IPL 2023: ಆರ್ಸಿಬಿಗೆ ಆನೆ ಬಲ; 7 ಸಿಕ್ಸರ್, 8 ಬೌಂಡರಿ ಸಹಿತ 105 ರನ್ ಚಚ್ಚಿದ ಆರ್ಸಿಬಿ ಆಲ್‌ರೌಂಡರ್!
IPL 2023: ತಂಡದ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಆಲ್‌ರೌಂಡರ್ ಬ್ರೇಸ್‌ವೆಲ್ 55 ಎಸೆತಗಳಲ್ಲಿ ಅಜೇಯ 105 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರು.

ವಿಲ್ ಜಾಕ್ಸ್ (Will Jacks) ಇಂಜುರಿಯಿಂದಾಗಿ ಐಪಿಎಲ್ (IPL 2023) ಆರಂಭಕ್ಕೂ ಮುನ್ನವೇ ಹಿನ್ನಡೆ ಅನುಭವಿಸಿದ್ದ ಆರ್ಸಿಬಿಗೆ (RCB) ಅವರ ಬದಲಿಯಾಗಿ ಬಂದ ಆಟಗಾರನ ಸ್ಫೋಟಕ ಬ್ಯಾಟಿಂಗ್ ಕೊಂಚ ನಿರಾಳತೆ ತಂದಿದೆ. ವಾಸ್ತವವಾಗಿ ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಆರ್ಸಿಬಿ ಮಿನಿ ಹರಾಜಿನಲ್ಲಿ ಖರೀದಿಸಿದ್ದ ಸ್ಫೋಟಕ ಬ್ಯಾಟರ್ ವಿಲ್ ಜಾಕ್ಸ್ ಇಂಜುರಿಗೆ ತುತ್ತಾಗಿ ಇಡೀ ಐಪಿಎಲ್ನಿಂದ ಹೊರಗುಳಿದರು. ಹೀಗಾಗಿ ಫ್ರಾಂಚೈಸ್ ಅವರ ಬದಲಿಯಾಗಿ ನ್ಯೂಜಿಲೆಂಡ್ನ ಸ್ಫೋಟಕ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್ (Michael Bracewell) ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಇದೀಗ ಐಪಿಎಲ್ ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿಯೇ ಅಬ್ಬರಿಸಿರುವ ಈ ಕಿವೀಸ್ ಆಟಗಾರ ಕೇವಲ 55 ಎಸೆತಗಳಲ್ಲಿ ಬರೋಬ್ಬರಿ 105 ರನ್ ಚಚ್ಚಿ, ಆರ್ಸಿಬಿ ನಿಟ್ಟುಸಿರು ಬಿಡುವಂತೆ ಮಾಡಿದ್ದಾನೆ.
ಆರ್ಸಿಬಿಗೆ ಇನ್ನೊಂದು ಸಮಾಧಾನಕರ ಸುದ್ದಿಯೆಂದರೆ, ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು, ಕೇವಲ 46 ಎಸೆತಗಳಲ್ಲಿ 78 ರನ್‌ಗಳ ಇನಿಂಗ್ಸ್ ಆಡಿದ್ದಾರೆ. ನಾಯಕ ಫಾಫ್ ಡುಪ್ಲೆಸಿ ಕೂಡ ಫಾರ್ಮ್ಗೆ ಮರಳಿದ್ದು, 35 ಎಸೆತಗಳಲ್ಲಿ 47 ರನ್ ಗಳಿಸುವಲ್ಲಿ ಯಶಸ್ವಿಯಾದರು.
IPL 2023: ಇಬ್ಬರು ಗೈರು; ಐಪಿಎಲ್ ಟ್ರೋಫಿಯೊಂದಿಗೆ ಕಾಣಿಸಿಕೊಂಡ 8 ತಂಡದ ನಾಯಕರು
ಮೈಕೆಲ್ ಬ್ರೇಸ್‌ವೆಲ್ ಅಬ್ಬರ
ವಾಸ್ತವವಾಗಿ ಆರ್ಸಿಬಿ ಇದೇ ಭಾನುವಾರ ತನ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಹೀಗಾಗಿ ಆ ಪಂದ್ಯದ ಪೂರ್ವ ತಯಾರಿಯಾಗಿ ಗುರುವಾರ ರಾತ್ರಿ ಆರ್ಸಿಬಿ ಅಭ್ಯಾಸ ಪಂದ್ಯ ಆಡಿತ್ತು. ಇದರಲ್ಲಿ ಆರ್ಸಿಬಿ ಎರಡು ತಂಡಗಳನ್ನು ರಚಿಸಿತ್ತು. ಇದರಲ್ಲಿ ಒಂದು ತಂಡದ ನಾಯಕತ್ವವನ್ನು ಸುಯಶ್ ಪ್ರಭುದೇಸಾಯಿ ವಹಿಸಿದ್ದರೆ, ಇನ್ನೊಂದು ತಂಡವನ್ನು ಫಾಫ್ ಡುಪ್ಲೆಸೆ ಮುನ್ನಡೆಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸುಯಶ್ ನಾಯಕತ್ವದ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 217 ರನ್ ಕಲೆಹಾಕಿತು. ತಂಡದ ಪರ ಗ್ಲೆನ್ ಮ್ಯಾಕ್ಸ್‌ವೆಲ್ ಗರಿಷ್ಠ 78 ರನ್ ಗಳಿಸಿದರು. ಅವರ ಹೊರತಾಗಿ ಮಹಿಪಾಲ್ ಲೊಮ್ರೋರ್ 27 ಎಸೆತಗಳಲ್ಲಿ ಅಜೇಯ 48 ರನ್ ಗಳಿಸಿದರೆ, ಅನುಜ್ ರಾವತ್ 16 ಎಸೆತಗಳಲ್ಲಿ 32 ರನ್ ಬಾರಿಸಿದರು.
ಇದಾದ ಬಳಿಕ 218 ರನ್‌ಗಳ ಗುರಿ ಬೆನ್ನತ್ತಿದ ಫಾಫ್ ಡುಪ್ಲೆಸಿಸ್ ತಂಡ 5 ವಿಕೆಟ್ ಕಳೆದುಕೊಂಡು 215 ರನ್ ಗಳಿಸಲಷ್ಟೇ ಶಕ್ತವಾಗಿ ಕೇವಲ 2 ರನ್‌ಗಳಿಂದ ಸೋಲನುಭವಿಸಬೇಕಾಯಿತು. ಆದರೆ ತಂಡದ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಆಲ್‌ರೌಂಡರ್ ಬ್ರೇಸ್‌ವೆಲ್ 55 ಎಸೆತಗಳಲ್ಲಿ ಅಜೇಯ 105 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಬ್ರೇಸ್‌ವೆಲ್ ಅವರ ಅಬ್ಬರದ ಬ್ಯಾಟಿಂಗ್ನಲ್ಲಿ 7 ಸಿಕ್ಸರ್ ಮತ್ತು 8 ಬೌಂಡರಿ ಕೂಡ ಸೇರಿದ್ದವು. ಆದರೆ ಮೈಕೆಲ್ ಬ್ರೇಸ್ವೆಲ್ಗೆ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಯಾರೂ ಖರೀದಿಸಿರಲಿಲ್ಲ
ವಾಸ್ತವವಾಗಿ ಮೈಕೆಲ್ ಬ್ರೇಸ್‌ವೆಲ್ ಅವರನ್ನು ಮಿನಿ ಹರಾಜಿನಲ್ಲಿ ಯಾವ ತಂಡವೂ ಖರೀದಿಸಿರಲಿಲ್ಲ. ಆರ್ಸಿಬಿ ಕೂಡ ಈ ಆಟಗಾರನ ಮೇಲೆ ನಂಬಿಕೆ ಇಟ್ಟಿರಲಿಲ್ಲ. 1 ಕೋಟಿ ಮೂಲ ಬೆಲೆಯೊಂದಿಗೆ ಹಾರಜಿಗೆ ಎಂಟ್ರಿಕೊಟ್ಟಿದ ಬ್ರೇಸ್‌ವೆಲ್ ಖಾಲಿ ಕೈಯಲ್ಲಿ ವಾಪಸ್ಸಾಗಿದ್ದರು. ಆದರೆ, ವಿಲ್ ಜಾಕ್ಸ್ ಗಾಯಗೊಂಡಿದ್ದರಿಂದಾಗಿ ಈ ಕಿವೀಸ್ ಆಲ್ ರೌಂಡರ್ಗೆ ಆರ್ಸಿಬಿ ತಂಡದಲ್ಲಿ ಸ್ಥಾನ ಸಿಕ್ಕಿದೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಜೊತೆಗೆ ಬ್ರೇಸ್‌ವೆಲ್ ಅತ್ಯುತ್ತಮ ಆಫ್-ಸ್ಪಿನ್ ಕೂಡ ಮಾಡುತ್ತಾರೆ. ಇದುವರೆಗೆ ಬ್ರೇಸ್‌ವೆಲ್ 16 ಟಿ20 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 21 ವಿಕೆಟ್‌ಗಳನ್ನು ಪಡೆದಿದ್ದಾರೆ.
ಅಲ್ಲದೆ ಈ ವರ್ಷ ನ್ಯೂಜಿಲೆಂಡ್ ತಂಡ ಭಾರತಕ್ಕೆ ಏಕದಿನ ಪ್ರವಾಸ ಮಾಡಿದ್ದಾಗ ಇದೇ ಬ್ರೇಸ್‌ವೆಲ್ ಹೈದರಾಬಾದ್ ಏಕದಿನ ಪಂದ್ಯದಲ್ಲಿ 140 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದ್ದರು. ಯಾವುದೇ ಹಂತದಲ್ಲೂ ಪಂದ್ಯ ಬದಲಿಸುವ ತಾಕತ್ತಿರುವ ಮೈಕೆಲ್ ಬ್ರೇಸ್‌ವೆಲ್ ಆರ್ಸಿಬಿ ತಂಡಕ್ಕೆ ಯಾವ ರೀತಿ ನೆರವಾಗುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:43 pm, Fri, 31 March 23
