ಐಪಿಎಲ್ 2022ರ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಸೋಲುವ ಆರ್ಸಿಬಿ ತಂಡವು ಐಪಿಎಲ್ ಅಭಿಯಾನ ಅಂತ್ಯಗೊಳಿಸಿದೆ. ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದರೂ ಆರ್ಸಿಬಿ ನಿರ್ಣಾಯಕ ಪಂದ್ಯ ಎಡವಿತ್ತು. ಅದರಲ್ಲೂ ಬ್ಯಾಟಿಂಗ್ ಪಿಚ್ನಲ್ಲಿ ಮುಗ್ಗರಿಸುವ ಮೂಲಕ ಸೋಲೊಪ್ಪಿಕೊಂಡಿರುವುದೇ ಅಚ್ಚರಿ. ಏಕೆಂದರೆ ಆರ್ಸಿಬಿ ತಂಡದಲ್ಲಿ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿದ್ದರೂ ರಾಜಸ್ಥಾನ್ ರಾಯಲ್ಸ್ಗೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ವಿಫಲವಾಯಿತು. ಹಾಗಿದ್ರೆ ಆರ್ಸಿಬಿ ತಂಡವು ಎಡವಿದ್ದೆಲ್ಲಿ ಎಂದು ನೋಡೋಣ…
ಅಹಮದಾಬಾದ್ ಪಿಚ್ ಬ್ಯಾಟ್ಸ್ಮನ್ಗಳಿಗೆ ಸ್ವರ್ಗ. ಇದಾಗ್ಯೂ ಈ ಪಿಚ್ನಲ್ಲಿ ಆರ್ಸಿಬಿ ಬ್ಯಾಟ್ಸ್ಮನ್ಗಳು ರನ್ಗಳಿಸಲು ಪರದಾಡಿದರು. ಅದರಲ್ಲೂ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 7 ರನ್ಗಳಿಸಿ ಪವರ್ಪ್ಲೇನಲ್ಲೇ ಹೊರನಡೆದರು. ಇನ್ನು ಪವರ್ಪ್ಲೇನಲ್ಲಿ ಬ್ಯಾಟ್ ಬೀಸಿದ ಫಾಫ್ ಡುಪ್ಲೆಸಿಸ್ ಬರೋಬ್ಬರಿ 27 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 25 ರನ್ ಮಾತ್ರ.
ಇದಾಗ್ಯೂ ಮತ್ತೊಂದೆಡೆ ರಜತ್ ಪಾಟಿದಾರ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ ಅಹಮದಾಬಾದ್ ಪಿಚ್ನಲ್ಲಿ ಅದು ನಿಧಾನಗತಿಯ ಬ್ಯಾಟಿಂಗ್ ಎಂದೇ ಹೇಳಬಹುದು. ಏಕೆಂದರೆ ಪಾಟಿದಾರ್ ಅರ್ಧಶತಕ ಪೂರೈಸಲು ತೆಗೆದುಕೊಂಡಿದ್ದು ಬರೋಬ್ಬರಿ 40 ಎಸೆತಗಳನ್ನು ಎಂಬುದು ಉಲ್ಲೇಖಾರ್ಹ.
ಒಂದೆಡೆ ಫಾಫ್ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ರೆ, ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮಾಡಿದರೂ ರಜತ್ ಪಾಟಿದಾರ್ ಹೆಚ್ಚಿನ ಡಾಟ್ ಬಾಲ್ಗಳನ್ನು ಆಡಿದರು. ಪರಿಣಾಮ ಆರ್ಸಿಬಿ ಪವರ್ಪ್ಲೇನಲ್ಲಿ ಕಲೆಹಾಕಿದ್ದು ಕೇವಲ 46 ರನ್ ಮಾತ್ರ. ಇನ್ನು ಇದಾದ ಬಳಿಕ ಕೂಡ ಆರ್ಸಿಬಿ ಬ್ಯಾಟ್ಸ್ಮನ್ಗಳು ವೇಗದ ಎಸೆತಗಳಲ್ಲಿ ರನ್ಗಳಿಸಲು ಪರದಾಡಿದರು. ಪರಿಣಾಮ ವೇಗದ ಬೌಲರ್ಗಳ 12 ಓವರ್ಗಳಲ್ಲಿ ಆರ್ಸಿಬಿ ಕಲೆಹಾಕಿದ್ದು ಕೇವಲ 73 ರನ್ ಮಾತ್ರ.
ಇತ್ತ ಸ್ಪಿನ್ನರ್ಗಳ ವಿರುದ್ದ ಅಬ್ಬರಿಸಿದ್ದ ಆರ್ಸಿಬಿ ಬ್ಯಾಟ್ಸ್ಮನ್ಗಳು 8 ಓವರ್ಗಳಲ್ಲಿ 76 ರನ್ ಬಾರಿಸಿದ್ದರು. ಅಂದರೆ ಇಲ್ಲಿ ವೇಗಿಗಳನ್ನು ಎದುರಿಸುವಲ್ಲಿ ಆರ್ಸಿಬಿ ಬ್ಯಾಟ್ಸ್ಮನ್ಗಳು ಎಡವಿದ್ದರು. ಅದರಲ್ಲೂ ಪವರ್ಪ್ಲೇನಲ್ಲಿ ವೇಗಿಗಳ ಎದುರು ಆರ್ಸಿಬಿ ಆಟಗಾರರಾದ ಫಾಫ್ ಡುಪ್ಲೆಸಿಸ್ ಹಾಗೂ ರಜತ್ ಪಾಟಿದಾರ್ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದು ಆರ್ಸಿಬಿಗೆ ಮುಳುವಾಯಿತು.
ಮೊದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ರಾಜಸ್ಥಾನ್ ರಾಯಲ್ಸ್ ವೇಗಿಗಳು ಅಂತಿಮ 5 ಓವರ್ಗಳಲ್ಲಿ ಆರ್ಸಿಬಿ ಮಧ್ಯಮ ಕ್ರಮಾಂಕವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಪರಿಣಾಮ ಆರ್ಸಿಬಿ 8 ವಿಕೆಟ್ ನಷ್ಟಕ್ಕೆ 158 ರನ್ಗಳಿಸಲಷ್ಟೇ ಶಕ್ತರಾದರು. ಈ ಸಾಧಾರಣ ಸ್ಕೋರ್ಗಳಿಸುವ ಮೂಲಕ ಆರ್ಸಿಬಿ ಅದಾಗಲೇ ಅರ್ಧ ಪಂದ್ಯವನ್ನು ಸೋತಿತ್ತು ಎನ್ನಬಹುದು.
ಏಕೆಂದರೆ ಅಹಮದಾಬಾದ್ ಪಿಚ್ನಲ್ಲಿನ ಅವರೇಜ್ ಸ್ಕೋರ್ 160. ಅಂದರೆ ಈ ಪಿಚ್ನಲ್ಲಿ ಚೇಸಿಂಗ್ ತುಂಬಾ ಸುಲಭ. ಗೆಲ್ಲಬೇಕಿದ್ದರೆ ಕನಿಷ್ಠ 180 ಕ್ಕಿಂತ ಹೆಚ್ಚಿನ ರನ್ಗಳಿಸಲೇಬೇಕು. ಇತ್ತ ಸಾಧಾರಣ ಸವಾಲು ಪಡೆದ ರಾಜಸ್ಥಾನ್ ರಾಯಲ್ಸ್ಗೆ ಪವರ್ಪ್ಲೇನಲ್ಲೇ ಪವರ್ ತುಂಬುವ ಮೂಲಕ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಪವರ್ ತುಂಬಿದರು. ಆ ಮೂಲಕ ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಇತ್ತ ಬಟ್ಲರ್ ಅಬ್ಬರಕ್ಕೆ ನಲುಗಿದ ಆರ್ಸಿಬಿ ಬೌಲರ್ಗಳು ಲಯ ತಪ್ಪಿದರು.
ಇಲ್ಲಿ ಆರ್ಸಿಬಿ ಬೌಲರ್ಗಳು ಉತ್ತಮ ಪ್ರದರ್ಶನ ನೀಡದಿದ್ದರೂ, ಸೋಲಿಗೆ ಪ್ರಮುಖ ಕಾರಣ ಬ್ಯಾಟ್ಸ್ಮನ್ಗಳು ಎನ್ನಬಹುದು. ಏಕೆಂದರೆ ಬ್ಯಾಟ್ಸ್ಮನ್ಗಳಿಗೆ ಸ್ವರ್ಗದಂತಿದ್ದ ಪಿಚ್ನಲ್ಲಿ ರನ್ಗಳಿಸಲು ಪರದಾಡಿದ್ದು ಆರ್ಸಿಬಿಗೆ ಮುಳುವಾಯಿತು. ಅದರಲ್ಲೂ ಅವರೇಜ್ ಸ್ಕೋರ್ಗಳಿಸಲು ಕೂಡ ಸಾಧ್ಯವಾಗದೇ ಮೊದಲ ಇನಿಂಗ್ಸ್ ಮುಕ್ತಾಯದ ವೇಳೆಗೆ ಅರ್ಧ ಸೋಲೊಪ್ಪಿಕೊಂಡಿತು.
ಆದರೆ ರಾಜಸ್ಥಾನ್ ರಾಯಲ್ಸ್ ಆರಂಭಿಕರಾದ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಆರ್ಸಿಬಿ ಪವರ್ಪ್ಲೇನಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂಬುದನ್ನು ತೋರಿಸಿ ಕೊಡುವಂತೆ ಬ್ಯಾಟ್ ಬೀಸಿದ್ದರು. ಅಲ್ಲದೆ ಮೊದಲ 6 ಓವರ್ಗಳಲ್ಲಿ ರಾಜಸ್ಥಾನ್ ರಾಯಲ್ಸ್ 67 ರನ್ ಬಾರಿಸಿ ಉತ್ತಮ ಆರಂಭವನ್ನು ಪಡೆಯಿತು. ಈ ಮೂಲಕ ಗೆದ್ದು ಇದೀಗ 2008 ರ ಬಳಿಕ ಮತ್ತೊಮ್ಮೆ ಫೈನಲ್ಗೆ ಲಗ್ಗೆಯಿಟ್ಟಿದೆ.
ಅಂದಹಾಗೆ ಇದೇ ಪಿಚ್ನಲ್ಲಿ ಕಳೆದ ವರ್ಷ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 2 ವಿಕೆಟ್ ನಷ್ಟಕ್ಕೆ 224 ರನ್ ಕಲೆಹಾಕಿತ್ತು. ಈ ಬೃಹತ್ ಟಾರ್ಗೆಟ್ ಅನ್ನು ಬೆನ್ನತ್ತಿದ ಇಂಗ್ಲೆಂಡ್ 188 ರನ್ ಬಾರಿಸಿತ್ತು. ಹಾಗೆಯೇ ಕಳೆದ ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ಈ ಪಿಚ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಒಂದು ಮ್ಯಾಚ್ ಆಡಿದೆ. ಆ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡ 171 ರನ್ ಕಲೆಹಾಕಿತ್ತು. ಆದರೆ ಈ ಟಾರ್ಗೆಟ್ ಅನ್ನು ಚೇಸ್ ಮಾಡುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಹುತೇಕ ಯಶಸ್ವಿಯಾಗಿತ್ತು. ಇದಾಗ್ಯೂ ಕೊನೆಯ ಓವರ್ನಲ್ಲಿ 1 ರನ್ನಿಂದ ಆರ್ಸಿಬಿ ಆ ಪಂದ್ಯವನ್ನು ಗೆದ್ದುಕೊಂಡಿತ್ತು. ಈ ಎರಡು ಪಂದ್ಯಗಳ ಫಲಿತಾಂಶವನ್ನು ಮತ್ತು ಆರ್ಸಿಬಿ ತಂಡದ ಇಂದಿನ ಬ್ಯಾಟಿಂಗ್ ಅನ್ನು ಹೋಲಿಸಿದರೆ, ಆರ್ಸಿಬಿ ಎಡವಿದೆಲ್ಲಿ ಎಂಬುದರ ಸ್ಪಷ್ಟ ಚಿತ್ರಣ ಸಿಗುತ್ತೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.