IPL 2022: ಚೆನ್ನೈ ಸೂಪರ್ ಕಿಂಗ್ಸ್‌ ನಾಯಕತ್ವಕ್ಕೆ ಧೋನಿ ರಾಜೀನಾಮೆ! ಹೊಸ ನಾಯಕ ಯಾರು ಗೊತ್ತಾ?

MS Dhoni Quits CSK Captaincy: ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವಕ್ಕೆ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ ನೀಡಿದ್ದಾರೆ. ಅವರ ಬದಲಿಗೆ ಈಗ ರವೀಂದ್ರ ಜಡೇಜಾ ಸಿಎಸ್​ಕೆ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ.

IPL 2022: ಚೆನ್ನೈ ಸೂಪರ್ ಕಿಂಗ್ಸ್‌ ನಾಯಕತ್ವಕ್ಕೆ ಧೋನಿ ರಾಜೀನಾಮೆ! ಹೊಸ ನಾಯಕ ಯಾರು ಗೊತ್ತಾ?
Follow us
TV9 Web
| Updated By: ಪೃಥ್ವಿಶಂಕರ

Updated on:Mar 24, 2022 | 3:33 PM

ಇನ್ನೇರಡು ದಿನಗಳಲ್ಲಿ ಐಪಿಎಲ್ (IPL 2022) 15ನೇ ಆವೃತ್ತಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಹಾಗೂ ಕೋಲ್ಕತ್ತಾ ಸೆಣೆಸಲಿವೆ. ಆದರೆ ಆರಂಭಕ್ಕೂ ಮುನ್ನ ಸಿಎಸ್​ಕೆ ಪಾಳಯದಿಂದ ಬಿಗ್ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಅದೆನೆಂದರೆ, ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಾಯಕತ್ವಕ್ಕೆ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ ನೀಡಿದ್ದಾರೆ. ಅವರ ಬದಲಿಗೆ ಈಗ ರವೀಂದ್ರ ಜಡೇಜಾ ಸಿಎಸ್​ಕೆ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಸಿಎಸ್​ಕೆ ಆಡಳಿತ ಮಂಡಳಿ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹೇಳಿಕೊಂಡಿದೆ. 2012 ರಿಂದ ಚೆನ್ನೈ ಸೂಪರ್ ಕಿಂಗ್ಸ್‌ನ ಅವಿಭಾಜ್ಯ ಅಂಗವಾಗಿರುವ ಜಡೇಜಾ, ಸಿಎಸ್‌ಕೆಯನ್ನು ಮುನ್ನಡೆಸುವ ಮೂರನೇ ಆಟಗಾರನಾಗಲಿದ್ದಾರೆ. ಧೋನಿ ಈ ಆವೃತ್ತಿಯಲ್ಲಿ ಮತ್ತು ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವುದನ್ನು ಮುಂದುವರಿಸುತ್ತಾರೆ ಎಂದು ಸಿಎಸ್‌ಕೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಎಂಎಸ್ ಧೋನಿ ಈ ಸೀಸನ್​ನಲ್ಲಿ ಆಡಿದ ನಂತರ ಮುಂದಿನ ಸೀಸನ್​ನಲ್ಲಿ ನಾಯಕತ್ವ ತೊರೆಯುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಧೋನಿ ಸಿಎಸ್‌ಕೆ ನಾಯಕತ್ವಕ್ಕೆ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದ್ದಾರೆ. ಧೋನಿ ಚೆನ್ನೈ ತಂಡದ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಹಸ್ತಾಂತರಿಸಿದ್ದು, ನಾಯಕ ಸ್ಥಾನದಿಂದ ಕೆಳಗಿಳಿಯುವ ಧೋನಿ ನಿರ್ಧಾರದಿಂದ ಸಿಎಸ್‌ಕೆ ಅಭಿಮಾನಿಗಳಿಗೆ ಶಾಕ್ ಆಗಿದೆ. ಧೋನಿ ಐಪಿಎಲ್‌ನಲ್ಲಿ ಯಶಸ್ವಿ ನಾಯಕರಾಗಿದ್ದು, ಅವರ ನಾಯಕತ್ವದಲ್ಲಿ ಸಿಎಸ್​ಕೆ ತಂಡ ಇದುವರೆಗೆ ನಾಲ್ಕು ಬಾರಿ ಪ್ರಶಸ್ತಿ ಗೆದ್ದಿದೆ.

ಮಹೇಂದ್ರ ಸಿಂಗ್ ಧೋನಿ ಕಳೆದ 12 ಸೀಸನ್‌ಗಳಲ್ಲಿ ಚೆನ್ನೈ ತಂಡದ ನಾಯಕರಾಗಿದ್ದರು. 2008 ರಲ್ಲಿ ಲೀಗ್ ಪ್ರಾರಂಭವಾದಾಗಿನಿಂದ ಅವರು ಚೆನ್ನೈ ಸೂಪರ್ ಕಿಂಗ್ಸ್‌ ನಾಯಕತ್ವದ ಜವಬ್ದಾರಿ ಹೊತ್ತಿದ್ದರು. ಮ್ಯಾಚ್​ ಫಿಕ್ಸಿಂಗ್ ಆರೋಪದಡಿ 2016 ಮತ್ತು 2017ರಲ್ಲಿ ಸಿಎಸ್​ಕೆ ತಂಡ ಲೀಗ್‌ನಲ್ಲಿ ಭಾಗವಹಿಸಿರಲಿಲ್ಲ. ಈ ಎರಡು ಆವೃತ್ತಿಗಳನ್ನು ಹೊರತುಪಡಿಸಿ ಚೆನ್ನೈ ಈ ಲೀಗ್‌ನ ಅತ್ಯಂತ ಯಶಸ್ವಿ ತಂಡ ಎಂದು ಹೆಸರುವಾಸಿಯಾಗಲು ಧೋನಿ ಪ್ರಮುಖ ಪಾತ್ರವಹಿಸಿದ್ದಾರೆ.

ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ CSK ತಂಡವು ತನ್ನ ಅಧಿಕೃತ ಹೇಳಿಕೆಯಲ್ಲಿ, ‘ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ತೊರೆಯಲು ನಿರ್ಧರಿಸಿದ್ದಾರೆ. ಜೊತೆಗೆ ರವೀಂದ್ರ ಜಡೇಜಾ ಅವರನ್ನು ತಂಡದ ನೂತನ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಜಡೇಜಾ 2012 ರಿಂದ ತಂಡದ ಪ್ರಮುಖ ಭಾಗವಾಗಿದ್ದು, ಅವರು ನಮ್ಮ ತಂಡದ ಮೂರನೇ ನಾಯಕರಾಗಿರುತ್ತಾರೆ. ಮಹೇಂದ್ರ ಸಿಂಗ್ ಧೋನಿ ಈ ಆವೃತ್ತಿಯಲ್ಲಿ ಮತ್ತು ನಂತರ ತಂಡದೊಂದಿಗಿರಲಿದ್ದಾರೆ ಎಂದಿದ್ದಾರೆ. ಐಪಿಎಲ್ 2022 ರ ಮೆಗಾ ಹರಾಜಿನಿಂದ ಉಳಿಸಿಕೊಳ್ಳುವ ಸಂದರ್ಭದಲ್ಲಿ ರವೀಂದ್ರ ಜಡೇಜಾ ಅವರನ್ನು ಚೆನ್ನೈ ಉಳಿಸಿಕೊಂಡಿದೆ. ಜಡೇಜಾ ಚೆನ್ನೈನ ಅತ್ಯಂತ ದುಬಾರಿ ಆಟಗಾರರಾಗಿದ್ದು ಅವರಿಗೆ ಚೆನ್ನೈನಿಂದ 16 ಕೋಟಿ ರೂ.ನೀಡಿತ್ತು. ಎಂಎಸ್ ಧೋನಿ ಅವರನ್ನು ತಂಡ 12 ಕೋಟಿಗೆ ಉಳಿಸಿಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್‌ಗೆ ಜಡೇಜಾ ಮೂರನೇ ನಾಯಕ ಮಹೇಂದ್ರ ಸಿಂಗ್ ಧೋನಿ ಹೊರತು ಪಡಿಸಿ ಇದುವರೆಗೆ ಸುರೇಶ್ ರೈನಾ ಮಾತ್ರ ತಂಡದ ನಾಯಕರಾಗಿದ್ದರು. 213 ಪಂದ್ಯಗಳಲ್ಲಿ ನಾಯಕರಾಗಿದ್ದ ಧೋನಿ 130 ಪಂದ್ಯಗಳಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ರೈನಾ ಆರು ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದರು, ಇದರಲ್ಲಿ ತಂಡವು ಕೇವಲ ಎರಡು ಪಂದ್ಯಗಳನ್ನು ಗೆದ್ದಿತ್ತು. ಆದಾಗ್ಯೂ, ಈ ಋತುವಿನಲ್ಲಿ ಚೆನ್ನೈ ಅವರನ್ನು ಉಳಿಸಿಕೊಳ್ಳಲಿಲ್ಲ ಅಥವಾ ಖರೀದಿಸಲಿಲ್ಲ. ರವೀಂದ್ರ ಜಡೇಜಾ ಅವರು 15 ವರ್ಷಗಳಲ್ಲಿ ಸಿಎಸ್​ಕೆ ತಂಡದ ನಾಯಕರಾದ ಮೂರನೇ ಆಟಗಾರರಾಗಿದ್ದಾರೆ.

ಧೋನಿ ಮತ್ತೊಮ್ಮೆ ತಮ್ಮ ಆಘಾತಕಾರಿ ಶೈಲಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದರು. ಧೋನಿ ಯಾವಾಗಲೂ ಹಠಾತ್ ನಿರ್ಧಾರಗಳಿಗೆ ಹೆಸರುವಾಸಿಯಾಗಿದ್ದಾರೆ. 2014 ರಲ್ಲಿ, ಅವರು ಇದ್ದಕ್ಕಿದ್ದಂತೆ ಟೆಸ್ಟ್ ತಂಡದ ನಾಯಕತ್ವವನ್ನು ತೊರೆದರು. ಅದೇ ಸಮಯದಲ್ಲಿ, ಎರಡು ವರ್ಷಗಳ ನಂತರ, 2016 ರಲ್ಲಿ, ಇದ್ದಕ್ಕಿದ್ದಂತೆ ಟಿ 20 ಮತ್ತು ಏಕದಿನ ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ಹಸ್ತಾಂತರಿಸಿದರು.

ಇದನ್ನೂ ಓದಿ:IPL 2022: ಇನ್ನೂ ಚೆನ್ನೈ ತಂಡ ಸೇರಿಕೊಳ್ಳದ 8 ಕೋಟಿಯ ಪ್ಲೇಯರ್! ಧೋನಿ ಪಡೆಗೆ ಹೆಚ್ಚಾಯ್ತು ಟೆನ್ಷನ್

Published On - 2:48 pm, Thu, 24 March 22