RR vs RCB Qualifier 2: ಕ್ವಾಲಿಫೈಯರ್ ಪಂದ್ಯದಲ್ಲಿ ಕೈಕೊಡುವ ಕೊಹ್ಲಿ..!
IPL 2022 Qualifier 2: ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ಆರ್‌ಸಿಬಿ ಆರಂಭಿಕರು ಕೇವಲ ಒಂದು ಬಾರಿ ಮಾತ್ರ 100 ರನ್ಗಳ ಜೊತೆಯಾಟವಾಡಿದ್ದಾರೆ. ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಕೂಡ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ವಿಫಲರಾಗಿದ್ದರು.
ಐಪಿಎಲ್ನ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಗುಜರಾತ್ ಟೈಟಾನ್ಸ್ ವಿರುದ್ದ ಫೈನಲ್ ಪಂದ್ಯವಾಡಲಿದೆ. ಆದರೆ ಈ ಪಂದ್ಯದಲ್ಲಿ ಗೆಲ್ಲಬೇಕಿದ್ದರೆ ಆರ್‌ಸಿಬಿ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಬೇಕಿದೆ. ಅದರಲ್ಲೂ ಆರಂಭಿಕರು ಮಿಂಚಲೇಬೇಕು. ಏಕೆಂದರೆ ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ಆರ್‌ಸಿಬಿ ಆರಂಭಿಕರು ಕೇವಲ ಒಂದು ಬಾರಿ ಮಾತ್ರ 100 ರನ್ಗಳ ಜೊತೆಯಾಟವಾಡಿದ್ದಾರೆ. ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಕೂಡ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ವಿಫಲರಾಗಿದ್ದರು. ಆದರೆ ನಿರ್ಣಾಯಕ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ವಿಫಲರಾಗುತ್ತಿರುವುದು ಇದೇ ಮೊದಲೇನಲ್ಲ. ಅದರಲ್ಲೂ ವಿರಾಟ್ ಕೊಹ್ಲಿ 2 ಬಾರಿ ಕ್ವಾಲಿಫೈಯರ್ 2 ಪಂದ್ಯವಾಡಿದ್ದಾರೆ. ಈ ವೇಳೆ ಕೂಡ ಒತ್ತಡವನ್ನು ಮೀರಿ ಬ್ಯಾಟ್ ಬೀಸಲು ಸಾಧ್ಯವಾಗಿರಲಿಲ್ಲ.
IPL 2011 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಬಾರಿಗೆ ಕ್ವಾಲಿಫೈಯರ್ 2 ತಲುಪಿತು. 27 ಮೇ 2011 ರಂದು, ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 4 ವಿಕೆಟ್‌ಗೆ 185 ರನ್ ಗಳಿಸಿತು. ಈ ಪಂದ್ಯದಲ್ಲಿ ಆರ್‌ಸಿಬಿ ಬೃಹತ್ ಮೊತ್ತ ಪೇರಿಸಿದರೂ, ವಿರಾಟ್ ಕೊಹ್ಲಿ ವಿಫಲರಾಗಿದ್ದರು. ಕೊಹ್ಲಿ 12 ಎಸೆತಗಳಲ್ಲಿ ಕೇವಲ 8 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಈ ಪಂದ್ಯವನ್ನು ಆರ್‌ಸಿಬಿ 43 ರನ್‌ಗಳಿಂದ ಗೆದ್ದುಕೊಂಡಿತು. ಜಾಹೀರಾತು
ಇನ್ನು 2015 ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ಕ್ವಾಲಿಫೈಯರ್ 2 ಪಂದ್ಯವಾಡಿತು. 22 ಮೇ 2015 ರಂದು ನಡೆದ ಈ ಪಂದ್ಯದಲ್ಲಿ RCB ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 8 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಈ ಕ್ವಾಲಿಫೈಯರ್-2 ಪಂದ್ಯದಲ್ಲೂ ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದ್ದರು. ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಕೊಹ್ಲಿ 9 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿ ಔಟಾಗಿದ್ದರು. ಅಂದು ಆರ್‌ಸಿಬಿ ತಂಡದ ಬ್ಯಾಟ್ಸ್ಮನ್ಗಳ ವೈಫಲ್ಯದಿಂದಾಗಿ ಫೈನಲ್ ಅವಕಾಶ ಕೈತಪ್ಪಿತು.
ಇದೀಗ ಮೂರನೇ ಬಾರಿಗೆ ಕ್ವಾಲಿಫೈಯರ್ 2 ಪಂದ್ಯವಾಡುತ್ತಿರುವ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ನಲ್ಲಿಲ್ಲ. ಇತ್ತ ಆರ್‌ಸಿಬಿ ತಂಡದ ಇಬ್ಬರು ಆರಂಭಿಕರು ಸತತವಾಗಿ ವಿಫಲರಾಗುತ್ತಿದ್ದಾರೆ. ಇದಾಗ್ಯೂ ಕಳೆದ ಪಂದ್ಯದಲ್ಲಿ ರಜತ್ ಪಾಟಿದಾರ್ ತಂಡಕ್ಕೆ ಆಸರೆಯಾಗಿದ್ದರು. ಆದರೆ ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರುವ ರಾಜಸ್ಥಾನ್ ರಾಯಲ್ಸ್ ವಿರುದ್ದ ಗೆಲ್ಲಬೇಕಿದ್ರೆ ಆರ್‌ಸಿಬಿ ಬೃಹತ್ ಮೊತ್ತವನ್ನು ಪೇರಿಸಲೇಬೇಕು. ಇತ್ತ 15 ಪಂದ್ಯಗಳಲ್ಲಿ 334 ರನ್ ಗಳಿಸಿರುವ ವಿರಾಟ್ ಕೊಹ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಅಬ್ಬರಿಸಲಿದ್ದಾರಾ ಕಾದು ನೋಡಬೇಕಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:33 pm, Fri, 27 May 22