IPL 2024: ಚೆನ್ನೈ ವಿರುದ್ಧ ರಾಜಸ್ಥಾನ್ ಕಳಪೆ ಬ್ಯಾಟಿಂಗ್; ಎಕ್ಸ್​ನಲ್ಲಿ ಟ್ರೆಂಡ್ ಆಯ್ತ ‘ಫಿಕ್ಸಿಂಗ್’ ಹ್ಯಾಷ್​ಟ್ಯಾಗ್..!

IPL 2024: ಜಯದ ನಡುವೆ ಉಭಯ ತಂಡಗಳಿಂದ ಕಂಡುಬಂದ ಪ್ರದರ್ಶನಕ್ಕೆ ಕ್ರಿಕೆಟ್ ಅಭಿಮಾನಿಗಳು ಬೇರೆಯದ್ದೇ ಬಣ್ಣ ಹಚ್ಚುತ್ತಿದ್ದು, ಈ ಪಂದ್ಯ ಪೂರ್ವನಿಯೋಜಿತವಾಗಿದ್ದು, ಫಿಕ್ಸಿಂಗ್ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಹೀಗಾಗಿ ಎಕ್ಸ್​ನಲ್ಲಿ ಫಿಕ್ಸಿಂಗ್ ಹಾಗೂ ಸ್ಕ್ರಿಪ್ಟೆಡ್ ಹ್ಯಾಷ್​ಟ್ಯಾಗ್​ಗಳು ಟ್ರೆಂಡಿಂಗ್​ನಲ್ಲಿವೆ.

IPL 2024: ಚೆನ್ನೈ ವಿರುದ್ಧ ರಾಜಸ್ಥಾನ್ ಕಳಪೆ ಬ್ಯಾಟಿಂಗ್; ಎಕ್ಸ್​ನಲ್ಲಿ ಟ್ರೆಂಡ್ ಆಯ್ತ ‘ಫಿಕ್ಸಿಂಗ್’ ಹ್ಯಾಷ್​ಟ್ಯಾಗ್..!
ರಾಜಸ್ಥಾನ್- ಚೆನ್ನೈ

Updated on: May 12, 2024 | 9:25 PM

ಐಪಿಎಲ್ 2024 (IPL 2024) ರ 61 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲ್ಲಲೇಬೇಕಾದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು (CSK vs RR) ಐದು ವಿಕೆಟ್​ಗಳಿಂದ ಮಣಿಸಿದೆ. ಇದರೊಂದಿಗೆ ಲೀಗ್​​ನಲ್ಲಿ 7 ಗೆಲುವು ಪಡೆದು 14 ಅಂಕ ಸಂಪಾದಿಸಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಇತ್ತ ರಾಜಸ್ಥಾನ್ ತಂಡ ಸತತ ಮೂರನೇ ಸೋಲಿನೊಂದಿಗೆ ಪಾಯಿಂಟ್​ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಉಳಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 141 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಚೆನ್ನೈ 18.2 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು ಜಯ ದಾಖಲಿಸಿತು. ಈ ಜಯದ ನಡುವೆ ಉಭಯ ತಂಡಗಳಿಂದ ಕಂಡುಬಂದ ಪ್ರದರ್ಶನಕ್ಕೆ ಕ್ರಿಕೆಟ್ ಅಭಿಮಾನಿಗಳು ಬೇರೆಯದ್ದೇ ಬಣ್ಣ ಹಚ್ಚುತ್ತಿದ್ದು, ಈ ಪಂದ್ಯ ಪೂರ್ವನಿಯೋಜಿತವಾಗಿದ್ದು, ಫಿಕ್ಸಿಂಗ್ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಹೀಗಾಗಿ ಎಕ್ಸ್​ನಲ್ಲಿ ಫಿಕ್ಸಿಂಗ್ (Fixing) ಹಾಗೂ ಸ್ಕ್ರಿಪ್ಟೆಡ್ (scripted) ಹ್ಯಾಷ್​ಟ್ಯಾಗ್​ಗಳು ಟ್ರೆಂಡಿಂಗ್​ನಲ್ಲಿವೆ.

ಆಮೆಗತಿಯ ಬ್ಯಾಟಿಂಗ್

ಈ ಎರಡೂ ಹ್ಯಾಷ್​ಟ್ಯಾಗ್​ಗಳು ಟ್ರೆಂಡಿಂಗ್ ಆಗಲು ಹಲವು ಕಾರಣಗಳು ಇವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಪಾಳಯದಿಂದ ಕಳೆದ 12 ಪಂದ್ಯಗಳಲ್ಲಿ ಕಂಡುಬರದ ಕಳಪೆ ಬ್ಯಾಟಿಂಗ್ ಪ್ರದರ್ಶನ ಕಂಡುಬಂತು. ಸ್ಫೋಟಕ ಆರಂಭಕ್ಕೆ ಹೆಸರುವಾಸಿಯಾಗಿರುವ ರಾಜಸ್ಥಾನ್ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್​ಗೆ ಈ ಪಂದ್ಯದಲ್ಲಿ ಮುಕ್ತವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ.

CSK vs RR Highlights, IPL 2024: ರಾಜಸ್ಥಾನ್ ಮಣಿಸಿದ ಚೆನ್ನೈ

ಯಾರಿಂದಲೂ ಸ್ಫೋಟಕ ಬ್ಯಾಟಿಂಗ್ ಕಾಣಲಿಲ್ಲ

ಯಶಸ್ವಿ ಜೈಸ್ವಾಲ್ 21 ಎಸೆತಗಳಲ್ಲಿ 24 ರನ್ ಗಳಿಸಿದರೆ, ಜೋಸ್ ಬಟ್ಲರ್ 25 ಎಸೆತಗಳಲ್ಲಿ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಪ್ರಮುಖ ಬೌಲರ್​ಗಳ ಅಲಭ್ಯತೆಯ ನಡುವೆಯೂ ಸಿಎಸ್​ಕೆ, ಕೊನೆಯ ಓವರ್​ವರೆಗೂ ರಾಜಸ್ಥಾನ್ ರಾಯಲ್ಸ್ ಬ್ಯಾಟರ್‌ಗಳು ಬಿಗ್ ಶಾಟ್ ಆಡದಂತೆ ಕಟ್ಟಿಹಾಕಿತು. ನಾಯಕ ಸ್ಯಾಮ್ಸನ್ ಕೂಡ 19 ಎಸೆತಗಳಲ್ಲಿ 15 ರನ್ ಗಳಿಸಲಷ್ಟೇ ಶಕ್ತರಾದರು. ರಿಯಾನ್ ಪರಾಗ್ (47*) ಮತ್ತು ಧ್ರುವ್ ಜುರೆಲ್ 28 ರ ನಡುವಿನ 29 ಎಸೆತಗಳಲ್ಲಿ 40 ರನ್ ಜೊತೆಯಾಟವು ರಾಜಸ್ಥಾನ್ ತಂಡವನ್ನು 150 ರ ಸಮೀಪಕ್ಕೆ ಕೊಂಡೊಯ್ದಿತು.

45 ಡಾಟ್ ಬಾಲ್ಸ್

ಸಿಎಸ್​ಕೆ ಪರ ಬೌಲ್ ಮಾಡಿದ ಐವರು ಬೌಲರ್‌ಗಳು 8ಕ್ಕಿಂತ ಕಡಿಮೆ ಎಕಾನಮಿ ರೇಟ್‌ನೊಂದಿಗೆ ಬೌಲ್ ಮಾಡಿದರು. ಇಡೀ ರಾಜಸ್ಥಾನ್ ಇನ್ನಿಂಗ್ಸ್​ನಲ್ಲಿ ಕೇವಲ ಏಳು ಬೌಂಡರಿ ಮತ್ತು ಆರು ಸಿಕ್ಸರ್‌ ಮಾತ್ರ ಸಿಡಿದವು. ಆದರೆ ಡೆಲ್ಲಿ ವಿರುದ್ಧದ ಕೊನೆಯ ಪಂದ್ಯದಲ್ಲಿ ಸ್ಯಾಮ್ಸನ್ ಒಬ್ಬರೇ ಎಂಟು ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಅಲ್ಲದೆ ಆಡಿದ 120 ಎಸೆತಗಳಲ್ಲಿ ರಾಜಸ್ಥಾನ್ 45 ಎಸೆತಗಳಲ್ಲಿ ಯಾವುದೇ ರನ್ ಕಲೆಹಾಕಲಿಲ್ಲ.

ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್​ ರೇಸ್​ನಲ್ಲಿ ಉಳಿಯಲು ಈ ಪಂದ್ಯ ಅತ್ಯವಶ್ಯಕವಾಗಿರುವ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಈ ಪಂದ್ಯವನ್ನು ಫಿಕ್ಸಿಂಗ್ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:40 pm, Sun, 12 May 24