಲಿ ರಾಹುಲ್ ಮೂರನೇ ಸ್ಥಾನ ಅಲಂಕರಿಸಿದ್ದಾರೆ. ಈ ಬಾರಿ ರಾಹುಲ್ ಬ್ಯಾಟ್ನಿಂದ 30 ಸಿಕ್ಸ್ಗಳು ಮೂಡಿಬಂದಿದೆ. ಈ ಮೂಲಕ ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿಯೊಂದಿಗೆ 3ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ 31 ಸಿಕ್ಸ್ ಸಿಡಿಸಿದ ಡೇವಿಡ್ ವಾರ್ನರ್ 2ನೇ ಸ್ಥಾನದಲ್ಲಿದ್ದರೆ, ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ 38 ಸಿಕ್ಸ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
6 ಅರ್ಧಶತಕ – ಐಪಿಎಲ್ ಸೀಸನ್ 2021ರಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಬ್ಯಾಟರುಗಳ ಪಟ್ಟಿಯಲ್ಲಿ ರಾಹುಲ್ ಅಗ್ರಸ್ಥಾನದಲ್ಲಿದ್ದಾರೆ. 13 ಪಂದ್ಯಗಳನ್ನಾಡಿರುವ ರಾಹುಲ್ 6 ಅರ್ಧಶತಕದೊಂದಿಗೆ ಒಟ್ಟು 626 ರನ್ ಕಲೆಹಾಕಿದ್ದಾರೆ.
ಇದನ್ನೂ ಓದಿ: IPL 2021: ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್
ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!
(IPL 2021: KL Rahul’s record-breaking Innings)
Published On - 4:45 pm, Fri, 8 October 21