RCB vs RR: ಐಪಿಎಲ್ನಲ್ಲಿಂದು ಎರಡು ಪಂದ್ಯ: ರೋಚಕತೆ ಸೃಷ್ಟಿಸಿದ ಆರ್ಸಿಬಿ-ರಾಜಸ್ಥಾನ್ ನಡುವಣ ಕಾದಾಟ
KKR vs CSK, IPL 2023: ಐಪಿಎಲ್ನಲ್ಲಿಂದು ಎರಡು ಪಂದ್ಯ. ಮೊದಲ ಮ್ಯಾಚ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿ ಆಗಲಿದೆ. ದ್ವಿತೀಯ ಪಂದ್ಯದಲ್ಲಿ ಕೋಲ್ಕತ್ತಾ- ಚೆನ್ನೈ ಅನ್ನು ಎದುರಿಸಲಿದೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು (IPL 2023) ಎರಡು ಪಂದ್ಯಗಳು ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಮೊದಲ ಮ್ಯಾಚ್ನಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ (RCB vs RR) ಮುಖಾಮುಖಿ ಆಗಲಿದೆ. ದ್ವಿತೀಯ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದ್ದು ನಿತೀಶ್ ರಾಣ ಅವರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (KKR vs CSK) ಅನ್ನು ಎದುರಿಸಲಿದೆ.
ಆರ್ಸಿಬಿ-ಆರ್ಆರ್:
ರಾಯಲ್ ಚಾಲೆಂಜರ್ಸ್ ತಂಡದ ಬ್ಯಾಟಿಂಗ್ ಬಲ ಮೂವರೇ. ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್, ಇವರು ಬೇಗನೆ ನಿರ್ಗಮಿಸಿದರೆ ತಂಡದ ಮೊತ್ತ 100 ದಾಟುವುದು ಅನುಮಾನ. ದಿನೇಶ್ ಕಾರ್ತಿಕ್ ಬ್ಯಾಟ್ನಿಂದ ರನ್ ಬರುತ್ತಿಲ್ಲ. ಮಹಿಪಾಲ್ ಲುಮ್ರೂರ್, ಶಹ್ಬಾಜ್ ಅಹ್ಮದ್ ಕಡೆಯಿಂದ ಇನ್ನಷ್ಟು ಕೊಡುಗೆ ಬರಬೇಕಿದೆ. ಇನ್ನು ಮೊಹಮ್ಮದ್ ಸಿರಾಜ್ ಬಿಟ್ಟರೆ ಮತ್ಯಾವ ಬೌಲರ್ ಕೂಡ ಮಾರಕವಾಗಿ ಗೋಚರಿಸುತ್ತಿಲ್ಲ. ಕಳೆದ ಪಂದ್ಯದಲ್ಲಿ ಬೌಲರ್ಗಳು ಕಮ್ಬ್ಯಾಕ್ ಮಾಡಿದ್ದರೂ ಇನ್ನಷ್ಟು ಲಯಕಂಡುಕೊಳ್ಳಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಇಂದು ಬದಲಾವಣೆಯಾದರೂ ಅಚ್ಚರಿ ಪಡಬೇಕಿಲ್ಲ. ಜೋಶ್ ಹ್ಯಾಜ್ಲೆವುಡ್ ಪ್ಲೇಯಿಂಗ್ ಇಲೆವೆನ್ ಕಾಣಿಸಿಕೊಳ್ಳುತ್ತಾರ ಎಂಬುದು ನೋಡಬೇಕಿದೆ.
MS Dhoni: ಒಬ್ಬರಲ್ಲ, ಇಬ್ಬರಲ್ಲ: ಪಂದ್ಯದ ಬಳಿಕ 11 ಎಸ್ಆರ್ಹೆಚ್ ಆಟಗಾರರಿಗೆ ಧೋನಿಯಿಂದ ಕ್ಲಾಸ್
ರಾಜಸ್ಥಾನ್ ತಂಡ ಟೇಬಲ್ ಟಾಪ್ನಲ್ಲಿದೆ. ಆಡಿರುವ ಆರು ಪಂದ್ಯಗಳ ಪೈಕಿ ಎರಡರಲ್ಲಿ ಮಾತ್ರ ಸೋತಿದೆ. ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್, ಶಿಮ್ರೋನ್ ಹೆಟ್ಮೇರ್ ಪ್ರಮುಖ ಬ್ಯಾಟಿಂಗ್ ಅಸ್ತ್ರ. ಜೇಸನ್ ಹೋಲ್ಡರ್ ಮತ್ತು ಆರ್. ಅಶ್ವಿನ್ ಆಲ್ರೌಂಡ್ ಪ್ರದರ್ಶನ ತೋರಬೇಕಿದೆ. ಯುಜ್ವೇಂದ್ರ ಚಹಲ್ ವಿಕೆಟ್ ಟೇಕಿಂಗ್ ಬೌಲರ್ ಆಗಿ ಗುರುತಿಸಿಕೊಂಡಿದ್ದರೆ, ಸಂದೀಪ್ ಶರ್ಮಾ, ಕುಲ್ದೀಪ್ ಸೇನ್, ಆ್ಯಡಂ ಝಂಪಾ ಸಾಥ್ ನೀಡುತ್ತಿದ್ದಾರೆ.
ಕೆಕೆಆರ್-ಸಿಎಸ್ಕೆ:
ಕೆಕೆಆರ್ ಆಡಿದ ಆರು ಪಂದ್ಯಗಳ ಪೈಕಿ ನಾಲ್ಕರಲ್ಲಿ ಸೋಲು ಎರಡರಲ್ಲಿ ಗೆಲುವು ಕಂಡು ಎಂಟನೇ ಸ್ಥಾನದಲ್ಲಿದೆ. ಕೋಲ್ಕತ್ತಾ ಹ್ಯಾಟ್ರಿಕ್ ಸೋಲು ಕಂಡರೂ ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದೆ. ನಾಯಕ ನಿತೀಶ್ ರಾಣ ಹಾಗೂ ರಿಂಕು ಸಿಂಗ್ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಎನ್. ಜಗದೀಸನ್, ವೆಂಕಟೇಶ್ ಅಯ್ಯರ್ ಕೂಡ ಫಾರ್ಮ್ನಲ್ಲಿದ್ದಾರೆ. ರೆಹ್ಮಾನುಲ್ಲ ಗುರ್ಬಜ್, ಶಾರ್ದೂಲ್ ಥಾಕೂರ್ ಬ್ಯಾಟಿಂಗ್ನಲ್ಲಿ ಬಲ ತುಂಬಿದರೆ ತಂಡದ ಮೊತ್ತ ಮತ್ತೊಮ್ಮೆ 200+ ಆಗುವುದು ಖಚಿತ. ಆಂಡ್ರೆ ರಸೆಲ್ ಅಬ್ಬರಿಸಬೇಕಿದೆ. ಸುನಿಲ್ ನರೈನ್, ವರುಣ್ ಚಕ್ರವರ್ತಿ, ಲೂಕಿ ಫರ್ಗುಸನ್, ಉಮೇಶ್ ಯಾದವ್, ಸುಯೇಶ್ ಶರ್ಮಾ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ.
ಸಿಎಸ್ಕೆ ತಂಡ ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ರುತುರಾಯ್ ಗಾಯಕ್ವಾಡ್, ಡೆವೋನ್ ಕಾನ್ವೆ ಭರ್ಜರಿ ಫಾರ್ಮ್ನಲ್ಲಿದ್ದು ಅತ್ಯುತ್ತಮ ಆರಂಭ ಒದಗಿಸುತ್ತಿದ್ದಾರೆ. ಅಜಿಂಕ್ಯಾ ರಹಾನೆ ಕೂಡ ಅತ್ಯುತ್ತಮ ಬ್ಯಾಟಿಂಗ್ ನಡೆಸುತ್ತಿದ್ದು, ಶಿವಂ ದುಬೆ ಸ್ಫೋಟಕ ಆಟದ ಮೂಲಕ ಗಮನ ಸೆಳೆದಿದ್ದಾರೆ. ಅಂಬಟಿ ರಾಯುಡು ಹಾಗೂ ಮೊಯೀನ್ ಅಲಿ ಕಡೆಯಿಂದ ನಿರೀಕ್ಷೆಗೆ ತಕ್ಕ ಆಟ ಬರುತ್ತಿಲ್ಲ. ಧೋನಿ ಹಾಗೂ ಜಡೇಜಾ ಫಿನಿಶಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಬೌಲಿಂಗ್ನಲ್ಲಿ ಸಿಎಸ್ಕೆ ಪರ ತುಶಾರ್ ದೇಶ್ಪಾಂಡೆ, ಮಹೀಶಾ ತೀಕ್ಷಣ, ಮತೀಶಾ ಪತಿರಾನ, ಆಕಾಶ್ ಸಿಂಗ್ ಇದ್ದು ಜಡೇಜಾ, ಅಲಿ ಸಾಥ್ ನೀಡುತ್ತಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ