LSG vs RCB Match Report: ಆರ್​ಸಿಬಿ ಸಾಂಘಿಕ ಹೋರಾಟಕ್ಕೆ ಮಣಿದ ಲಕ್ನೋ; ಮುಂದಿನ ಎದುರಾಳಿ ರಾಜಸ್ಥಾನ

| Updated By: ಪೃಥ್ವಿಶಂಕರ

Updated on: May 26, 2022 | 12:50 AM

LSG vs RCB Match Report: ಎಲಿಮಿನೇಟರ್ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14 ರನ್‌ಗಳಿಂದ ಸೋಲಿಸಿತು.

LSG vs RCB Match Report: ಆರ್​ಸಿಬಿ ಸಾಂಘಿಕ ಹೋರಾಟಕ್ಕೆ ಮಣಿದ ಲಕ್ನೋ; ಮುಂದಿನ ಎದುರಾಳಿ ರಾಜಸ್ಥಾನ
ರಜತ್- ಕಾರ್ತಿಕ್
Follow us on

ಐಪಿಎಲ್ 2022 (IPL 2022)ರಲ್ಲಿ ಪಾದಾರ್ಪಣೆ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants,)​ನ ವೈಭವೋಪೇತ ಪಯಣ ಕೊನೆಗೂ ಅಂತ್ಯಗೊಂಡಿದೆ. ಎಲಿಮಿನೇಟರ್ ಪಂದ್ಯದಲ್ಲಿ ಕೆಎಲ್ ರಾಹುಲ್ (KL Rahul) ನಾಯಕತ್ವದ ಲಕ್ನೋ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು 14 ರನ್‌ಗಳಿಂದ ಸೋಲಿಸಿತು. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಳೆಯಿಂದಾಗಿ ತಡವಾಗಿ ಆರಂಭವಾದ ಈ ಪಂದ್ಯದಲ್ಲಿ ಎರಡೂ ಕಡೆಯಿಂದ ರನ್ ಗಳ ಸುರಿಮಳೆಯಾಯಿತು. 207 ರನ್​ಗಳ ಬೃಹತ್ ಮೊತ್ತ ಗಳಿಸಿದ ಬಳಿಕವೂ ಬೆಂಗಳೂರು ಸಂಕಷ್ಟಕ್ಕೆ ಸಿಲುಕಿದಂತಾಗಿತ್ತು. ಆದರೆ, ಕೊನೆಯ ಓವರ್‌ನಲ್ಲಿ ಜೋಶ್ ಹೇಜಲ್‌ವುಡ್ ಮತ್ತು ಹರ್ಷಲ್ ಪಟೇಲ್ ಅವರ ನೆರವಿನಿಂದ ಬೆಂಗಳೂರು ಲಕ್ನೋವನ್ನು ಗುರಿ ತಲುಪದಂತೆ ತಡೆಯಿತು. ಈ ಇಬ್ಬರು ಬೌಲರ್‌ಗಳ ಹೊರತಾಗಿ ಬೆಂಗಳೂರಿನ ಗೆಲುವಿನ ಬಹುದೊಡ್ಡ ತಾರೆ ಎಂದರೆ ಐಪಿಎಲ್ ವೃತ್ತಿಜೀವನದ ಮೊದಲ ಶತಕ ಬಾರಿಸಿದ ರಜತ್ ಪಾಟಿದಾರ್ (Rajat Patidar). ಅವರ ಅಮೋಘ ಶತಕದ ಆಧಾರದ ಮೇಲೆ ಬೆಂಗಳೂರು ಪ್ರಶಸ್ತಿಯ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಬೆಂಗಳೂರು ಇದೀಗ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

ರಜತ್ ಅಬ್ಬರ

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆರ್​ಸಿಬಿಯಲ್ಲಿ ಒನ್ ಮ್ಯಾನ್ ಶೋ ಕಾಣಿಸಿತು. ಮಧ್ಯಪ್ರದೇಶದ ಬಲಗೈ ಬ್ಯಾಟ್ಸ್‌ಮನ್ ರಜತ್ ತಮ್ಮ T20 ವೃತ್ತಿಜೀವನದ ಮೊದಲ ಶತಕವನ್ನು ಗಳಿಸಿ ಬೆಂಗಳೂರನ್ನು ದೊಡ್ಡ ಸ್ಕೋರ್‌ಗೆ ಕೊಂಡೊಯ್ದರು. ಪಾಟಿದಾರ್ ಅವರ 112 ರನ್‌ಗಳ ಅಜೇಯ ಇನ್ನಿಂಗ್ಸ್‌ನಿಂದ ಬೆಂಗಳೂರು ನಾಲ್ಕು ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಲವನೀತ್ ಸಿಸೋಡಿಯಾ ಅವರ ಗಾಯದಿಂದಾಗಿ ಆರ್‌ಸಿಬಿಗೆ ಸೇರ್ಪಡೆಗೊಂಡ ಪಾಟಿದಾರ್ ಈ ಋತುವಿನಲ್ಲಿ ಎರಡನೇ ಬಾರಿಗೆ ಬೆಂಗಳೂರು ಪರ ಪ್ರಬಲ ಇನ್ನಿಂಗ್ಸ್ ಆಡಿದರು. ಅವರು ಕೇವಲ 54 ಎಸೆತಗಳಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಾಯದಿಂದ ಅದ್ಭುತ ಶತಕ ಗಳಿಸಿದರು. ಅವರನ್ನು ಹೊರತುಪಡಿಸಿ ದಿನೇಶ್ ಕಾರ್ತಿಕ್ ಮತ್ತೊಮ್ಮೆ ತಮ್ಮ ಫಿನಿಶರ್ ಶೈಲಿಯನ್ನು ಪ್ರದರ್ಶಿಸಿದರು ಮತ್ತು ಪಾಟಿದಾರ್ ಅವರೊಂದಿಗೆ 92 ರನ್ ಸೇರಿಸಿದರು.

ಇದನ್ನೂ ಓದಿ
Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
LSG vs RCB IPL 2022 Eliminator Highlights: ರಜತ್ ಅಬ್ಬರದ ಶತಕ; 2ನೇ ಕ್ವಾಲಿಫೈಯರ್​ಗೆ ಆರ್​ಸಿಬಿ ಎಂಟ್ರಿ

ಮಳೆಯಿಂದ ತಡವಾಗಿ ಆರಂಭ

ಮೊದಲ ಕ್ವಾಲಿಫೈಯರ್‌ನಲ್ಲಿ ಮಳೆಗೆ ಯಾವುದೇ ತೊಂದರೆಯಾಗಲಿಲ್ಲ, ಆದರೆ ಈ ಬಾರಿ ಮಳೆಯಿಂದಾಗಿ ಸುಮಾರು 40 ನಿಮಿಷಗಳ ಕಾಲ ತಡವಾಗಿ ಪಂದ್ಯ ಪ್ರಾರಂಭವಾಯಿತು. ಟಾಸ್ ಸೋತ ಬೆಂಗಳೂರು ಬ್ಯಾಟಿಂಗ್​ಗೆ ಇಳಿದು ಮೊದಲ ಓವರ್​ನಲ್ಲೇ ನಾಯಕ ಫಾಫ್ ಡು ಪ್ಲೆಸಿಸ್ (0) ವಿಕೆಟ್ ಕಳೆದುಕೊಂಡಿತು. ಇಲ್ಲಿಂದ ಕೊಹ್ಲಿ ಮತ್ತು ಪಾಟಿದಾರ್ ಇನ್ನಿಂಗ್ಸ್ ನಿಭಾಯಿಸಿದರು. ಪಾಟಿದಾರ್ ಹೆಚ್ಚು ಆಕ್ರಮಣಕಾರಿಯಾಗಿ, ಕೃನಾಲ್ ಪಾಂಡ್ಯ ಅವರ ಸತತ ಎಸೆತಗಳಲ್ಲಿ ಆರನೇ ಓವರ್‌ನಲ್ಲಿ ಮೂರು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ಎರಡನೇ ವಿಕೆಟ್‌ಗೆ ವಿರಾಟ್ ಕೊಹ್ಲಿ (25) ಜೊತೆ ಪಾಟಿದಾರ್ 66 ರನ್ ಸೇರಿಸಿದರು. ಕೊಹ್ಲಿ ನಂತರ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಹಿಪಾಲ್ ಲೊಮೊರ್ ಬೇಗನೆ ಔಟಾದರು.

ಇದಾದ ಬಳಿಕ ಕ್ರೀಸ್​ಗೆ ಬಂದ ದಿನೇಶ್ ಕಾರ್ತಿಕ್ ಎರಡು ರನ್​ಗಳಲ್ಲಿ ಪಡೆದ ಜೀವದಾನದ ಸಂಪೂರ್ಣ ಲಾಭ ಪಡೆದು ಬೌಂಡರಿಗಳ ಮಳೆಗರೆದರು. ಮತ್ತೊಂದೆಡೆ ಪಾಟಿದಾರ್ ಕೂಡ ಅದ್ಭುತ ಬ್ಯಾಟಿಂಗ್ ಮುಂದುವರಿಸಿದರು. ಅವರು 16ನೇ ಓವರ್‌ನಲ್ಲಿ ಬಿಷ್ಣೋಯ್ ಅವರನ್ನು ಗುರಿಯಾಗಿಸಿಕೊಂಡು ಓವರ್‌ನಿಂದ 3 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಬಾರಿಸಿದರು. ಪಾಟಿದಾರ್ 17ನೇ ಓವರ್‌ನಲ್ಲಿ ಮೊಹ್ಸಿನ್ ಎಸೆತದಲ್ಲಿ ಸಿಕ್ಸರ್‌ನೊಂದಿಗೆ ಕೇವಲ 49 ಎಸೆತಗಳಲ್ಲಿ ತಮ್ಮ ವೃತ್ತಿಜೀವನದ ಮೊದಲ ಶತಕವನ್ನು ಪೂರ್ಣಗೊಳಿಸಿದರು. ಇವರಿಬ್ಬರೂ ಕೇವಲ 41 ಎಸೆತಗಳಲ್ಲಿ 92 ರನ್‌ಗಳ ಅಜೇಯ ಜೊತೆಯಾಟ ನೀಡಿ ತಂಡವನ್ನು 207 ರನ್‌ಗಳಿಗೆ ಕೊಂಡೊಯ್ದರು. ಕಾರ್ತಿಕ್ 23 ಎಸೆತಗಳಲ್ಲಿ 37 ರನ್ (5 ಬೌಂಡರಿ, 1 ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದರು.

ಲಕ್ನೋ ಇನ್ನಿಂಗ್ಸ್ ಹೀಗಿತ್ತು

ಬೃಹತ್ ರನ್ ಬೆನ್ನತ್ತಿದ ಲಕ್ನೋ ಆರಂಭದಲ್ಲೇ ಡಿ ಕಾಕ್ ವಿಕೆಟ್ ಕಳೆದುಕೊಂಡಿತು. ನಾಯಕ ಕೆಎಲ್ ರಾಹುಲ್ ಅಮೋಘ ಇನ್ನಿಂಗ್ಸ್ ಆಡಿದರು. ಅವರು 58 ಎಸೆತಗಳಲ್ಲಿ 79 ರನ್​ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಇದೇ ವೇಳೆ ರಾಹುಲ್ 5 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿದರು. ಲಕ್ನೋದ ಆರಂಭಿಕ ಜೋಡಿ ಕೂಡ ಬೆಂಗಳೂರಿನಷ್ಟೇ ವೇಗವಾಗಿ ಬೇರೆ ಬೇರೆಯಾಯಿತು. ಮೊದಲ ಓವರ್​ನ ಅಂತಿಮ ಎಸೆತದಲ್ಲಿ ಕ್ವಿಂಟನ್ ಡಿಕಾಕ್ ಔಟಾದರು. ನಂತರ ಬಂದ ಮನನ್ ವೋಹ್ರಾ 11 ಎಸೆತಗಳಲ್ಲಿ 19 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ಈ ನಡುವೆ 2 ಸಿಕ್ಸರ್ ಸಿಡಿಸಿದರು.

ಕೆಎಲ್ ರಾಹುಲ್ ಜೊತೆ ದೀಪಕ್ ಹೂಡಾ ಉತ್ತಮ ಜೊತೆಯಾಟವಾಡಿದರು. ಆದರೆ ಹಸರಂಗ ಅವರ ಚೆಂಡನ್ನು ಗುರುತಿಸುವಲ್ಲಿ ವಿಫಲರಾಗಿ ಹೂಡಾ ಕ್ಲೀನ್ ಬೌಲ್ಡ್ ಆದರು. ಅವರು 26 ಎಸೆತಗಳಲ್ಲಿ 45 ರನ್ ಗಳಿಸಿದರು. ಮಾರ್ಕಸ್ ಸ್ಟೊಯಿನಿಶ್ 9 ಎಸೆತಗಳಲ್ಲಿ 9 ರನ್ ಗಳಿಸಿದರು. ನಂತರ ನಾಯಕನ ಆಟವಾಡುತ್ತಿದ್ದ ನಾಯಕ ರಾಹುಲ್ ಹ್ಯಾಝೇಲ್​ವುಡ್ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರೆ, ಅದೇ ಓವರ್​ನಲ್ಲೇ ಕೃನಾಲ್ ಪಾಂಡ್ಯ ಶೂನ್ಯಕ್ಕೆ ಔಟಾದರು. ಹೀಗಾಗಿ ಕೊನೆಯ ಓವರ್​ನಲ್ಲಿ ಬೇಕಾಗಿದ್ದ 24 ರನ್ ಬೆನ್ನಟ್ಟುವಲ್ಲಿ ಲಕ್ನೋ ಯಶಸ್ವಿಯಾಗಲಿಲ್ಲ. ಚಮೀರ ಸಿಕ್ಸರ್ ಬಾರಿಸಿದರಾದರೂ ರನ್ ಗುರಿ ತಲುಪಲಾಗಲಿಲ್ಲ.

Published On - 12:31 am, Thu, 26 May 22