IPL 2022: ಈಗಲೂ ಮುಂಬೈ, ಸಿಎಸ್ಕೆ ಬಲಿಷ್ಠ: ಮರುಕಳಿಸಲಿದೆಯಾ ಇತಿಹಾಸ?
IPL 2022: ಉಭಯ ತಂಡಗಳು ಸತತ ಸೋಲುಗಳನ್ನು ಕಂಡಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸೋಲನುಭವಿಸಿ ಗೆಲುವನ್ನು ಎದುರು ನೋಡುತ್ತಿದೆ.
IPL 2022: ಐಪಿಎಲ್ ಸೀಸನ್ 15 ನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ನಿರೀಕ್ಷಿತ ಆರಂಭ ಪಡೆದಿಲ್ಲ. ಮೊದಲ ಪಂದ್ಯದಲ್ಲೇ ಕೆಕೆಆರ್ ವಿರುದ್ದ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ್ದ ಯೆಲ್ಲೊ ಪಡೆ, ಆ ಬಳಿಕ ಹ್ಯಾಟ್ರಿಕ್ ಸೋಲಿನ ರುಚಿ ನೋಡಬೇಕಾಯಿತು. ಮತ್ತೊಂದೆಡೆ ಐಪಿಎಲ್ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಕಥೆ ಕೂಡ ಭಿನ್ನವಾಗಿಲ್ಲ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಪರಾಜಯಗೊಳ್ಳುವ ಮೂಲಕ ನಿರಾಸೆ ಮೂಡಿಸಿದೆ. ಇದಾಗ್ಯೂ ಈ ಎರಡು ತಂಡಗಳು ಈಗಲೂ ಈ ಬಾರಿಯ ಐಪಿಎಲ್ನಲ್ಲಿ ಪ್ರಶಸ್ತಿ ಗೆಲ್ಲುವ ತಂಡವಾಗಿ ಗುರುತಿಸಿಕೊಂಡಿದೆ ಎಂದರೆ ನಂಬಲೇಬೇಕು. ಏಕೆಂದರೆ ಇಂತಹ ಸೋಲುಗಳು ಈ ಎರಡು ತಂಡಗಳಿಗೆ ಹೊಸದೇನಲ್ಲ. ಈ ಹಿಂದೆಯೂ ಕೂಡ ಸತತ ಸೋಲುಗಳಿಂದ ಕಂಗೆಟ್ಟು ಆ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿದ ಇತಿಹಾಸ ಈ ತಂಡಗಳ ಹೆಸರಿನ್ಲಲಿದೆ. ಹೀಗಾಗಿ ಇತಿಹಾಸ ಪುನರಾವರ್ತನೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. ಏಕೆಂದರೆ…
2010 ರಲ್ಲಿ ಸಿಎಸ್ಕೆ ತಂಡವು ಸತತ ನಾಲ್ಕು ಪಂದ್ಯಗಳನ್ನು ಸೋತು ಗೆಲುವಿನ ಟ್ರ್ಯಾಕ್ಗೆ ಮರಳಿತ್ತು. ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್, 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, 3ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಂದು ಸಿಎಸ್ಕೆ ಹೀನಾಯವಾಗಿ ಸೋಲನುಭವಿಸಿತ್ತು. ಅಷ್ಟೇ ಅಲ್ಲದೆ ಮೊದಲಾರ್ಧದ 7 ಪಂದ್ಯಗಳಲ್ಲಿ ಕೇವಲ ಎರಡು ಜಯ ಸಾಧಿಸಿತ್ತು. ಆದರೆ ದ್ವಿತಿಯಾರ್ಧದಲ್ಲಿ ಭರ್ಜರಿ ಕಂಬ್ಯಾಕ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿ ಪ್ಲೇಆಫ್ ಪ್ರವೇಶಿಸಿತ್ತು. ಅಷ್ಟೇ ಅಲ್ಲದೆ ಫೈನಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 22 ರನ್ಗಳಿಂದ ಸೋಲಿಸಿ ಸಿಎಸ್ಕೆ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು.
ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಂಡದ ಇತಿಹಾಸ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. 2015 ರ ಐಪಿಎಲ್ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮೊದಲ ನಾಲ್ಕು ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಸೋಲಿಸಿತ್ತು. ಈ ಸತತ ಸೋಲುಗಳ ಬಳಿಕ ಕಂಬ್ಯಾಕ್ ಮಾಡಿದ್ದ ಮುಂಬೈ ಆ ನಂತರ ಒಂದರ ಹಿಂದೆ ಒಂದರಂತೆ ಗೆಲುವು ದಾಖಲಿಸಿ ಪ್ಲೇಆಫ್ಗೆ ಅರ್ಹತೆ ಪಡೆದಿತ್ತು. ಪ್ಲೇಆಫ್ನಿಂದ ಫೈನಲ್ಗೂ ಎಂಟ್ರಿ ಕೊಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡವು ಸಿಎಸ್ಕೆ ತಂಡವನ್ನು ಬಗ್ಗು ಬಡಿಯುವ ಮೂಲಕ ಟ್ರೋಫಿಯನ್ನು ಮುಡಿಗೇರಿಸಿ ಹೊಸ ಇತಿಹಾಸ ಬರೆದಿತ್ತು.
ಇದೀಗ ಉಭಯ ತಂಡಗಳು ಸತತ ಸೋಲುಗಳನ್ನು ಕಂಡಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸೋಲನುಭವಿಸಿ ಗೆಲುವನ್ನು ಎದುರು ನೋಡುತ್ತಿದೆ. ಮತ್ತೊಂದೆಡೆ ನಾಲ್ಕು ಸೋಲುಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಆರ್ಸಿಬಿ ವಿರುದ್ದ ಜಯ ಸಾಧಿಸುವ ಮೂಲಕ ಗೆಲುವಿನ ಖಾತೆ ತೆರೆದಿದೆ. ಹೀಗಾಗಿ ಈ ತಂಡಗಳು ಕಂಬ್ಯಾಕ್ ಮಾಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಅದರಂತೆ ಸಿಎಸ್ಕೆ ತಂಡವು 2010 ರ ಹಾಗೂ ಮುಂಬೈ ಇಂಡಿಯನ್ಸ್ ತಂಡವು 2015 ರ ಇತಿಹಾಸವನ್ನು ಪುನರಾವರ್ತಿಸಲಿದೆಯಾ ಕಾದು ನೋಡಬೇಕಿದೆ.
ಚೆನ್ನೈ ಸೂಪರ್ ಕಿಂಗ್ಸ್ (CSK): ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ, ರುತುರಾಜ್ ಗಾಯಕ್‌ವಾಡ್, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ದೀಪಕ್ ಚಹರ್, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಎನ್ ಜಗದೀಶನ್, ಹರಿ ನಿಶಾಂತ್, ಸುಭ್ರಂಶು ಸೇನಾಪತಿ , ರಾಜವರ್ಧನ್ ಹಂಗರ್ಗೇಕರ್, ಭಗತ್ ವರ್ಮಾ, ಪ್ರಶಾಂತ್ ಸೋಲಂಕಿ, ಕ್ರಿಸ್ ಜೋರ್ಡನ್, ಡ್ವೈನ್ ಪ್ರಿಟೋರಿಯಸ್, ಡೆವೊನ್ ಕಾನ್ವೇ, ಆಡಮ್ ಮಿಲ್ನೆ, ಮಿಚೆಲ್ ಸ್ಯಾಂಟ್ನರ್.
ಮುಂಬೈ ಇಂಡಿಯನ್ಸ್ (MI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಕೀರಾನ್ ಪೊಲಾರ್ಡ್, ಜಸ್ಪ್ರೀತ್ ಬುಮ್ರಾ, ಮುರುಗನ್ ಅಶ್ವಿನ್, ಬಾಸಿಲ್ ಥಂಪಿ, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಂಡೆ, ಸಂಜಯ್ ಯಾದವ್, ರಮಣ್‌ದೀಪ್ ಸಿಂಗ್, ಆರ್ಯನ್ ಜುಯಲ್, ಅರ್ಜುನ್ ತೆಂಡೂಲ್ಕರ್, ತಿಲಕ್ ವರ್ಮಾ, ರಾಹುಲ್ ಬುಮ್ರಾ, ಹೃತಿಕ್ ಶೋಕೀನ್ , ಅರ್ಷದ್ ಖಾನ್, ಟೈಮಲ್ ಮಿಲ್ಸ್, ಜೋಫ್ರಾ ಆರ್ಚರ್, ಫ್ಯಾಬಿಯನ್ ಅಲೆನ್, ಡೇನಿಯಲ್ ಸ್ಯಾಮ್ಸ್, ಅನ್ಮೋಲ್ಪ್ರೀತ್ ಸಿಂಗ್, ಟಿಮ್ ಡೇವಿಡ್, ರಿಲೆ ಮೆರೆಡಿತ್.
ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?
Published On - 3:29 pm, Wed, 13 April 22