ಐಪಿಎಲ್ 2022 (IPL 2022) ಟೂರ್ನಿ ಹತ್ತಿರವಾಗುತ್ತಿದ್ದಂತೆ ಎಲ್ಲ ಆಟಗಾರರು ಒಬ್ಬೊಬ್ಬರಾಗಿ ಫ್ರಾಂಚೈಸಿ ಸೇರಿಕೊಳ್ಳುತ್ತಿದ್ದಾರೆ. ಬಯೋ ಬಬಲ್ನಿಂದ ನೇರವಾಗಿ ಆಗಮಿಸುವ ಆಟಗಾರರಿಗೆ ಎರಡು ದಿನಗಳ ಕ್ವಾರಂಟೈನ್ ನಿಯಮವಿದ್ದರೆ, ಹೊಸದಾಗಿ ತಂಡ ಸೇರಿಕೊಳ್ಳುವ ಪ್ಲೇಯರ್ಸ್ ಕಡ್ಡಾಯ ಒಂದು ವಾರಗಳ ಕ್ವಾರಂಟೈನ್ನಲ್ಲಿ ಇರಬೇಕಾಗಿದೆ. ಇದೀಗ ಟೂರ್ನಿ ಆರಂಭಕ್ಕೆ ಒಂದು ವಾರ ಇರುವಾಗ ದಿಢೀರ್ ಎಂದು ವಿದೇಶಿ ಆಟಗಾರರು ಭಾರತಕ್ಕೆ ಆಗಮನಿಸುತ್ತಿದ್ದಾರೆ. ಇದರಲ್ಲಿ ಅಚ್ಚರಿ ಎಂಬಂತೆ ಕಳೆದ ಐದು ತಿಂಗಳುಗಳಿಂದ ಫಿಟ್ನೆಸ್ ತೊಂದರೆ ಅನುಭವಿಸಿ ತನ್ನ ರಾಷ್ಟ್ರೀಯ ತಂಡದಿಂದ ಹೊರಬಿದ್ದ ಆಟಗಾರ ಇದೀಗ ಐಪಿಎಲ್ಗಾಗಿ ಭಾರತಕ್ಕೆ ಕಾಲಿಟ್ಟಿದ್ದಾರೆ. ಹೌದು, ದಕ್ಷಿಣ ಆಫ್ರಿಕಾದ ಮಾರಕ ವೇಗಿ ಅನ್ರಿಚ್ ನಾರ್ಟ್ಜೆ (Anrich Nortje) 15ನೇ ಆವೃತ್ತಿಯ ಐಪಿಎಲ್ಗಾಗಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಸೇರಿಕೊಳ್ಳಲು ಮುಂಬೈಗೆ ತಲುಪಿದ್ದಾರೆ. ಐಪಿಎಲ್ನಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗಿದ್ದ ಅನ್ರಿಚ್ ಇದೀಗ ದಿಢೀರ್ ಆಗಿ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.
ಅನ್ರಿಚ್ ನಾರ್ಟ್ಜೆ ಅವರು ಕಳೆದ ಭಾರತ ವಿರುದ್ಧದ ಪ್ರವಾಸಕ್ಕೂ ಮುನ್ನ ಇಂಜುರಿಗೆ ತುತ್ತಾದರು. ಸೊಂಟದ ಗಾಯದಿಂದಾಗಿ ಅವರು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಆಗಿರಲಿಲ್ಲ. ಅಲ್ಲದೆ ಸದ್ಯ ಸಾಗುತ್ತಿರುವ ಬಾಂಗ್ಲಾದೇಶ ವಿರುದ್ಧದ ಸರಣಿಯಿಂದಲೂ ಹೊರಗುಳಿದಿದ್ದಾರೆ. ಹೀಗೆ ಕಳೆದ ಐದು ತಿಂಗಳುಗಳಿಂದ ಕ್ರಿಕೆಟ್ ಅಂಗಳಕ್ಕೆ ಕಾಲಿಡದ ನಾರ್ಟ್ಜೆ ಇದೀಗ ಐಪಿಎಲ್ಗಾಗಿ ಭಾರತಕ್ಕೆ ಆಗಮಿಸಿದ್ದು ಅಚ್ಚರಿ ಮೂಡಿಸಿದೆ. ಇತ್ತ ಡೆಲ್ಲಿ ತಂಡಕ್ಕೆ ಇವರ ಕಮ್ಬ್ಯಾಕ್ ಆನೆಬಲ ಬಂದಂತಾಗಿದೆ.
ಮೆಗಾ ಹರಾಜಿಗೂ ಮುನ್ನ ಡೆಲ್ಲಿ ಫ್ರಾಂಚೈಸಿ ಇವರನ್ನು 6.5 ಕೋಟಿ ರೂ. ಗೆ ತನ್ನಲ್ಲೇ ಉಳಿಸಿಕೊಂಡಿತ್ತು. ಯಾಕೆಂದರೆ ಅನ್ರಿಚ್ ನಾರ್ಟ್ಜೆ ಕಳೆದ ವರ್ಷ ಅಮೋಘ ಪ್ರದರ್ಶನ ನೀಡಿದ್ದರು ಮತ್ತು ತಂಡದ ಯಶಸ್ಸಿನಲ್ಲಿ ಪ್ರಮುಖ ಅಂಶವಾಗಿದ್ದರು. ಆದರೆ ಈ ಋತುವಿನಲ್ಲಿ ಅವರು ಇಂಜುರಿಯಿಂದಾಗಿ ಆಡುವುದಿಲ್ಲ. ಡೆಲ್ಲಿ ಈಗ ಹೊಸ ವೇಗಿಯನ್ನು ಹುಡುಕುವತ್ತ ಗಮನ ಹರಿಸುತ್ತಿದೆ ಎಂದು ವರದಿಯಾಗಿತ್ತು. ಆದರೀಗ ಅನ್ರಿಚ್ ಅವರು ಶಾರ್ದೂಲ್ ಠಾಕೂರ್ ಮತ್ತು ಖಲೀಲ್ ಅಹ್ಮದ್ ಜೊತೆ ಬೆಂಕಿಯ ಚೆಂಡು ಉಗುಳಲು ತಯಾರಾಗಿದ್ದಾರೆ.
ರಾಷ್ಟ್ರೀಯ ತಂಡದಿಂದ 5 ಆಟಗಾರರು ಔಟ್:
ಬಾಂಗ್ಲಾದೇಶ ವಿರುದ್ಧ ಮಾರ್ಚ್ 31ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟವಾಗಿದ್ದು ಐಪಿಎಲ್ನಲ್ಲಿ ಆಡಲಿರುವ ಆಟಗಾರರನ್ನು ಕೈಬಿಡಲಾಗಿದೆ. ಹರಿಣಗಳ ತಂಡದ ಪ್ರಮುಖ ವೇಗದ ಬೌಲರ್ ಗಳಾದ ಕಗಿಸೋ ರಬಾಡ, ಲುಂಗಿ ಎನ್ ಗಿಡಿ ಮತ್ತು ಮಾಕ್ರೋ ಜೆನ್ಸನ್ ಗೆ ಟೆಸ್ಟ್ ತಂಡದಲ್ಲಿ ಜಾಗ ನೀಡಲಾಗಿಲ್ಲ. ಐಪಿಎಲ್ ನಲ್ಲಿ ಆಡುವ ಆ್ಯಡನ್ ಮಾಕ್ರಮ್ ಮತ್ತು ರಸ್ಸಿ ವ್ಯಾನ್ ಡರ್ ಡ್ಯುಸನ್ ಕೂಡಾ ಬಾಂಗ್ಲಾ ಸರಣಿಗೆ ಆಯ್ಕೆಯಾಗಿಲ್ಲ. ಐಪಿಎಲ್ ನಲ್ಲಿ ಆಡಬೇಕೆ ಅಥವಾ ದೇಶದ ಸರಣಿಯಲ್ಲಿ ಆಡಬೇಕೆ ಎಂಬ ನಿರ್ಧಾರವನ್ನು ಆಟಗಾರರಿಗೆ ಬಿಡಲಾಗಿತ್ತು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಹೇಳಿದೆ.
ಸಿಎಸ್ಕೆಗೆ ಡಬಲ್ ಶಾಕ್:
ಐಪಿಎಲ್ 2022 ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ಕಿಂಗ್ಸ್ಗೆ ಡಬಲ್ ಶಾಕ್ ಉಂಟಾಗಿದೆ. ತಂಡದ ಇಬ್ಬರು ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಇನ್ನೂ ಹೊರಬಂದಿಲ್ಲ. 6 ಕೋಟಿ ರೂ.ಗೆ ರಿಟೇನ್ ಆಗಿದ್ದ ಆರಂಭಿಕ ಋತುರಾಜ್ ಗಾಯಕ್ವಾಡ್ ಜತೆಗೆ ಮೆಗಾ ಹರಾಜಿನಲ್ಲಿ ಬರೋಬ್ಬರಿ 14 ಕೋಟಿ ರೂ. ಗೆ ತಂಡಕ್ಕೆ ಮರಳಿರುವ ಆಲ್ರೌಂಡರ್ ದೀಪಕ್ ಚಹರ್ ಫಿಟ್ನೆಸ್ ಕೂಡ ತಲೆನೋವು ತಂದಿದೆ. ಕೈ ನೋವಿನಿಂದ ಬಳಲುತ್ತಿದ್ದ ಋತುರಾಜ್ ಸಿಎಸ್ಕೆ ಶಿಬಿರ ಕೂಡಿಕೊಂಡಿದ್ದರೂ, ಆರಂಭಿಕ ಕೆಲ ಪಂದ್ಯಕ್ಕೆ ಅಲಭ್ಯರಾಗುವ ಭೀತಿ ಇದೆ. ಇದರ ನಡುವೆ ಗಂಭೀರವಾದ ಸ್ನಾಯು ಸೆಳೆತದಿಂದ ಬಳಲುತ್ತಿರುವ ದೀಪಕ್ ಚಹರ್ ಇನ್ನೂ ತಂಡ ಸೇರಿಕೊಂಡಿಲ್ಲ ಹೀಗಾಗಿ ಟೂರ್ನಿಯಿಂದಲೇ ಹೊರಬಿದ್ದರೆ ಧೋನಿ ಪಡೆಗೆ ದೊಡ್ಡ ಹಿನ್ನಡೆಯಾಗಲಿದೆ.
Virat Kohli: ಕೊಹ್ಲಿ ಅಲ್ಲ: ಆರ್ಸಿಬಿ ಪರ ಫಾಫ್ ಡುಪ್ಲೆಸಿಸ್ ಜೊತೆ ಇನ್ನಿಂಗ್ಸ್ ಆರಂಭಿಸುವುದು ಯಾರು ಗೊತ್ತೇ?
Lakshya Sen: ಫೈನಲ್ ಹಾದಿ ಸುಗಮವಾಗಿರಲಿಲ್ಲ; ಒಲಂಪಿಕ್, ವಿಶ್ವ ಚಾಂಪಿಯನ್ಗಳಿಗೆ ಮಣ್ಣು ಮುಕ್ಕಿಸಿದ ಲಕ್ಷ್ಯ ಸೇನ್!