ಇಂಡಿಯನ್ ಪ್ರೀಮಿಯರ್ ಲೀಗ್ (IPL 2022 Mega Auction) ಮೆಗಾ ಹರಾಜಿಗೂ ಮುನ್ನ ಸನ್ರೈಸರ್ಸ್ ಹೈದರಾಬಾದ್ (SRH) ತಂಡವು ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅದರಲ್ಲಿ ಮೊದಲ ಆಟಗಾರನಾಗಿ ನಾಯಕ ಕೇನ್ ವಿಲಿಯಮ್ಸನ್ (Kane Williamson) ಅವರನ್ನು ಆಯ್ಕೆ ಮಾಡಿಕೊಂಡಿದ್ದರೆ, ಇನ್ನಿಬ್ಬರು ಅನ್ಕ್ಯಾಪ್ಡ್ ಪ್ಲೇಯರ್ಸ್ ಎಂಬುದು ವಿಶೇಷ. ಹೌದು, ಎಸ್ಆರ್ಹೆಚ್ ಉಳಿಸಿಕೊಂಡ ಉಮ್ರಾನ್ ಮಲಿಕ್ ಹಾಗೂ ಅಬ್ದುಲ್ ಸಮದ್ ಇದುವರೆಗೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ. ಇದಾಗ್ಯೂ ಸನ್ರೈಸರ್ಸ್ ಹೈದರಾಬಾದ್ 8 ಕೋಟಿ ವ್ಯಯಿಸಿ ಈ ಇಬ್ಬರನ್ನು ರಿಟೈನ್ ಮಾಡಿ ಅಚ್ಚರಿ ಮೂಡಿಸಿದೆ. ಆದರೆ ಮತ್ತೊಂದೆಡೆ ಕೈ ಬಿಟ್ಟಿರುವುದು ಐಪಿಎಲ್ನ ಬೆಸ್ಟ್ ಸ್ಪಿನ್ನರ್ ರಶೀದ್ ಖಾನ್ (Rashid Khan) ಅವರನ್ನು ಎಂಬುದು ವಿಶೇಷ. ಕಳೆದ 5 ಸೀಸನ್ಗಳಲ್ಲಿ ಎಸ್ಆರ್ಹೆಚ್ ಪರ ಆಡಿದ್ದ ರಶೀದ್ ಖಾನ್ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯರಾಗಿದ್ದರು. ಇದಾಗ್ಯೂ ಅವರನ್ನೇಕೆ ಉಳಿಸಿಕೊಂಡಿಲ್ಲ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶವಿದ್ದರೂ ಎಸ್ಆರ್ಹೆಚ್ ಮೂರು ಆಟಗಾರರನ್ನು ರಿಟೈನ್ ಮಾಡಿದೆ. ಅದು ಕೂಡ ಇಬ್ಬರು ಅನ್ಕ್ಯಾಪ್ಡ್ ಪ್ಲೇಯರ್ಸ್ನ ಆಯ್ಕೆ ಮಾಡುವ ಮೂಲಕ . ಇಲ್ಲಿ ಈ ಇಬ್ಬರು ಅನ್ಕ್ಯಾಪ್ಡ್ ಆಟಗಾರರಿಗೆ ನೀಡಲಾದ 8 ಕೋಟಿ ಮೊತ್ತದ ಜೊತೆಗೆ ಒಂದಷ್ಟು ಮೊತ್ತ ಸೇರಿಸಿ ರಶೀದ್ ಖಾನ್ ಅವರನ್ನು ಉಳಿಸಿಕೊಳ್ಳಬಹುದಿತ್ತಲ್ವಾ ಎಂಬ ಪ್ರಶ್ನೆಯೊಂದು ಸಹಜವಾಗಿಯೇ ಮೂಡುತ್ತೆ. ಆದರೆ ಇಲ್ಲಿ ರಶೀದ್ ಖಾನ್ ತಂಡದಿಂದ ಹೊರಬರಲು ಕೇವಲ ಸಂಭಾವನೆ ಒಂದೇ ಕಾರಣವಲ್ಲ ಎಂಬ ವಿಚಾರವೊಂದು ಬಹಿರಂಗವಾಗಿದೆ.
2017 ರಿಂದ ಸನ್ರೈಸರ್ಸ್ ಹೈದರಾಬಾದ್ ಪರ ಮಾತ್ರ ಆಡಿರುವ ರಶೀದ್ ಖಾನ್ ಕಳೆದ 5 ವರ್ಷಗಳಲ್ಲಿ ಪಡೆದ ಸಂಭಾವನೆ ಕೇವಲ 40 ಕೋಟಿ ಮಾತ್ರ. ಅಂದರೆ ಒಂದು ಸೀಸನ್ ಲೆಕ್ಕ ತೆಗೆದುಕೊಂಡರೆ 8 ಕೋಟಿ ರೂ. ಇದಾಗ್ಯೂ ಅವರು ಕಳೆದ 5 ವರ್ಷದೊಳಗೆ ತಂಡದಿಂದ ಹೊರಬರುವ ನಿರ್ಧಾರ ಮಾಡಿರಲಿಲ್ಲ. ಅದರಲ್ಲೂ ಮೊದಲ ಸೀಸನ್ನಲ್ಲಿ ರಶೀದ್ ಖಾನ್ ಕೇವಲ 4 ಕೋಟಿ ರೂ. ಮಾತ್ರ ಪಡೆದಿದ್ದರು. 2018 ರಲ್ಲಿ 9 ಕೋಟಿ ನೀಡಿ ಅವರನ್ನು ಉಳಿಸಿಕೊಳ್ಳಲಾಗಿತ್ತು. ಆದರೆ ಕಳೆದೆರೆಡು ಸೀಸನ್ಗಳಿಂದ ಐಪಿಎಲ್ನಲ್ಲಿ ದೊಡ್ಡ ಮೊತ್ತದ ಬಿಡ್ಡಿಂಗ್ ನಡೆಯುತ್ತಿದೆ. ಇಲ್ಲಿ ಸ್ಟಾರ್ ಆಟಗಾರ ಎನಿಸಿಕೊಂಡಿರುವ ರಶೀದ್ ಖಾನ್ ಪಡೆಯುತ್ತಿರುವ ಸಂಭಾವನೆಗಿಂತ ಹೊಸ ಆಟಗಾರರು ಹೆಚ್ಚಿನ ಮೊತ್ತ ಪಡೆದಿದ್ದಾರೆ.
ಇದಾಗ್ಯೂ ಈ ಬಾರಿ ಕೂಡ ಎಸ್ಆರ್ಹೆಚ್ ಪರ ಆಡುವ ಬಯಕೆಯನ್ನು ರಶೀದ್ ಖಾನ್ ಹೊಂದಿದ್ದರು. ಹೀಗಾಗಿಯೇ ಈ ಸಲ ಹೆಚ್ಚಿನ ಸಂಭಾವನೆಯ ಬೇಡಿಕೆಯಿಟ್ಟಿದ್ದಾರೆ. ಆದರೆ ಸನ್ರೈಸರ್ಸ್ ಹೈದರಾಬಾದ್ ರಶೀದ್ ಖಾನ್ ಅವರನ್ನು ಮೊದಲ ಆಯ್ಕೆಯಾಗಿ ಉಳಿಸಿಕೊಳ್ಳಲು ಬಯಸಿಲ್ಲ. ಬದಲಾಗಿ ಕೇನ್ ವಿಲಿಯಮ್ಸನ್ ಅವರಿಗೆ 14 ಕೋಟಿ ಹಾಗೂ ರಶೀದ್ ಖಾನ್ಗೆ 12 ಕೋಟಿ ನೀಡುವುದಾಗಿ ತಿಳಿಸಿದ್ದರು. ಇತ್ತ 2018 ರಿಂದ 9 ಕೋಟಿಯೊಂದಿಗೆ ಎಸ್ಆರ್ಹೆಚ್ ಪರ ಆಡುತ್ತಿರುವ ರಶೀದ್ ಖಾನ್ಗೆ ಮೂರು ವರ್ಷಗಳಲ್ಲಿ ಕೇವಲ 3 ಕೋಟಿ ಮಾತ್ರ ಜಾಸ್ತಿ ಮಾಡಿದ್ದಾರೆ. ಈ ಆಫರ್ ಅನ್ನು ಕೂಡ ರಶೀದ್ ಖಾನ್ ಒಪ್ಪಲು ಮುಂದಾಗಿದ್ದರು ಎಂದು ಹೇಳಲಾಗುತ್ತಿದೆ.
ಆದರೆ ಕಳೆದ 5 ವರ್ಷಗಳಲ್ಲಿ ತಂಡದಲ್ಲಿದ್ದ ಪ್ರಮುಖ ಆಟಗಾರರು ಹೊರಬಿದ್ದಿದ್ದರಿಂದ ರಶೀದ್ ಖಾನ್ ಕೂಡ ರಿಟೈನ್ ವಿಷಯದಿಂದ ಹಿಂದೆ ಸರಿದಿದ್ದಾರೆ ಎಂದು ಕೆಲ ಮೂಲಗಳು ಹೇಳುತ್ತಿವೆ. ಅಂದರೆ ಸನ್ರೈಸರ್ಸ್ ಹೈದರಾಬಾದ್ ತಂಡದಿಂದ ಈ ಸಲ ಡೇವಿಡ್ ವಾರ್ನರ್, ಮನೀಷ್ ಪಾಂಡೆಯಂತಹ ಸ್ಟಾರ್ ಆಟಗಾರರು ಹೊರಬಿದ್ದಿದ್ದಾರೆ. ಅತ್ತ ಎಸ್ಆರ್ಹೆಚ್ ಕೂಡ ಹೊಸ ತಂಡ ಕಟ್ಟುವ ಇರಾದೆಯಲ್ಲಿದೆ. ಹೀಗಾಗಿ ರಶೀದ್ ಖಾನ್ ಕೂಡ ತಂಡದಿಂದ ಹೊರಬರಲು ನಿರ್ಧರಿಸಿದ್ದರು ಎಂದು ಹೇಳಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ರಶೀದ್ ಖಾನ್ ಅವರ ನಿಕಟ ಮೂಲಗಳು, ರಶೀದ್ ಖಾನ್ಗೆ 12 ಕೋಟಿ ನೀಡುವ ಬಗ್ಗೆ ಆಫರ್ ನೀಡಿರುವುದು ನಿಜ. ಆದರೆ ಅವರು ಹರಾಜಿನಲ್ಲಿ 3-4 ಕೋಟಿ ಹೆಚ್ಚು ಪಡೆಯಬಹುದು. ಇದಾಗ್ಯೂ ಕೇವಲ ಹಣಕ್ಕಾಗಿ ಯಾರಾದರೂ ಐದು ವರ್ಷಗಳ ಒಡನಾಟವನ್ನು ಮುರಿಯಲ್ಲ. ರಶೀದ್ ತುಂಬಾ ಭಾವನಾತ್ಮಕ ವ್ಯಕ್ತಿ ಮತ್ತು ವಿನಮ್ರ ಹಿನ್ನೆಲೆಯಿಂದ ಬಂದವರು. ಅವರು ಕೇವಲ ಹಣಕ್ಕಾಗಿ ಕ್ರಿಕೆಟ್ ಆಡುತ್ತಿಲ್ಲ. ಅವರು ಆಡುವ ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲಲು ಬಯಸುತ್ತಾರೆ. ಆದರೆ ಹೊಸ ತಂಡ, ಹೊಸ ಕಾರ್ಯತಂತ್ರ, ತಾಜಾ ವಾತಾವರಣವನ್ನು ಕೂಡ ಅವರು ಬಯಸಿದ್ದರು ತಿಳಿಸಿದ್ದಾರೆ.
ಇತ್ತ ಕಳೆದ ಸೀಸನ್ನಿಂದ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಡೇವಿಡ್ ವಾರ್ನರ್ ಅವರನ್ನು ನಡೆಸಿಕೊಂಡ ರೀತಿಯಿಂದಲೇ ಬಹಿರಂಗವಾಗಿದೆ. ಇದೀಗ ಎಸ್ಆರ್ಹೆಚ್ ತಂಡದಲ್ಲಿ ಹೊಂದಾಣಿಕೆಯ ವಾತಾವರಣ ಇಲ್ಲದ ಕಾರಣ ರಶೀದ್ ಖಾನ್ ಕೂಡ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದ್ದಾರೆ ಎಂಬುದನ್ನು ಅವರ ಆಪ್ತ ಮೂಲಗಳು ಹೇಳಿಕೊಂಡಿವೆ. ಹೀಗಾಗಿ 5 ವರ್ಷಗಳ ಒಡನಾಟದ ಬಳಿಕ ಇದೇ ಮೊದಲ ಬಾರಿಗೆ ರಶೀದ್ ಖಾನ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದ್ದಾರೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಮೆಗಾ ಹರಾಜಿನಲ್ಲಿ ರಶೀದ್ ಖಾನ್ ಕಾಣಿಸಿಕೊಂಡರೆ ಖರೀದಿಗಾಗಿ ಎಲ್ಲಾ ಫ್ರಾಂಚೈಸಿಗಳ ನಡುವೆ ಭರ್ಜರಿ ಪೈಪೋಟಿ ಕಂಡು ಬರುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಮುಂದಿನ ಸೀಸನ್ನಲ್ಲಿ ರಶೀದ್ ಖಾನ್ ಯಾವ ತಂಡದ ಪರ ಆಡಲಿದ್ದಾರೆ ಎಂಬುದೇ ಕುತೂಹಲ.
ರಶೀದ್ ಖಾನ್ ಅಂಕಿ ಅಂಶಗಳು:
ಸನ್ರೈಸರ್ಸ್ ಹೈದರಾಬಾದ್ ಪರ 76 ಪಂದ್ಯಗಳನ್ನು ಆಡಿರುವ ರಶೀದ್ ಖಾನ್ 93 ವಿಕೆಟ್‌ಗಳನ್ನು ಪಡೆದಿದ್ದಾರೆ. 20 ಸರಾಸರಿಯಲ್ಲಿ ಎಂಬುದು ವಿಶೆಷ. ಅಷ್ಟೇ ಅಲ್ಲದೆ ಐಪಿಎಲ್ ಇತಿಹಾಸ ಅತ್ಯಂತ ಎಕಾನಮಿ ಬೌಲರ್ ಎಂಬ ದಾಖಲೆ ರಶೀದ್ ಖಾನ್ ಹೆಸರಿನಲ್ಲಿದೆ. 76 ಪಂದ್ಯಗಳಲ್ಲಿ ರಶೀದ್ ಖಾನ್ ಪ್ರತಿ ಓವರ್ನಲ್ಲಿ ನೀಡಿರುವುದು ಕೇವಲ 6.33 ರನ್ ಮಾತ್ರ. ಐಪಿಎಲ್ನಲ್ಲಿ ಇದುವರೆಗೆ ಯಾವುದೇ ಬೌಲರ್ ಇಷ್ಟೊಂದು ಕಡಿಮೆ ರನ್ ಬಿಟ್ಟುಕೊಟ್ಟಿಲ್ಲ ಎಂಬುದು ವಿಶೇಷ. ಹೀಗಾಗಿ ಅಫ್ಘಾನ್ ಲೆಗ್ ಸ್ಪಿನ್ನರ್ ಐಪಿಎಲ್ನ ಅತ್ಯುತ್ತಮ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: IPL 2022: ದುಡ್ಡಿಗಿಂತ RCB ತಂಡವೇ ಮುಖ್ಯ: ವಿರಾಟ್ ಕೊಹ್ಲಿಗೆ ಅಭಿಮಾನಿಗಳಿಂದ ಬಹುಪರಾಕ್
ಇದನ್ನೂ ಓದಿ: 8 ಫ್ರಾಂಚೈಸಿ ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ
ಇದನ್ನೂ ಓದಿ: 27 ಆಟಗಾರರು ರಿಟೈನ್: ಬಿಡುಗಡೆಯಾದ ಆಟಗಾರರ ಪಟ್ಟಿ ಇಲ್ಲಿದೆ
(IPL 2022: Why Rashid Khan bid goodbye to SRH?)